ಕರೂರು: ಕಳೆದ ವರ್ಷ ಕರೂರಿನಲ್ಲಿ ಸಂಭವಿಸಿದ ಕಾಲ್ತುಳಿತ ದುರಂತವನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳಲು ಹಿಂದಿನ ಡಿಎಂಕೆ ಆಡಳಿತ ಪ್ರಯತ್ನಿಸಿತ್ತು. ಜಿಲ್ಲೆಗೆ ಭೇಟಿ ನೀಡದಂತೆ ತಮ್ಮನ್ನು ತಡೆದಿತ್ತು ಎಂದು ಮುಖ್ಯಮಂತ್ರಿ ಚಂದ್ರಶೇಖರ್ ಜೋಸೆಫ್ ವಿಜಯ್ ಶುಕ್ರವಾರ ಹೇಳಿದ್ದಾರೆ.
ತಮಿಳಗ ವೆಟ್ರಿ ಕಳಗಂ ಪಕ್ಷ 2025ರ ಸೆಪ್ಟೆಂಬರ್‌ನಲ್ಲಿ ಆಯೋಜಿಸಿದ್ದ ಸಮಾವೇಶಕ್ಕೆ ಅಪಾರ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು. ನೂಕುನುಗ್ಗಲು ಉಂಟಾಗಿ ಸಂಭವಿಸಿದ ಕಾಲ್ತುಳಿತದಲ್ಲಿ 41 ಮಂದಿ ಮೃತಪಟ್ಟಿದ್ದರು. ಅದಾದ ನಂತರ ಇದೇ ಮೊದಲ ಬಾರಿಗೆ ಕರೂರಿಗೆ ಭೇಟಿ ನೀಡಿರುವ ವಿಜಯ್, ಜನಸಂದಣಿ ಹೆಚ್ಚಾಗುವ ಬಗ್ಗೆ ಪೊಲೀಸರು ಯಾವುದೇ ಮಾಹಿತಿ ನೀಡಿರಲಿಲ್ಲ. ಜನರನ್ನು ನಿಯಂತ್ರಿಸಲು ಅಗತ್ಯ ಕ್ರಮ ಕೈಗೊಳ್ಳಲು ಆಗದಿದ್ದ ಪಕ್ಷದಲ್ಲಿ, ಕಾರ್ಯಕ್ರಮ ರದ್ದುಗೊಳಿಸುವ ಕ್ರಮವನ್ನಾದರೂ ಕೈಗೊಳ್ಳಬೇಕಿತ್ತು ಎಂದಿದ್ದಾರೆ.
ತಮಿಳುನಾಡು ಮುಖ್ಯಮಂತ್ರಿಯಾಗಿ ಮೇ 10ರಂದು ಅಧಿಕಾರ ಸ್ವೀಕರಿಸಿರುವ ವಿಜಯ್, 'ಜನಸಂದಣಿ ವಿಪರೀತವಾಗುತ್ತಿದೆ, ನಿಯಂತ್ರಿಸಲು ಆಗುತ್ತಿಲ್ಲ ಎಂಬ ಬಗ್ಗೆ ಪೊಲೀಸರು ನಮಗೆ ಎಚ್ಚರಿಕೆ ನೀಡಬಹುದಿತ್ತು. ಸಭೆಯನ್ನು ರದ್ದು ಮಾಡುವ ಎಲ್ಲ ಅಧಿಕಾರ ಅವರಿಗೆ ಇತ್ತು. ಹಾಗೆ ಮಾಡದೆ, ನಮ್ಮನ್ನು ಹೆದ್ದಾರಿಯಲ್ಲೇ ಕರೆದೊಯ್ಯಲಾಯಿತು' ಎಂದು ಆರೋಪಿಸಿದ್ದಾರೆ.
'ಪೊಲೀಸರನ್ನು ಸಂಪೂರ್ಣವಾಗಿ ನಂಬಿದ್ದೆ. ಸಭೆಯಲ್ಲಿ ಅವರಿಗೆ ಧನ್ಯವಾದವನ್ನೂ ಹೇಳಿದ್ದೆ. ಇಂತಹದ್ದೊಂದು ದುರಂತ ಸಂಭವಿಸಬಹುದು ಎಂಬ ಅಂದಾಜು ಇರಲಿಲ್ಲ. ಇದಕ್ಕೆ ಯಾರು ಹೊಣೆ? ಯಾರ ಸೂಚನೆಯಂತೆ ಇದೆಲ್ಲ ನಡೆಯಿತು?' ಎಂದು ಪ್ರಶ್ನಿಸಿದ್ದಾರೆ.
ಹಿಂದಿನ ಡಿಎಂಕೆ ಸರ್ಕಾರವನ್ನು ಉದ್ದೇಶಿಸಿ, 'ಅವರ ಈ ದುರಂತದಿಂದ ರಾಜಕೀಯ ಲಾಭ ಪಡೆಯಲು ಯತ್ನಿಸಿದ್ದರು' ಎಂದು ಗಂಭೀರ ಆರೋಪ ಮಾಡಿದ್ದಾರೆ.
ದುರಂತದಿಂದ ಅಪಾರ ನೋವಾಗಿದೆ ಎಂದಿರುವ ವಿಜಯ್, 'ನಮ್ಮ ಸಹೋದರ, ಸಹೋದರಿಯರು, ಮಕ್ಕಳನ್ನು ಕಳೆದುಕೊಂಡಿದ್ದೇವೆ' ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಹಾಗೆಯೇ, ಮೃತರ ಸ್ಮರಣಾರ್ಥ ಪಕ್ಷದ ವತಿಯಿಂದ ಸ್ಮಾರಕ ನಿರ್ಮಿಸುವುದಾಗಿಯೂ ಹೇಳಿದ್ದಾರೆ.
ನಂತರ ಕರೂರಿನಲ್ಲಿ ರೋಡ್‌ಶೋ ನಡೆಸಿದ ವಿಜಯ್, ರಸ್ತೆ ಬದಿಯಲ್ಲಿ ನಿಂತಿದ್ದ ಸಾವಿರಾರು ಜನರತ್ತ ಕೈಬೀಸಿದರು.
ಕಾಲ್ತುಳಿತದಿಂದಾಗಿ ಮೃತಪಟ್ಟವರ ಕುಟುಂಬದವರನ್ನು ವಿಜಯ್ ಕರೂರಿನಲ್ಲಿ ಭೇಟಿ ಮಾಡಿರಲಿಲ್ಲ. ಬದಲಾಗಿ ಅವರನ್ನೆಲ್ಲ ಚೆನ್ನೈಗೆ ಆಹ್ವಾನಿಸಿ ಸಾಂತ್ವನ ಹೇಳಿದ್ದರು.

