ನವದೆಹಲಿ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ಯುವಜನರು ಸಾಗರೋಪಾದಿಯಲ್ಲಿ ಹರಿದು ಬಂದು ಕೇಂದ್ರ ಸರ್ಕಾರದ ವಿರುದ್ಧ ಗರ್ಜಿಸಿದರು. ಪ್ರತಿಭಟನೆನಿರತರ ಮೇಲೆ ಪೊಲೀಸರು ಲಾಠಿ ಪ್ರಹಾರ ಹಾಗೂ ಆಶ್ರುವಾಯು ಪ್ರಯೋಗಿಸಿದರು.
ಇದರಿಂದಾಗಿ, ಜಂತರ್ ಮಂತರ್ ಹಾಗೂ ಸಂಸತ್ ಸುತ್ತಲಿನ ಪ್ರದೇಶ ಅಕ್ಷರಶಃ ರಣರಂಗವಾಗಿ ಮಾರ್ಪಟ್ಟಿತು.
ಸಂಸತ್‌ನ ಮಳೆಗಾಲದ ಅಧಿವೇಶನದ ಮೊದಲ ದಿನವೇ ನಡೆದ 'ಜೆನ್-ಜಿ' ಹಾಗೂ ಯುವ ಜನರ ಹೋರಾಟದಿಂದ ಕೇಂದ್ರ ಸರ್ಕಾರ ಮುಜುಗರಕ್ಕೆ ಸಿಲುಕಿತು. ಉತ್ತರ ಪ್ರದೇಶ ಸೇರಿದಂತೆ ಐದು ರಾಜ್ಯಗಳ ವಿಧಾನಸಭಾ ಚುನಾವಣೆಗಳು ಕದ ಬಡಿದಿರುವ ಹೊತ್ತಿನಲ್ಲಿ ಯುವಸಮೂಹ ಸಿಡಿದೆದ್ದಿರುವುದು ಕೇಂದ್ರದ ಕಳವಳಕ್ಕೆ ಕಾರಣವಾಗಿದೆ.
ಬೃಹತ್ ರೈತ ಆಂದೋಲನಕ್ಕೆ ಮಣಿದು ಕೇಂದ್ರ ಸರ್ಕಾರವು ಮೂರು ಕೃಷಿ ಕಾಯ್ದೆಗಳನ್ನು 2021ರಲ್ಲಿ ರದ್ದು ಮಾಡಿತ್ತು. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಆ ಬಳಿಕ ಅತೀ ದೊಡ್ಡ ಹೋರಾಟ ಇದಾಗಿದೆ.
ಬೆಳಗಾಗುವುದರೊಳಗೆ ರಾಜಧಾನಿಯ ಹೃದಯ ಭಾಗವು ಜನಸಮೂಹದ ಸಮುದ್ರವಾಗಿ ಮಾರ್ಪಟಿತು. ಪ್ರತಿಭಟನೆಕಾರರು ಧ್ವಜಗಳು ಮತ್ತು ಫಲಕಗಳನ್ನು ಹಿಡಿದು ಗುಂಪುಗಳಲ್ಲಿ ಮೆರವಣಿಗೆ ನಡೆಸಿ ಸಂಸತ್ತಿನ ಕಡೆಗೆ ಹೋಗುವ ರಸ್ತೆಗಳಲ್ಲಿ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಜಂತರ್ ಮಂತರ್‌ನಲ್ಲಿ ಶಾಲಾ ಮಕ್ಕಳು, ಕಾಲೇಜು ವಿದ್ಯಾರ್ಥಿಗಳು, ಜೆನ್ ಜಿಗಳು ಹಾಗೂ ಹಿರಿಯ ನಾಗರಿಕರನ್ನು ಒಳಗೊಂಡ ಬೃಹತ್ ಜನಸಮೂಹ ಜಮಾಯಿಸಿ ನೀಟ್ ಪರೀಕ್ಷಾ ವೈಫಲ್ಯಕ್ಕೆ ಕೇಂದ್ರ ಸರ್ಕಾರ ಹೊಣೆ ಹೊರಬೇಕು ಎಂದು ಪಟ್ಟು ಹಿಡಿಯಿತು. ಕೆಲವು ಮಕ್ಕಳು ಶಾಲಾ ಸಮವಸ್ತ್ರದಲ್ಲಿ ಬಂದರು. ಇತರರು ಜಿರಳೆ ವೇಷಭೂಷಣಗಳನ್ನು ಧರಿಸಿ ಪ್ರತಿಭಟಿಸಿದರು.
ಸಂಸತ್ ಚಲೋ ಹಾಗೂ ಮೆರವಣಿಗೆಗೆ ದೆಹಲಿ ಪೊಲೀಸರು ಅನುಮತಿ ನಿರಾಕರಿಸಿದ್ದರು. ಎಲ್ಲ ಸಾರ್ವಜನಿಕ ಸಭೆಗಳ ಮೇಲೆ ನಿಷೇಧ ಹೇರಲಾಗಿತ್ತು. ಪೊಲೀಸರ ಎಚ್ಚರಿಕೆಗೆ ಬೆದರದೆ ದೆಹಲಿ ಹಾಗೂ ಸುತ್ತಮುತ್ತಲಿನ ರಾಜ್ಯಗಳ ಸಾವಿರಾರು ಜನರು ರಾಷ್ಟ್ರ ರಾಜಧಾನಿಯಲ್ಲಿ ಜಮಾಯಿಸಿ ಪೊಲೀಸರಿಗೆ ಸವಾಲೆಸೆದರು. ಅನೇಕ ಮಂದಿ ಐದಾರು ಕಿ.ಮೀ. ನಡೆದೇ ಪ್ರತಿಭಟನೆ ಸ್ಥಳಕ್ಕೆ ಸೇರಿದರು. ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಗೂ ರಾಜಕೀಯ ಪಕ್ಷಗಳ ನೇತಾರರು ಜಂತರ್ ಮಂತರ್‌ಗೆ ಬಂದು ಹೋರಾಟಗಾರರಿಗೆ ಹುರುಪು ತುಂಬಿದರು.
ಪೊಲೀಸರು ನಗರದ ರಸ್ತೆಗಳಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿದರು. ಸಾವಿರಾರು ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿತ್ತು. ಸಂಸತ್ ಕಟ್ಟಡದ ಸುತ್ತಮುತ್ತಲಿನ ಪ್ರದೇಶದಲ್ಲಿ ಸರ್ಪಗಾವಲು ಇತ್ತು. ಇದಕ್ಕೆ ಹೆದರದ ಪ್ರತಿಭಟನಕಾರರು ಸಂಸತ್ತಿನ ಕಡೆಗೆ ಸಾಗಲು ಪ್ರಯತ್ನಿಸಿದರು. ಪ್ರತಿಭಟನೆನಿರತರ ಮೇಲೆ ಪೊಲೀಸರು ಲಾಠಿ ಪ್ರಹಾರ ಮತ್ತು ಅಶ್ರುವಾಯು ಪ್ರಯೋಗ ನಡೆಸಿ ಗುಂಪು ಚದುರಿಸಲು ಪ್ರಯತ್ನಿಸಿದರು. ಇದರಿಂದ, ಹೋರಾಟಗಾರರು ಮತ್ತಷ್ಟು ಕೆರಳಿದರು. ಸುರಿಯುವ ಮಳೆಯಲ್ಲಿ ಪ್ರತಿಭಟಿಸಿ ಕೇಂದ್ರ ಸರ್ಕಾರಕ್ಕೆ ಬಿಸಿ ಮುಟ್ಟಿಸಿದರು.
ಪ್ರತಿಭಟನಕಾರರು ಸಂಸತ್ತಿನ ಕಡೆಗೆ ಸಾಗುತ್ತಿದ್ದಂತೆಯೇ ದೆಹಲಿ ಪೊಲೀಸರು ಹಲವಾರು ಹಂತಗಳಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಿ ತಡೆದರು. ಪ್ರತಿಭಟನಕಾರರು ಬ್ಯಾರಿಕೇಡ್‌ಗಳನ್ನು ನುಗ್ಗಲು ಪ್ರಯತ್ನಿಸಿದಾಗ ಪೊಲೀಸರು ಅಶ್ರುವಾಯು ಶೆಲ್ ಸಿಡಿಸಿದರು. ಪಾರ್ಲಿಮೆಂಟ್ ಸ್ಟ್ರೀಟ್, ಪಟೇಲ್ ಚೌಕ್, ರೈಲು ಭವನ ಮತ್ತು ಇತರ ಪ್ರದೇಶಗಳ ಬಳಿ ಲಾಠಿ ಚಾರ್ಜ್ ನಡೆಸಿದರು. ಘರ್ಷಣೆಯ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿ ಮತ್ತು ಪ್ರತಿಭಟನಕಾರರು ಗಾಯಗೊಂಡರು. ಈ ಮಧ್ಯೆ, ಮಧ್ಯ ದೆಹಲಿಯ ಕೆಲವು ಭಾಗಗಳಲ್ಲಿ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಯಿತು.
'ಪೊಲೀಸರು ಶಾಂತಿಯುತ ಪ್ರತಿಭಟನಕಾರರನ್ನು ಕ್ರೂರವಾಗಿ ಹತ್ತಿಕ್ಕಿದರು ಮತ್ತು ಥಳಿಸಿದರು' ಎಂದು ಸಿಜೆಪಿ ವಕ್ತಾರ ಸೌರವ್ ದಾಸ್ ಹೇಳಿದರು.
ನಡ್ಡಾ ಜೊತೆ ಮಾತುಕತೆ
ಕಾಕ್ರೋಜ್ ಜನತಾ ಪಕ್ಷದ ನೇತೃತ್ವದಲ್ಲಿ ನಡೆದ ಹೋರಾಟಕ್ಕೆ ಅಲ್ಪ ಬಾಗಿದ ಕೇಂದ್ರ ಸರ್ಕಾರವು ಪ್ರತಿಭಟನೆ ನಿರತರನ್ನು ಸಂಪರ್ಕಿಸಿ ಮಾತುಕತೆಗೆ ಆಹ್ವಾನಿಸಿತು.
ಸಿಜೆಪಿಯ ಇಬ್ಬರ ನಿಯೋಗದೊಂದಿಗೆ ಮಾತುಕತೆ ನಡೆಸಿದ ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಲಾಣ ಸಚಿವ ಜೆ.ಪಿ.ನಡ್ಡಾ, ಸರ್ಕಾರವು ಹೋರಾಟಗಾರರ ಬೇಡಿಕೆಗಳ ಕುರಿತು ಆಂತರಿಕ ಚರ್ಚೆಗಳನ್ನು ನಡೆಸಿ ಉತ್ತರಿಸುವುದಾಗಿ ಭರವಸೆ ನೀಡಿದರು.
ಸಚಿವರ ನಿವಾಸದಲ್ಲಿ ನಡ್ಡಾ ಅವರನ್ನು ಭೇಟಿ ಮಾಡಿದ ಸಿಜೆಪಿ ವಕ್ತಾರರಾದ ಅಶುತೋಷ್ ರಂಕಾ ಹಾಗೂ ಸೌರವ್ ದಾನ್ ಅವರು ಪಕ್ಷದ ಬೇಡಿಕೆಗಳನ್ನು ಒಳಗೊಂಡ ಮನವಿ ಸಲ್ಲಿಸಿದರು.
'ಸಭೆ ಸೌಹಾರ್ದಯುತವಾಗಿ ನಡೆಯಿತು. ನಿಯೋಗದೊಂದಿಗೆ ಆರಂಭಿಕ ಚರ್ಚೆ ನಡೆಸಲಾಯಿತು. ನಿಯೋಗದ ಸದಸ್ಯರು ಸಂಜೆ 4 ಗಂಟೆಯ ಸುಮಾರಿಗೆ ಮನವಿ ಸಲ್ಲಿಸಿದರು' ಎಂದು ನಡ್ಡಾ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
'ಪ್ರತಿಭಟನಕಾರರು ತಮ್ಮ ಧರಣಿ ಅಂತ್ಯಗೊಳಿಸಿ, ಸಾಮಾನ್ಯ ಸ್ಥಿತಿ ಪುನಃಸ್ಥಾಪಿಸಲು ಸರ್ಕಾರಕ್ಕೆ ಸಹಾಯ ಮಾಡುವಂತೆ ವಿನಂತಿಸಿದ್ದೇನೆ' ಎಂದು ಸಚಿವರು ಹೇಳಿದ್ದಾರೆ.
'ಈ ಬಗ್ಗೆ ಸೂಕ್ತ ವೇದಿಕೆಯಲ್ಲಿ ಚರ್ಚಿಸುವುದಾಗಿ ಸಚಿವರು ನಮಗೆ ಭರವಸೆ ನೀಡಿದರು. ಆದಾಗ್ಯೂ, ಇಲ್ಲಿಯವರೆಗೆ ಯಾವುದೇ ಭರವಸೆ ನೀಡಿಲ್ಲ. ಬೇಡಿಕೆ ಈಡೇರುವವರೆಗೂ ಪ್ರತಿಭಟನಕಾರರು ವಿಶ್ರಾಂತಿ ಪಡೆಯುವುದಿಲ್ಲ' ಎಂದು ಸೌರವ್ ದಾಸ್ ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ತಿಳಿಸಿದ್ದಾರೆ.
ಸೊನಮ್ ವಾಂಗ್ಟಕ್ ಅವರನ್ನು ಸರ್ಕಾರಿ ಆಸ್ಪತ್ರೆಯಿಂದ ಬೇರೆಡೆಗೆ ಸ್ಥಳಾಂತರಿಸಬೇಕು. ಶಿಕ್ಷಣ ಸಚಿವ ಪ್ರಧಾನ್ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು ಮತ್ತು ಆತ್ಮಹತ್ಯೆ ಮಾಡಿಕೊಂಡ ನೀಟ್ ವಿದ್ಯಾರ್ಥಿಗಳ ಕುಟುಂಬಗಳಿಗೆ ಪರಿಹಾರ ನೀಡಬೇಕು ಎಂದು ನಿಯೋಗವು ಸಚಿವರಲ್ಲಿ ಒತ್ತಾಯಿಸಿತು.
ದೀಪ್ಕೆ, ವಿದ್ಯಾರ್ಥಿಗಳ ಉಪವಾಸ ಅಂತ್ಯ
ವಿದ್ಯಾರ್ಥಿಗಳು ಗೂ ವಿವಿಧ ಸಂಘಟನೆಗಳ ಮುಖಂಡರ ಮನವಿಯ ಮೇರೆಗೆ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ಸಂಸ್ಥಾಪಕ ಅಭಿಜಿತ್ ದೀಪ್ಕೆ ಹಾಗೂ ಅಖಿಲ ಭಾರತ ವಿದ್ಯಾರ್ಥಿ ಸಂಘದ (ಎಐಎಸ್‌ಎ) ಮೂವರು ವಿದ್ಯಾರ್ಥಿಗಳು ಉಪವಾಸ ಸತ್ಯಾಗ್ರಹವನ್ನು ಸೋಮವಾರ ನಿಲ್ಲಿಸಿದರು.
ಜಂತರ್ ಮಂತರ್‌ನಲ್ಲಿ ಜೂನ್ 28ರಂದು ಸೊನಮ್ ವಾಂಗ್ಚೂಕ್ ಜತೆಗೆ ಮೂವರು ಎಐಎಸ್‌ಎ ನಾಯಕರಾದ ನೇಹಾ, ಮನೀಶ್ ಮತ್ತು ಅಮೀನ್ ಉಪವಾಸ ಸತ್ಯಾಗ್ರಹ ಆರಂಭಿಸಿದ್ದರು. ಸೊನಮ್ ಅವರನ್ನು ಪೊಲೀಸರು ಬಲವಂತದಿಮದ ಶನಿವಾರ ಸ್ಥಳಾಂತರಿಸಿದ ಬಳಿಕ ದೀಪ್ಕೆ ಉಪವಾಸ ಸತ್ಯಾಗ್ರಹ ಆರಂಭಿಸಿದ್ದರು.
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಾದ ನಂತರ ಆತ್ಮಹತ್ಯೆ ಮಾಡಿಕೊಂಡ ಅಭ್ಯರ್ಥಿ ರಿಯಾ ಥಾಪಾ ಅವರ ತಂದೆಯ ಮನವಿ ಮೇರೆಗೆ ದೀಪ್ಕೆ ಉಪವಾಸ ಅಂತ್ಯಗೊಳಿಸಿದರು. ಸಂಸತ್ತಿನತ್ತ ಮೆರವಣಿಗೆಯ ನೇತೃತ್ವ ವಹಿಸಲು ಉಪವಾಸ ಅಂತ್ಯಗೊಳಿಸಬೇಕೆಂದು ದೀಪ್ಕೆ ಅವರ ಮನವೊಲಿಸಿದ್ದರು.
ವಿರೋಧ ಪಕ್ಷದ ನಾಯಕರು ಮತ್ತು ವಿವಿಧ ಸಂಘಟನೆಗಳ ನಿಯೋಗದ ಕೋರಿಕೆ ಮೇರೆಗೆ ವಿದ್ಯಾರ್ಥಿಗಳು ಉಪವಾಸ ಸತ್ಯಾಗ್ರಹ ಕೊನೆಗೊಳಿಸಿದರು. 'ಸಂಸತ್ತಿನ ಮಳೆಗಾಲದ ಅಧಿವೇಶನದಲ್ಲಿ ನಿಮ್ಮ ಬೇಡಿಕೆಗಳ ಬಗ್ಗೆ ಧ್ವನಿ ಎತ್ತಲಾಗುವುದು. ರಾಜಕೀಯ ಮತ್ತು ಸಾರ್ವಜನಿಕ ಅಭಿಯಾನಗಳ ಮೂಲಕ ಹೋರಾಟ ಮುಂದುವರಿಸಲಾಗುವುದು' ಎಂದು ನಾಯಕರು ಭರವಸೆ ನೀಡಿದರು.
ನಿಯೋಗದಲ್ಲಿ ರಾಜ್ಯಸಭಾ ಸದಸ್ಯ ಮನೋಜ್ ಝಾ, ಸಿಪಿಎಂ ಸಂಸದ ಅಮ್ರಾ ರಾಮ್, ಸಿಪಿಐ (ಎಂಎಲ್) ಲಿಬರೇಶನ್ ಪ್ರಧಾನ ಕಾರ್ಯದರ್ಶಿ ದೀಪಂಕರ್ ಭಟ್ಟಾಚಾರ್ಯ, ಸಿಪಿಐ (ಎಂಎಲ್) ಎಲ್ ಸಂಸದ ರಾಜಾರಾಮ್ ಸಿಂಗ್, ಸಾಮಾಜಿಕ ಹೋರಾಟಗಾರ ಯೋಗೇಂದ್ರ ಯಾದವ್, ಹಿರಿಯ ವಕೀಲ ಪ್ರಶಾಂತ್ ಭೂಷಣ್, ಶಿಕ್ಷಣ ತಜ್ಞ ಅತುಲ್ ಸೂದ್, ನಟರಾದ ಪ್ರಕಾಶ್ ರಾಜ್ ಮತ್ತು ಶಬಾನಾ ಅಜ್ಮಿ ಮತ್ತಿತರರು ಇದ್ದರು.

