ಬದಿಯಡ್ಕ: ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರನ್ನು ಭಾನುವಾರ ಸಂಜೆ ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠಕ್ಕೆ ಭೇಟಿ ನೀಡಿದ್ದು, ಪೂರ್ಣಕುಂಭ ಸ್ವಾಗತ ನೀಡಿ ಬರಮಾಡಿಕೊಳ್ಳಲಾಯಿತು.
ಸೋಮವಾರ ಪ್ರಾತಃಕಾಲ ಶ್ರೀಪೂಜೆ ನಡೆಯಿತು. ಶಾಲಾ ನಿರ್ದೇಶಕ ಜಯಪ್ರಕಾಶ ಪಜಿಲ ದಂಪತಿಗಳು ಶ್ರೀಗುರು ಬಿಕ್ಷಾಸೇವೆ ನೆರವೇರಿಸಿದರು. ಇತ್ತೀಚೆಗೆ ಉದ್ಘಾಟನೆಗೊಂಡ ಮಕ್ಕಳ ನಿತ್ಯಭೋಜನ ವ್ಯವಸ್ಥೆಗೆ ಅನುಕೂಲಕರವಾಗಿರುವಂತಹ ಆಧುನಿಕ ರೀತಿಯ ಅನ್ನಮಯೀ ಕಟ್ಟಡವನ್ನು ವೀಕ್ಷಿಸಿ ಆಶೀರ್ಮಂತ್ರಾಕ್ಷತೆಯನ್ನು ನೀಡಿದರು. ಮಧ್ಯಾಹ್ನ ಮಕ್ಕಳಿಗೆ ಉಣಬಡಿಸುವ ಭೋಜನ ವ್ಯವಸ್ಥೆಯ ಬಗ್ಗೆ ತಿಳಿದುಕೊಂಡರು. ಶಾಲಾ ಕಟ್ಟಡಗಳನ್ನು ವೀಕ್ಷಿಸಿ ನೂತನ ಆಡಳಿತ ಮಂಡಳಿಯ ಸದಸ್ಯರನ್ನು ಆಶೀರ್ವದಿಸಿದರು. ಶಾಲೆಯು ದೈನಂದಿನವಾಗಿ ಕಾರ್ಯಾಚರಿಸುತ್ತಿರುವ ವಿಚಾರಗಳನ್ನು ತಿಳಿದು ಸೂಕ್ತ ಮಾರ್ಗದರ್ಶನವನ್ನಿತ್ತರು. ಬಳಿಕ ಶ್ರೀಗಳು ಗುರುವಾಯೂರಿಗೆ ತೆರಳಿದರು.

