ಚಂಡೀಗಢ: ನೀಟ್ ಅಕ್ರಮದ ಬೆನ್ನಲ್ಲೇ ಆಮ್ ಆದ್ಮಿ ಪಕ್ಷ (ಎಎಪಿ) ಅಧಿಕಾರದಲ್ಲಿರುವ ಪಂಜಾಬ್‌ನಲ್ಲೂ ಪ್ರಶ್ನೆ ಪತ್ರಿಕೆ ಸೋರಿಕೆ ವಿವಾದ ಭುಗಿಲೆದ್ದಿದೆ.
ಈ ಕುರಿತು ಸ್ಪಷ್ಟನೆ ನೀಡಿರುವ ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್, 'ಎಎಪಿ ಅಧಿಕಾರಕ್ಕೆ ಬಂದ ಬಳಿಕ ಕಳೆದ ನಾಲ್ಕೂವರೆ ವರ್ಷಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಒಂದೇ ಒಂದು ಪ್ರಶ್ನೆಪತ್ರಿಕೆಯೂ ಸೋರಿಕೆಯಾಗಿಲ್ಲ' ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಹಲವು ಪ್ರಶ್ನೆಪತ್ರಿಕೆಗಳು ಸೋರಿಕೆಯಾಗಿವೆ ಎಂದು ಆರೋಪಿಸಿ ವಿರೋಧ ಪಕ್ಷಗಳು ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿವೆ. ಅಲ್ಲದೆ ಪಂಜಾಬ್ ಶಿಕ್ಷಣ ಸಚಿವರ ರಾಜೀನಾಮೆಗೆ ಬಿಜೆಪಿ ಒತ್ತಾಯಿಸಿದೆ.
'ಇತ್ತೀಚೆಗೆ ನಡೆದ ಫಾರ್ಮಸಿ ಆಫೀಸರ್ ಪರೀಕ್ಷೆಯ ಒಂದೇ ಒಂದು ಪ್ರಕರಣ ಬೆಳಕಿಗೆ ಬಂದಿತ್ತು. ಈ ಅಂತರರಾಜ್ಯ ನಕಲಿ ದಂಧೆಯನ್ನು ಪಂಜಾಬ್ ಪೊಲೀಸರು ಮಟ್ಟಹಾಕಿದ್ದಾರೆ' ಎಂದು ಮಾನ್ ತಿಳಿಸಿದ್ದಾರೆ.
'ನಾವು ಅಧಿಕಾರಕ್ಕೆ ಬಂದು ಕಳೆದ ನಾಲ್ಕೂವರೆ ವರ್ಷಗಳಾಗಿವೆ. ಪಂಜಾಬ್‌ನಲ್ಲಿ ಇದುವರೆಗೆ ಒಂದೇ ಒಂದು ಪ್ರಶ್ನೆಪತ್ರಿಕೆಯೂ ಸೋರಿಕೆಯಾಗಿಲ್ಲ' ಎಂದು ಅವರು ಪುನರುಚ್ಚರಿಸಿದ್ದಾರೆ.
ರಾಜ್ಯದಲ್ಲಿ ಅರ್ಹತೆಯ ಆಧಾರದಲ್ಲಿ 68,585 ಸರ್ಕಾರಿ ಹುದ್ದೆಗಳನ್ನು ನೀಡಲಾಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.

