ನವದೆಹಲಿ: ಜಂತರ್‌ಮಂತರ್ ಆವರಣದಲ್ಲಿ ಪ್ರತಿಭಟನೆಗಳನ್ನು ನಡೆಸುವುದನ್ನು ನಿಷೇಧಿಸಲಾಗಿದೆಯೆಂದು ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ಸುದ್ದಿಗಳನ್ನು ದಿಲ್ಲಿ ಪೊಲೀಸರು ತಳ್ಳಿಹಾಕಿದ್ದು, ಅವು ಸಂಪೂರ್ಣ ಸುಳ್ಳು ಹಾಗೂ ತಪ್ಪುದಾರಿಗೆಳೆಯುವಂತಹದ್ದು ಎಂದು ಹೇಳಿದ್ದಾರೆ.
ಈ ಮಧ್ಯೆ ಜುಲೈ 20ರಂದು ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನಡೆಸಿದ 'ಸಂಸತ್ ಚಲೋ' ಪಾದಯಾತ್ರೆ ಸಂದರ್ಭ ಭದ್ರತಾ ಸಿಬ್ಬಂದಿಗಳ ಜೊತೆ ಸಂಘರ್ಷಗಳಿಗೆ ಸಿದ್ಧತೆಯನ್ನು ನಡೆಸಲು ಪ್ರತಿಭಟನಕಾರರು ಕೃತಕ ಬುದ್ಧಿಮತ್ತೆ (ಎಐ)ಯ ಸಲಕರಣೆಗಳನ್ನು ಬಳಸಿಕೊಂಡಿದ್ದಾರೆಯೇ ಎಂಬ ಬಗ್ಗೆ ತನಿಖೆಯನ್ನು ಆರಂಭಿಸಿದ್ದಾರೆ.
ಸುಪ್ರೀಂಕೋರ್ಟ್‌ನ ನಿರ್ದೇಶನದ ಪ್ರಕಾರ ಹಾಗೂ ಅದಕ್ಕೆ ಸಂಬಂಧಿಸಿ ದಿಲ್ಲಿ ಪೊಲೀಸರು ಜಾರಿಗೊಳಿಸಿರುವ ಪ್ರಮಾಣಿತ ಕಾರ್ಯನಿರ್ವಹಣಾ ವಿಧಾನದದ ಪ್ರಕಾರ ಶಾಂತಿಯುತ ಪ್ರತಿಭಟನೆಗಳನ್ನು ನಡೆಸಲು ಜಂತರ್ ಮಂತರ್ ಈಗಲೂ ಸಕ್ರಿಯ ಹಾಗೂ ಅಧಿಕೃತ ಸ್ಥಳವಾಗಿಯೇ ಉಳಿದಿದೆ ಎಂದು ದಿಲ್ಲಿ ಪೊಲೀಸರು ತಿಳಿಸಿದ್ದಾರೆ.
ಪ್ರಮಾಣಿತ ಕಾರ್ಯನಿರ್ವಹಣಾ ವಿಧಾನದ ಪ್ರಕಾರ ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆದು, ಜಂತರ್‌ಮಂತರ್‌ನಲ್ಲಿರುವ ಪ್ರತಿಭಟನಾ ಸ್ಥಳದಲ್ಲಿ ಸುಮಾರು 1 ಸಾವಿರದಷ್ಟು ಮಂದಿ ಸಭೆ ಸೇರಬಹುದಾಗಿದೆ ಎಂದು ಮೂಲಗಳು ತಿಳಿಸಿವೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಅನಧಿಕೃತ ಮಾಹಿತಿಯನ್ನು ನಂಬದಂತೆ ಪೊಲೀಸರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ. ಆದರೆ ನಿಖರ ಹಾಗೂ ವಿಶ್ವಾಸಾರ್ಹ ಮಾಹಿತಿಗಳಿಗಾಗಿ ಅಧಿಕೃತ ಸಂವನಹನ ಸಂಸ್ಥೆಗಳನ್ನೇ ಅವಲಂಭಿಸಬೇಕೆಂದು ತಿಳಿಸಿದ್ದಾರೆ.

