ಬದಿಯಡ್ಕ: ಇಂದು ನಮ್ಮ ಬದಿಯಡ್ಕ ಪೇಟೆಯ ಇತಿಹಾಸದಲ್ಲಿ ಒಂದು ಅತ್ಯಂತ ಶ್ಲಾಘನೀಯ ಮತ್ತು ಮಾದರಿ ಕಾರ್ಯಕ್ರಮಕ್ಕೆ ನಾವು ಸಾಕ್ಷಿಯಾಗುತ್ತಿದ್ದೇವೆ. ನಮ್ಮ ಹೆಮ್ಮೆಯ ಬದಿಯಡ್ಕ ಪೇಟೆಯನ್ನು ಸುಂದರಗೊಳಿಸುವ ಸದುದ್ದೇಶದಿಂದ, ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿಯ ಬದಿಯಡ್ಕ ಘಟಕ ಹಮ್ಮಿಕೊಂಡಿರುವ ಈ ಅಲಂಕಾರಿಕ ಗಿಡಗಳನ್ನು ನೆಡುವ ಕಾರ್ಯಕ್ರಮ ನಿಜಕ್ಕೂ ಹೆಮ್ಮೆ ತರುವಂತದ್ದು. ಈ ಉತ್ತಮ ಕಾರ್ಯವನ್ನು ಉದ್ಘಾಟಿಸುವ ಅವಕಾಶ ನನಗೆ ಲಭಿಸಿರುವುದು ಸೌಭಾಗ್ಯ ಎಂದು ಬದಿಯಡ್ಕ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಂಕರ ಡಿ.ಹೇಳಿದರು.
ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಬದಿಯಡ್ಕ ಘಟಕದ ನೇತೃತ್ವದಲ್ಲಿ ಬದಿಯಡ್ಕ ಪೋಲೀಸ್ ಠಾಣೆಯಿಂದ ಮೇಲಿನ ಪೇಟೆಯ ತನಕ ಅಲಂಕಾರಿಕ ಗಿಡಗಳನ್ನು ನೆಡುವ ಕಾರ್ಯಕ್ಕೆ ಸೋಮವಾರ ಚಾಲನೆಯನ್ನು ನೀಡಿ ಅವರು ಮಾತನಾಡಿದರು.
ಸಾಮಾನ್ಯವಾಗಿ ವ್ಯಾಪಾರಸ್ಥರು ಅಂದರೆ ಕೇವಲ ಲಾಭ-ನಷ್ಟ, ವ್ಯಾಪಾರ-ವಹಿವಾಟುಗಳಿಗಷ್ಟೇ ಸೀಮಿತ ಎಂದು ಕೆಲವರು ಭಾವಿಸುತ್ತಾರೆ. ಆದರೆ, ತಾವಿರುವ ಊರಿನ ಪರಿಸರ, ಅದರ ಅಂದ ಹಾಗೂ ಅಭಿವೃದ್ಧಿಯಲ್ಲೂ ನಮಗೂ ಅಷ್ಟೇ ಸಾಮಾಜಿಕ ಜವಾಬ್ದಾರಿ ಇದೆ ಎಂಬುದನ್ನು ನಮ್ಮ ಬದಿಯಡ್ಕದ ವ್ಯಾಪಾರಿ ಬಂಧುಗಳು ಇಂದು ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ. ರಸ್ತೆಯ ಮಧ್ಯದ ಬದಿಯಲ್ಲಿ ಈ ಹಸಿರು ಸಿರಿಯನ್ನು ಮೂಡಿಸುತ್ತಿರುವುದು ಕೇವಲ ಪೇಟೆಯ ಅಂದವನ್ನು ಹೆಚ್ಚಿಸುವುದಷ್ಟೇ ಅಲ್ಲ, ನಮ್ಮ ಊರಿನ ಪರಿಸರ ಪ್ರೇಮಕ್ಕೂ ಹಿಡಿದ ಕೈಗನ್ನಡಿಯಾಗಿದೆ ಎಂದರು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಅಶ್ವಿನಿ ಕೆ.ಎಂ., ಸ್ಥಾಯಿ ಸಮಿತಿ ಅಧ್ಯಕ್ಷರುಗಳಾದ ಹಮೀದ್ ಕಿಡಂಜಿ, ಅವಿನಾಶ್ ರೈ, ಸದಸ್ಯರುಗಳಾದ ಬಾಲಕೃಷ್ಣ ಶೆಟ್ಟಿ ಕೆ., ಶ್ಯಾಮ ಪ್ರಸಾದ್ ಮಾನ್ಯ, ಮಧುಸೂದನ ಕಂಗಿಲ, ಶ್ಯಾಮ ಪ್ರಸಾದ್ ಸರಳಿ ಉಪಸ್ಥಿತರಿದ್ದರು. ಜಿಲ್ಲಾ ಕಾರ್ಯದರ್ಶಿ ಕುಂಜಾರ್ ಮುಹಮ್ಮದ್ ಹಾಜಿ, ಘಟಕದ ಅಧ್ಯಕ್ಷ ನರೇಂದ್ರ ಬಿ.ಎನ್., ಪ್ರಧಾನ ಕಾರ್ಯದರ್ಶಿ ರವಿ ನವಶಕ್ತಿ, ಉಪಾಧ್ಯಕ್ಷರುಗಳಾದ ರಾಜು ಸ್ಟೀಫನ್, ಹಮೀದ್ ಬಾರಕ, ಕಾರ್ಯದರ್ಶಿಗಳಾದ ಉದಯ ಶಂಕರ್, ವಿಶ್ವನಾಥನ್, ಮಹಿಳಾ ವಿಭಾಗದ ಅಧ್ಯಕ್ಷೆ ಜಯಂತಿ, ಕಾರ್ಯದರ್ಶಿ ಕೃಪಾ, ಪೂರ್ಣಿಮಾ ಗಣೇಶ್, ಅಖಿಲೇಶ್, ಜಗನ್ನಾಥ ಶೆಟ್ಟಿ, ಹಂಸ, ರವಿ ಸಿ.ಎಚ್. ಮೊದಲಾದವರು ನೇತೃತ್ವ ನೀಡಿದರು.

.jpg)
.jpg)
