ಲಖನೌ: ಉತ್ತರ ಪ್ರದೇಶದ ಔರೈಯಾ ಜಿಲ್ಲೆಯಲ್ಲಿ ಪೊಲೀಸ್ ವರಿಷ್ಠಾಧಿಕಾರಿಯ (ಎಸ್.ಪಿ.) ಕುರ್ಚಿಯ ಮೇಲೆ ಕುಳಿತು ರೀಲ್ ಮಾಡಿ ಇನ್‌ಸ್ಟಾಗ್ರಾಮ್‌ನಲ್ಲಿ ಅಪ್‌ಲೋಡ್ ಮಾಡಿದ್ದ ಮಹಿಳೆಯೊಬ್ಬರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಮಹಿಳೆಯ ಹೆಸರು ತಕ್ಷಣಕ್ಕೆ ತಿಳಿದುಬಂದಿಲ್ಲ.
ಮಹಿಳೆಯ ಮಾವ ಸಬ್ ಇನ್‌ಸ್ಪೆಪೆಕ್ಟರ್ ಆಗಿದ್ದು, ಅವರು ನಿವೃತ್ತರಾದಾಗ ಬೀಳ್ಕೊಡುಗೆ ಸಮಾರಂಭ ಮಂಗಳವಾರ ದಿಬಿಯಾಪುರ ಸಭಾಂಗಣದಲ್ಲಿ ನಡೆದಿತ್ತು. ಈ ವೇಳೆ ಘಟನೆ ನಡೆದಿದೆ ಎಂದು ವರದಿಗಳು ಹೇಳಿವೆ.
ಅಧಿಕಾರಿಗಳು ಸ್ಥಳದಿಂದ ತೆರಳಿದ ನಂತರ ಕಚೇರಿ ಪ್ರವೇಶಿಸಿದ್ದ ಮಹಿಳೆ, ಎಸ್.ಪಿಯ ಕುರ್ಚಿಯಲ್ಲಿ ಕುಳಿತು, ತಿರುಗುತ್ತಾ ರೀಲ್ ಮಾಡಿದ್ದರು. ಅದು ವ್ಯಾಪಕವಾಗಿ ಹರಿದಾಡುತ್ತಿದ್ದಂತೆ ಎಸ್.ಪಿ. ಅಭಿಷೇಕ್ ಭಾರ್ತಿ ಅವರು ಮಹಿಳೆಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.
ಈ ನಡುವೆ, ಮಹಿಳೆ ಮತ್ತೊಂದು ವಿಡಿಯೊವನ್ನು ಪೋಸ್ಟ್ ಮಾಡಿ, ಘಟನೆ ಬಗ್ಗೆ ಕೈ ಮುಗಿದು ಕ್ಷಮೆ ಕೇಳಿದ್ದಾರೆ. ಅಲ್ಲದೆ, ವಿವಾದಾತ್ಮಕ ವಿಡಿಯೊವನ್ನು ಅವರು ಅಳಿಸಿ ಹಾಕಿದ್ದಾರೆ ಎಂದು ವರದಿಗಳು ಹೇಳಿವೆ. ಮಹಿಳೆ ಕ್ಷಮೆ ಕೇಳಿದ್ದರಿಂದ ಅವರಿಗೆ ಎಚ್ಚರಿಕೆ ನೀಡಿ ಕಳುಹಿಸಲು ಪೊಲೀಸರು ನಿರ್ಧರಿಸಿದ್ದಾರೆ ಎಂದು ಮೂಲಗಳು ಹೇಳಿವೆ.

