ನವದೆಹಲಿ: ಉಪವಾಸ ನಿರತ ಸಾಮಾಜಿಕ ಹೋರಾಟಗಾರ ಸೊನಮ್ ವಾಂಗ್ಚೂಕ್ ಅವರನ್ನು ದೆಹಲಿ ಪೊಲೀಸರು ಆಸ್ಪತ್ರೆಗೆ ದಾಖಲಿಸಿದ ಬೆನ್ನಲ್ಲೇ, ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ಸಂಸ್ಥಾಪಕ ಅಭಿಜಿತ್ ದೀಪ್ಕೆ ಅನಿರ್ದಿಷ್ಟಾವಧಿ ಉಪವಾಸ ಆರಂಭಿಸಿದ್ದಾರೆ.
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಸೇರಿದಂತೆ ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ಖಂಡಿಸಿ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಸಿಜೆಪಿ, ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸುತ್ತಿದೆ.
ಇದಕ್ಕೆ ಬೆಂಬಲ ಸೂಚಿಸಿದ್ದ ಪರಿಸರವಾದಿ ಮತ್ತು ಸಾಮಾಜಿಕ ಕಾರ್ಯಕರ್ತ ಸೊನಮ್ ವಾಂಗ್ಚೂಕ್ ಜೂನ್ 28ರಿಂದ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.
ವಾಂಗ್ಚೂಕ್ ಅವರ ಆರೋಗ್ಯ ಹದಗೆಡುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದ್ದ ದೆಹಲಿ ಹೈಕೋರ್ಟ್, ನಿಯಮಿತವಾಗಿ ಆರೋಗ್ಯ ಮೇಲ್ವಿಚಾರಣೆ ಮಾಡುವಂತೆ ಮತ್ತು ಅಗತ್ಯವಿದ್ದರೆ ವೈದ್ಯಕೀಯ ನೆರವು ನೀಡುವಂತೆ ಕೇಂದ್ರ ಮತ್ತು ದೆಹಲಿ ಸರ್ಕಾರಕ್ಕೆ ಸೂಚಿಸಿತ್ತು.
ಉಪವಾಸ ನಿರತ ಸೊನಮ್ ವಾಂಗ್ಚೂಕ್ರನ್ನು ಆಸ್ಪತ್ರೆಗೆ ಕರೆದೊಯ್ದ ದೆಹಲಿ ಪೊಲೀಸರುಏನೇ ಆದರೂ ಜುಲೈ 20ರವರೆಗೆ ಬದುಕಿರುತ್ತೇನೆ.. ಉಪವಾಸ ನಿರತ ಸೊನಮ್ ವಾಂಗ್ಚೂಕ್
ಹೈಕೋರ್ಟ್ ನಿರ್ದೇಶನದಂತೆ ವಾಂಗ್ಚೂಕ್ ಅವರನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಅಗತ್ಯ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ ಎಂದು ದೆಹಲಿ ಉಪ ಪೊಲೀಸ್ ಕಮಿಷನರ್ (ಡಿಸಿಪಿ) ಸಚಿನ್ ಶರ್ಮಾ ತಿಳಿಸಿದ್ದಾರೆ.
ಅನುರಾಗ್ ಕುಮಾರ್ ಅವರು ದೆಹಲಿ ಪೊಲೀಸ್ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡ ಒಂದು ದಿನದ ನಂತರ ಈ ಬೆಳವಣಿಗೆಯಾಗಿದೆ. ಇದಕ್ಕೂ ಮೊದಲು ಸತೀಶ್ ಗೋಲ್ಚಾ ದೆಹಲಿ ಪೊಲೀಸ್ ಆಯುಕ್ತರಾಗಿದ್ದರು.
ವಾಂಗ್ಚೂಕ್ ಅವರನ್ನು ಬಲವಂತವಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಆರೋಪಿಸಿರುವ ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ, ಅನಿರ್ದಿಷ್ಟಾವಧಿಯವರೆಗೆ ಉಪವಾಸ ಸತ್ಯಾಗ್ರಹ ಆರಂಭಿಸುತ್ತಿರುವುದಾಗಿ ಘೋಷಿಸಿದ್ದಾರೆ.

