ಬದಿಯಡ್ಕ: ಬದಿಯಡ್ಕ ಗ್ರಾಮ ಪಂಚಾಯಿತಿ ನೇತೃತ್ವದಲ್ಲಿ ಜಲಜೀವನ, ಜಲ ಬಜೆಟ್ ಮತ್ತು ಜಲಸುರಕ್ಷತೆ ವಿಷಯಗಳ ಕುರಿತು ಸೋಮವಾರ ಕಾರ್ಯಾಗಾರವನ್ನು ಆಯೋಜಿಸಲಾಯಿತು. ನೀರಿನ ಮೂಲಗಳು ವ್ಯರ್ಥವಾಗುವುದಕ್ಕೆ ನಮ್ಮಲ್ಲಿ ಪ್ರತಿಯೊಬ್ಬರೂ ಜವಾಬ್ದಾರರು ಎಂಬ ಅರಿವನ್ನು ಸಮಾಜದಲ್ಲಿ ಬೆಳೆಸುವುದು ಅತ್ಯಗತ್ಯ ಹಾಗೂ ಜಲಸಂಪತ್ತನ್ನು ರಕ್ಷಿಸಲು ಎಲ್ಲರೂ ಒಟ್ಟಾಗಿ ಶ್ರಮಿಸಬೇಕು ಎಂದು ಕಾರ್ಯಾಗಾರದಲ್ಲಿ ಅಭಿಪ್ರಾಯಪಡಲಾಯಿತು.
ಕೃಷಿ ಕ್ಷೇತ್ರದಲ್ಲಿನ ಅತ್ಯುತ್ತಮ ಚಟುವಟಿಕೆಗಳ ಮೂಲಕ ಜಿಲ್ಲೆಯಲ್ಲಿ ಗಮನ ಸೆಳೆದಿರುವ ಪಂಚಾಯಿತಿಗಳಲ್ಲಿ ಬದಿಯಡ್ಕ ಗ್ರಾಮ ಪಂಚಾಯತಿ ಕೂಡ ಒಂದಾಗಿದ್ದು, ಜಲಸಂರಕ್ಷಣಾ ಕಾರ್ಯಕ್ರಮಗಳನ್ನು ಇನ್ನಷ್ಟು ಬಲಪಡಿಸುವ ಅಗತ್ಯವನ್ನು ಕಾರ್ಯಕ್ರಮದಲ್ಲಿ ಒತ್ತಿಹೇಳಲಾಯಿತು. ಕಾರ್ಯಾಗಾರದಲ್ಲಿ ಭಾಗವಹಿಸಿದವರಿಂದಲೂ ಜಲಸಂರಕ್ಷಣೆಯ ಅಗತ್ಯತೆಯ ಕುರಿತು ಧ್ವನಿ ಕೇಳಿಬಂತು.
ಕಾರ್ಯಾಗಾರವನ್ನು ಗ್ರಾಮಪಂಚಾಯಿತಿ ಅಧ್ಯಕ್ಷ ಡಿ. ಶಂಕರ ಉದ್ಘಾಟಿಸಿದರು. ಉಪಾಧ್ಯಕ್ಷೆ ಅಶ್ವಿನಿ ಕೆ.ಎಂ. ಅಧ್ಯಕ್ಷತೆ ವಹಿಸಿದ್ದರು. ಪಂಚಾಯಿತಿ ಕಾರ್ಯದರ್ಶಿ ಮನೋಜ್ ಸ್ವಾಗತಿಸಿದರು. ಜಿಲ್ಲಾ ಜಲಮಂಡಳಿ ಸುರಕ್ಷತಾ ಸಂಯೋಜಕರಾದ (ಕೋ-ಆರ್ಡಿನೇಟರ್) ಬಾಲಕೃಷ್ಣ ಕಾರ್ಯಾಗಾರದ ತರಗತಿ ನಡೆಸಿಕೊಟ್ಟರು. ಬ್ಲಾಕ್ ಪಂಚಾಯಿತಿ ಸದಸ್ಯ ಖಾದರ್ ಮಾನ್ಯ, ಗ್ರಾಮಪಂಚಾಯಿತಿ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಹಮೀದ್ ಕೆಡೆಂಜಿ, ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಅವಿನಾಶ್ ರೈ, ಕೃಷಿ ಅಧಿಕಾರಿ ಬಿಂದು ಜಾರ್ಜ್ ಗ್ರಾಮ ಪಂಚಾಯಿತಿ ಜನಪ್ರತಿನಿಧಿಗಳು, ಅಧಿಕಾರಿಗಳು ಮತ್ತು ಕೃಷಿಕರು ಸೇರಿದಂತೆ ಹಲವರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು. ಕ್ಷೇಮಾಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ರಜನಿ ವಂದಿಸಿದರು.

.jpg)
.jpg)
