ನವದೆಹಲಿ (PTI): ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿಯ (ಸಿಬಿಎಸ್‌ಇ) ಡಿಜಿಟಲ್ ಮಾರ್ಕಿಂಗ್ ವ್ಯವಸ್ಥೆಯಿಂದ ವಿದ್ಯಾರ್ಥಿಗಳು ಹತಾಶರಾಗಿರುವ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್, ಆನ್ ಸ್ಕ್ರೀನ್ ಮಾರ್ಕಿಂಗ್ (ಒಎಸ್‌ಎಂ) ವ್ಯವಸ್ಥೆ ಮೂಲಕ ಪರಿಕ್ಷೆಗಳನ್ನು ನಡೆಸಲು ನಿಯಮಗಳನ್ನು ರೂಪಿಸಲು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರ ಸಲಹೆಯನ್ನು ಕೋರಿದೆ.
'ಒಎಸ್‌ಎಂ' ವ್ಯವಸ್ಥೆ ಬಗ್ಗೆ ನಿಯಮಗಳನ್ನು ರೂಪಿಸಲು ಕೇಂದ್ರ ಸರ್ಕಾರ ಮತ್ತು ಸಿಬಿಎಸ್‌ಇಗೆ ನಿರ್ದೇಶನಗಳನ್ನು ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜಾಯ್‌ಮಾಲ್ಯಾ ಬಾಗ್ಚಿ ಮತ್ತು ವಿ.ಮೋಹನ ಅವರ ಪೀಠವು ಬುಧವಾರ ವಿಚಾರಣೆ ನಡೆಸಿತು.
ಸಿಬಿಎಸ್‌ಇ ಒಎಸ್‌ಎಂ ಮೌಲ್ಯಮಾಪನ ವ್ಯವಸ್ಥೆಯು ಡಿಜಿಟಲ್ ಗ್ರೇಡಿಂಗ್ ವಿಧಾನವಾಗಿದ್ದು, ಶಿಕ್ಷಕರು ಭೌತಿಕ ಉತ್ತರ ಪತ್ರಿಕೆಗಳನ್ನು ಪರಿಶೀಲಿಸುವ ಬದಲು, ಈ ಉತ್ತರ ಪತ್ರಿಕೆಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಕಂಪ್ಯೂಟರ್‌ನಲ್ಲಿ ಪರಿಶೀಲಿಸುತ್ತಾರೆ.
'ಡಿಜಿಟಲ್ ಮಾರ್ಕಿಂಗ್ ವ್ಯವಸ್ಥೆಯಿಂದ ಈ ಎಳೆಯ ವಿದ್ಯಾರ್ಥಿಗಳು ಎಷ್ಟೊಂದು ಹತಾಶರಾಗಿದ್ದಾರೆ ನೋಡಿ, ಈ ವ್ಯವಸ್ಥೆಯು ಮಕ್ಕಳ ಮೇಲೆ ಕಾಲಕ್ರಮೇಣ ವ್ಯತಿರಿಕ್ತ ಪರಿಣಾಮ ಬೀರುತ್ತಿರುವುದು ಕಂಡುಬರುತ್ತಿದೆ. ಈ ನಿಟ್ಟಿನಲ್ಲಿ ನಾವು ನಿಮ್ಮ ಸಹಾಯವನ್ನು ಕೋರುತ್ತಿದ್ದೇವೆ, ಆದರೆ, ಅದು ಪ್ರತಿಕೂಲ ರೀತಿಯಲ್ಲಿ ಅಲ್ಲ, ಇಲ್ಲಿ ಕೆಲವೊಂದು ಸಮಸ್ಯೆಗಳಿವೆ' ಎಂದು ನ್ಯಾಯಮೂರ್ತಿ ಜಾಯ್‌ಮಾಲ್ಯಾ ಬಾಗ್ಚಿ ಅವರು ಸಾಲಿಸಿಟರ್ ಜನರಲ್ ಅವರಿಗೆ ತಿಳಿಸಿದರು ಮತ್ತು ಪ್ರಕರಣದ ಸ್ಥಿತಿಗತಿ ವರದಿಯನ್ನು ಸಲ್ಲಿಸುವಂತೆ ಕೋರಿದರು.
'ಅರ್ಜಿಯಲ್ಲಿ ಹೇಳಲಾದ ವೈಯಕ್ತಿಕ ಅಂಕಪಟ್ಟಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಬಗೆಹರಿಸಲಾಗಿದೆ ಹಾಗೂ ಸರ್ಕಾರವು ಡಿಜಿಟಲ್ ಮೌಲ್ಯಮಾಪನಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸುತ್ತಿದೆ. ಮೌಲ್ಯಮಾಪನ ವ್ಯವಸ್ಥೆಯನ್ನು ಪುನರ್ ಪರಿಶೀಲನೆ ಮಾಡಲು ಎಸ್. ರಾಧಾ ಚೌಹಾಣ್ ನೇತೃತ್ವದ ಏಕಸದಸ್ಯ ಸಮಿತಿಯನ್ನು ರಚಿಸಲಾಗಿದ್ದು, ಈ ಸಮಿತಿಯು ಅಗತ್ಯ ವ್ಯವಸ್ಥಿತ ಬದಲಾವಣೆಗಳನ್ನು ಶಿಫಾರಸು ಮಾಡಲಿದೆ. ನಾವೂ ಇದನ್ನು ಪ್ರತಿಕೂಲ ರೀತಿಯಲ್ಲಿ ಪರಿಗಣಿಸಿಲ್ಲ' ಎಂದು ಸಾಲಿಸಿಟರ್ ಜನರಲ್ ನ್ಯಾಯಪೀಠಕ್ಕೆ ತಿಳಿಸಿದರು.
ಸಿಬಿಎಸ್‌ಇ ತೆಗೆದುಕೊಳ್ಳುವ ಕ್ರಮಗಳ ಬಗ್ಗೆ ನ್ಯಾಯಪೀಠಕ್ಕೆ ತಿಳಿಸುವಂತೆ ಸಾಲಿಸಿಟರ್ ಜನರಲ್ ಅವರಿಗೆ ತಿಳಿಸಿದ ಪೀಠವು, ವಿಚಾರಣೆಯನ್ನು ಮುಂದಿನ ವಾರ ನಡೆಸುವುದಾಗಿ ಹೇಳಿತು.
'ಒಎಸ್‌ಎಂ' ವ್ಯವಸ್ಥೆ ಬಗ್ಗೆ ನಿರ್ದೇಶನಗಳನ್ನು ಕೋರಿ ರಾಕೇಶ್ ಬಿಂಜೋಲ ಎಂಬುವರು ವಕೀಲ ಲಕ್ಷ್ಮೀಕಾಂತ್ ಎಂ. ಶುಕ್ಲಾ ಮೂಲಕ ಸುಪ್ರೀಂ ಕೋರ್ಟ್‌ನಲ್ಲಿ ಪಿಐಎಲ್ ಸಲ್ಲಿಸಿದ್ದಾರೆ.

