ಪಣಜಿ: ದೆಹಲಿಯಲ್ಲಿ ವಿದ್ಯಾರ್ಥಿಗಳು ನಡೆಸಿದ 'ಸಂಸತ್ ಚಲೊ' ಪ್ರತಿಭಟನೆಯನ್ನು ಟೀಕಿಸಿ, ದೇಶಕ್ಕೆ ಬಿದ್ದ 'ಹುಳುಗಳು' ಎಂದು ಹೋಲಿಸಿರುವ ಗೋವಾ ಬಿಜೆಪಿ ಹಿರಿಯ ನಾಯಕ ನರೇಂದ್ರ ಸವಾಯ್ಕರ್ ವಿರುದ್ಧ ಪ್ರತಿಪಕ್ಷಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.
ಈ ಹೋಲಿಕೆಯನ್ನು ಖಂಡಿಸಿರುವ ಕಾಂಗ್ರೇಸ್ ಹಾಗೂ ಆಮ್ ಆದ್ಮಿ ಪಾರ್ಟಿ (ಎಎಪಿ) ನಾಯಕರು, ಸವಾಯ್ಕರ್ ಬಹಿರಂಗ ಕ್ಷಮೆಯಾಚಿಸಬೇಕೆಂದು ಪಟ್ಟು ಹಿಡಿದಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ನಲ್ಲಿ ಭಾರತದ ನಕ್ಷೆಯ ಚಿತ್ರವೊಂದನ್ನು ಸವಾಯ್ಕರ್ ಹಂಚಿಕೊಂಡಿದ್ದರು. ಅದರಲ್ಲಿ ಇಡೀ ದೇಶದ ಭೂಪಟದ ಮೇಲೆ ಗೆದ್ದಲು ಮತ್ತು ಜಿರಳೆಗಳು ತುಂಬಿರುವಂತೆ ಚಿತ್ರಿಸಲಾಗಿತ್ತು. 'ಗೆದ್ದಲುಗಳ ಜತೆ ಜಿರಳೆಗಳು! ದೇಶವನ್ನು ಉಳಿಸಿ! ಎಂಬ ವಿವಾದಾತ್ಮಕ ಶೀರ್ಷಿಕೆಯನ್ನೂ ನೀಡಿ ಪೋಸ್ಟ್ ಮಾಡಿದ್ದರು.ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಇದು ಕೇವಲ ರಾಜಕೀಯ ವಿರೋಧವಲ್ಲ, ಬದಲಿಗೆ ಸರ್ಕಾರದ ಲೋಪಗಳನ್ನು ಪ್ರಶ್ನಿಸುವ ಸಾಮಾನ್ಯ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳನ್ನು 'ದೇಶದ್ರೋಹಿಗಳು' ಎಂದು ಬಿಂಬಿಸುವ ಯತ್ನ ಎಂದು ಪ್ರತಿಪಕ್ಷಗಳು ಟೀಕಿಸಿವೆ.
24 ಗಂಟೆಗಳಲ್ಲಿ ಕ್ಷಮೆ ಕೇಳಿ: ಕಾಂಗ್ರೆಸ್ ಎಚ್ಚರಿಕೆ
ಈ ಬಗ್ಗೆ ಪ್ರತಿಕ್ರಿಯಿಸಿರುವ ಗೋವಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಸುನಿಲ್ ಕೌತಂಕರ್, 'ಬಿಜೆಪಿ ನಾಯಕರು ಮುಂದಿನ 24 ಗಂಟೆಗಳ ಒಳಗಾಗಿ ದೇಶದ ಜನತೆಯ ಬಳಿ ಕ್ಷಮೆಯಾಚಿಸಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ನೀತಿಗಳನ್ನು ಪ್ರಶ್ನಿಸುವ ಪ್ರತಿಯೊಬ್ಬ ಪ್ರಜೆಗೂ ಹಕ್ಕಿದೆ. ಸರ್ಕಾರದ ಮೇಲಿನ ವಿಮರ್ಶೆಯನ್ನು ದೇಶದ್ರೋಹ ಎಂದು ಕರೆಯುವುದು ಬಿಜೆಪಿಯ ಕೆಟ್ಟ ಅಭ್ಯಾಸ. ಬಿಜೆಪಿ ಎಂದರೆ ಇಡೀ ದೇಶವಲ್ಲ ಎಂಬುದನ್ನು ಅವರು ನೆನಪಿಟ್ಟುಕೊಳ್ಳಬೇಕು' ಎಂದು ಕಿಡಿಕಾರಿದ್ದಾರೆ.
ಸಂಸತ್ ಚಲೊ ವೇಳೆ ಲಾಠಿ ಚಾರ್ಜ್: ತುರ್ತು ಅರ್ಜಿ ವಿಚಾರಣೆ ನಿರಾಕರಿಸಿದ ದೆಹಲಿ ಊಅವಿದ್ಯಾರ್ಥಿಗಳ ಮೇಲೆ ಕ್ರೂರ ವರ್ತನೆ: ಓಂ ಬಿರ್ಲಾ ಭೇಟಿಯಾದ ವಿಪಕ್ಷಗಳ ನಾಯಕರು
ವಿದ್ಯಾರ್ಥಿಗಳನ್ನು ಕೀಳಾಗಿ ಕಾಣುವುದು ನಾಚಿಕೆಗೇಡು: ಎಎಪಿ
ಮತ್ತೊಂದೆಡೆ ಆಮ್ ಆದ್ಮಿ ಪಾರ್ಟಿಯ ನಾಯಕ ಕ್ರೂಜ್ ಸಿಲ್ವಾ ಕೂಡ ಸವಾಯ್ಕರ್ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದು, 'ನ್ಯಾಯಕ್ಕಾಗಿ ಧ್ವನಿ ಎತ್ತಿದ ವಿದ್ಯಾರ್ಥಿಗಳಿಗೆ 'ಗೆದ್ದಲು' ಎಂದು ಕರೆಯುವುದು ತೀರ ನಾಚಿಕೆಗೇಡಿನ ಸಂಗತಿ. ಪ್ರಜಾಸತ್ತಾತ್ಮಕವಾಗಿ ಪ್ರತಿಭಟಿಸುವ ಹಕ್ಕನ್ನು ಹತೋಟಿ ಮಾಡಲು ಆಡಳಿತಾರೂಢ ಪಕ್ಷ ಹೀಗೆ ಕೆಳಮಟ್ಟದ ಭಾಷೆ ಬಳಸುವುದು ಒಪ್ಪಿಕೊಳ್ಳಲು ಸಾಧ್ಯವಿಲ್ಲ' ಎಂದಿದ್ದಾರೆ.

