ನವದೆಹಲಿ: ಪರೀಕ್ಷಾ ಅಕ್ರಮ, ಪದೇ ಪದೇ ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಕ್ಷವು (ಸಿಜೆಪಿ) ದೆಹಲಿಯ ಜಂತರ್ಮಂತರ್ನಲ್ಲಿ 21 ದಿನಗಳಿಂದ ನಡೆಸುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ.
ಶಿಕ್ಷಣ ವ್ಯವಸ್ಥೆಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದಂತೆ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಹಾಗೂ ಸರ್ಕಾರದ ಉತ್ತರದಾಯಿತ್ವಕ್ಕಾಗಿ ಆಗ್ರಹಿಸಿದ್ದ ಸಿಜೆಪಿ ಇದೀಗ, ಪ್ರಧಾನಿ ನರೇಂದ್ರ ಮೋದಿ ಅವರೂ ತಮ್ಮ ಸ್ಥಾನ ತ್ಯಜಿಸಬೇಕು ಎಂಬ ಹೊಸ ಬೇಡಿಕೆಯನ್ನು ಮುಂದಿಟ್ಟಿದೆ.
ಸಿಜೆಪಿ ಪ್ರತಿಭಟನೆಯು ಜಂತರ್ ಮಂತರ್ನಲ್ಲಿ ಜೂನ್ 20ರಂದು ಆರಂಭವಾಗಿದೆ. ಪರಿಸರ ಹೋರಾಟಗಾರ ಸೊನಮ್ ವಾಂಗ್ಚೂಕ್ ಹಾಗೂ ಕೆಲವು ವಿದ್ಯಾರ್ಥಿಗಳು ಜೂನ್ 28ರಿಂದ ಅನಿರ್ದಿಷ್ಟಾವಧಿಯವರೆಗೆ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.
ವಾಂಗ್ಚೂಕ್ ಅವರ ಆರೋಗ್ಯ ಹದಗೆಡುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದ್ದ ದೆಹಲಿ ಹೈಕೋರ್ಟ್, ನಿಯಮಿತವಾಗಿ ಆರೋಗ್ಯ ಮೇಲ್ವಿಚಾರಣೆ ಮಾಡುವಂತೆ ಮತ್ತು ಅಗತ್ಯವಿದ್ದರೆ ವೈದ್ಯಕೀಯ ನೆರವು ನೀಡುವಂತೆ ಕೇಂದ್ರ ಮತ್ತು ದೆಹಲಿ ಸರ್ಕಾರಕ್ಕೆ ಸೂಚಿಸಿತ್ತು. ಅದರಂತೆ, ವಾಂಗ್ಚೂಕ್ ಅವರನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಅಗತ್ಯ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ ಎಂದು ದೆಹಲಿ ಉಪ ಪೊಲೀಸ್ ಕಮಿಷನರ್ (ಡಿಸಿಪಿ) ಸಚಿನ್ ಶರ್ಮಾ ತಿಳಿಸಿದ್ದಾರೆ.
ವಾಂಗ್ಚೂಕ್ ಅವರನ್ನು ಬಲವಂತವಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಆರೋಪಿಸಿರುವ ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ, ಅನಿರ್ದಿಷ್ಟಾವಧಿಯವರೆಗೆ ಉಪವಾಸ ಸತ್ಯಾಗ್ರಹ ಆರಂಭಿಸುತ್ತಿರುವುದಾಗಿ ಘೋಷಿಸಿದ್ದಾರೆ.
ಉಪವಾಸ ನಿರತ ಸೊನಮ್ ವಾಂಗ್ಚೂಕ್ರನ್ನು ಆಸ್ಪತ್ರೆಗೆ ಕರೆದೊಯ್ದ ದೆಹಲಿ ಪೊಲೀಸರುವಾಂಗ್ಚೂಕ್ ಆಸ್ಪತ್ರೆಗೆ: ಜಂತರ್ ಮಂತರ್ನಲ್ಲೇ ಉಳಿದ ಉಪವಾಸ ನಿರತ ವಿದ್ಯಾರ್ಥಿಗಳು
ಈ ಬೆಳವಣಿಗೆ ಬೆನ್ನಲ್ಲೇ, ಎಕ್ಸ್ನಲ್ಲಿರುವ 'ಕಾಕ್ರೋಚ್ ಈಸ್ ಬ್ಯಾಕ್' ಖಾತೆಯಲ್ಲಿ 'ಪ್ರಧಾನಿ ರಾಜೀನಾಮೆ ನೀಡಬೇಕು' ಎಂಬ ಪೋಸ್ಟ್ ಹಾಕಲಾಗಿದೆ. ಬೆಳಿಗ್ಗೆ 8.56ಕ್ಕೆ ಪ್ರಕಟವಾಗಿರುವ ಈ ಪೋಸ್ಟ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈವರೆಗೆ 9 ಸಾವಿರಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ. ಎರಡು ಸಾವಿರಕ್ಕೂ ಹೆಚ್ಚು ಜನರು ಮರುಹಂಚಿಕೆ ಮಾಡಿಕೊಂಡಿದ್ದಾರೆ. ಹಲವರು, ಇದನ್ನು ಸಮರ್ಥಿಸಿಕೊಂಡಿದ್ದರೆ, ಮತ್ತಷ್ಟು ಮಂದಿ ತೀವ್ರವಾಗಿ ವಿರೋಧಿಸಿದ್ದಾರೆ.
ಪ್ರತಿಭಟನೆ ಮುಂದುವರಿಸಿದ ವಿದ್ಯಾರ್ಥಿಗಳು
ವಾಂಗ್ಚೂಕ್ ಜೊತೆ ಜೂನ್ 28ರಂದು ಉಪವಾಸ ಶುರು ಮಾಡಿದ್ದ ಅಖಿಲ ಭಾರತ ವಿದ್ಯಾರ್ಥಿ ಸಂಘಟನೆಯ ನೇಹಾ, ಆಮೆನ್ ಮತ್ತು ಮನೀಷ್ ಅವರು ಜಂತರ್ ಮಂತರ್ನಲ್ಲೇ ಉಳಿದು, ಪ್ರತಿಭಟನೆ ಮುಂದುವರಿಸಿದ್ದಾರೆ.

