ನವದೆಹಲಿ: ರಕ್ಷಣಾ ಉತ್ಪಾದನೆ ಮತ್ತು ರಫ್ತುವಿನಲ್ಲಿ ಭಾರತವು ಹೊಸ ಎತ್ತರಕ್ಕೇರುತ್ತಿದೆ. ಅದರೊಂದಿಗೆ ನಮ್ಮ ಮಿತ್ರ ರಾಷ್ಟ್ರಗಳೊಂದಿಗೆ ಉತ್ತಮ ಸಂಬಂಧವನ್ನು ಕಾಪಾಡಿಕೊಳ್ಳಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು 'ಮನ್ ಕಿ ಬಾತ್' ಕಾರ್ಯಕ್ರಮದಲ್ಲಿ ಹೇಳಿದ್ದಾರೆ.
ಜುಲೈ ತಿಂಗಳ 'ಮನ್ ಕಿ ಬಾತ್'ನಲ್ಲಿ, 1999ರಲ್ಲಿ ನಡೆದ ಕಾರ್ಗಿಲ್ ಯುದ್ಧದಲ್ಲಿ ಬಲಿದಾನ ಮಾಡಿದ ಯೋಧರಿಗೆ ಗೌರವ ಸಲ್ಲಿಸಿದರು.
'ಕೆಲವು ದಿನಗಳನ್ನು ಜನರು ಕ್ಯಾಲೆಂಡರ್ ನೋಡಿ ನೆನಪಿಸಿಕೊಳ್ಳುವ ಅಗತ್ಯವಿರುವುದಿಲ್ಲ. ಇಂದು(ಜುಲೈ 26) ಅಂತಹ ದಿನವಾಗಿದ್ದು, ಕಾರ್ಗಿಲ್ ವಿಜಯ್ ದಿವಸವು ನಮಗೆ ಹೆಮ್ಮೆಯ ದಿನವಾಗಿದೆ. ಇದು ನಮ್ಮ ಸೈನಿಕರ ಅಸಾಧಾರಣ ಧೈರ್ಯವನ್ನು ನೆನಪಿಸಿಕೊಳ್ಳುವ ದಿನವಾಗಿದೆ. ಕಠಿಣ ಹವಾಮಾನವಿರುವ ಕಾರ್ಗಿಲ್‌ನ ತುದಿಯಲ್ಲಿ ಶತ್ರುಗಳನ್ನು ಎದುರಿಸಿ ನಮ್ಮ ಯೋಧರು ಗೆಲುವು ಸಾಧಿಸಿದ್ದರು' ಎಂದು ಹೇಳಿದ್ದಾರೆ.
ದೇಶಕ್ಕಾಗಿ ಬಲಿದಾನ ಮಾಡಿದ ಯೋಧರ ನೆನಪಿಗಾಗಿ ಈ ವರ್ಷ 'ಶೌರ್ಯ ವಿಜಯ ಯಾತ್ರೆ' ಹಮ್ಮಿಕೊಳ್ಳಲಾಗಿದೆ. ಯುವ ಜನರಿಗೆ ಅವರ ಸಾಹಸಗಾಥೆ ತಿಳಿಸುವುದು ಇದರ ಉದ್ದೇಶ ಎಂದು ತಿಳಿಸಿದ್ದಾರೆ.
ಸೈನಿಕರ ಶೌರ್ಯದೊಂದಿಗೆ ದೇಶವು ತನ್ನ ತಂತ್ರಜ್ಞಾನದ ಸಾಮರ್ಥ್ಯವನ್ನು ಕೂಡ ಹಂತ ಹಂತವಾಗಿ ಹೆಚ್ಚಿಸಿಕೊಳ್ಳುತ್ತಿದೆ. ರಕ್ಷಣಾ ಉತ್ಪಾದನೆಯಲ್ಲಿ ಬಳಸುವ ಶೇ.75ರಷ್ಟು ಸಾಮಗ್ರಿಗಳು ಸ್ವದೇಶಿ ನಿರ್ಮಿತವಾಗಿವೆ. ಇತ್ತೀಚೆಗೆ ನೌಕಾಪಡೆಗೆ ಸೇರಿದ ಐಎನ್‌ಎಸ್ ಮಹೇಂದ್ರಗಿರಿ ಯುದ್ಧನೌಕೆಯು ಸಂಪೂರ್ಣವಾಗಿ ಭಾರತದಲ್ಲೇ ತಯಾರಾಗಿರುವುದು 'ಅತ್ಮನಿರ್ಭರ ಭಾರತ'ಕ್ಕೆ ಉದಾಹರಣೆಯಾಗಿದೆ ಎಂದು ಹೇಳಿದ್ದಾರೆ.
ತುಂಬಾ ಸಮಯದಿಂದ ಭಾರತದ ಬಾಹ್ಯಾಕಾಶ ವಲಯವು ಖಾಸಗಿಯವರಿಗೆ ಮುಚ್ಚಿತ್ತು. ಇದರಿಂದ ಹಲವು ಯುವಜನರಿಗೆ ತಮ್ಮ ಪ್ರತಿಭೆಯನ್ನು ತೋರಿಸಲು ಅವಕಾಶ ಸಿಕ್ಕಿರಲಿಲ್ಲ. ಅದನ್ನು ಗಮನದಲ್ಲಿಟ್ಟುಕೊಂಡು, ನಾವು ಅದನ್ನು ಖಾಸಗಿ ಉದ್ಯಮಿಗಳಿಗೂ ಮುಕ್ತಗೊಳಿಸಿದೆವು. ಇಂದು 'ವಿಕ್ರಮ್ -1' ತರಹದ ಯೋಜನೆಗಳ ಮೂಲಕ ಅದರ ಪ್ರತಿಫಲವನ್ನು ಕಾಣುತ್ತಿದ್ದೇವೆ ಎಂದು ಹೇಳಿದ್ದಾರೆ.
ಇದೇ ವೇಳೆ ಜಪಾನ್ ಓಪನ್ ಟೂರ್ನಿಯಲ್ಲಿ ಗೆದ್ದ ಪಿ.ವಿ. ಸಿಂಧು ಮತ್ತು ಲಾಡ್ಸ್‌ನಲ್ಲಿ ಐತಿಹಾಸಿಕ ಟೆಸ್ಟ್ ಗೆದ್ದ ಭಾರತ ಮಹಿಳಾ ತಂಡಕ್ಕೆ ಮೋದಿ ಅವರು ಅಭಿನಂದನೆ ತಿಳಿಸಿದ್ದಾರೆ.

