ಪಾಟ್ನಾ: ಬಿಹಾರದ ಬಾಂಕೀಪುರ ವಿಧಾನಸಭೆ ಕ್ಷೇತ್ರದ ಉಪಚುನಾವಣೆಗೆ ಸಕಲ ಸಿದ್ಧತೆ ಮಾಡಿಕೊಂಡಿದ್ದ ಬಿಜೆಪಿ, ಕೊನೇ ಕ್ಷಣದಲ್ಲಿ ತನ್ನ ಅಭ್ಯರ್ಥಿಯನ್ನು ಬದಲಿಸಿದೆ. ನಾಮಪತ್ರ ಸಲ್ಲಿಸಿದ್ದ ಅಭಿಷೇಕ್ ಕುಮಾರ್ ಅವರನ್ನು ಕಣದಿಂದ ಹೊರಗೆಳೆದು, ನೀರಜ್ ಕುಮಾರ್ ಸಿನ್ಹಾ ಅವರನ್ನು ಸ್ಪರ್ಧೆಗಿಳಿಸಿದೆ. ಇದು, ಬಿಜೆಪಿಯ ಉನ್ನತ ನಾಯಕತ್ವಕ್ಕೆ ಅದರಲ್ಲೂ, ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿರುವ ನಿತಿನ್ ನವೀನ್ ಅವರಿಗೆ ಭಾರಿ ಮುಜುಗರವನ್ನುಂಟು ಮಾಡಿದೆ.
ನಿತಿನ್ ಅವರ ಆಪ್ತರೂ, ಬಿಜೆಪಿ ಯುವ ಮೋರ್ಚಾದ ನಾಯಕರೂ ಆಗಿರುವ ಅಭಿಷೇಕ್, ಕಣದಿಂದ ಹಿಂದೆ ಸರಿಯುತ್ತಿರುವುದಕ್ಕೆ 'ವೈಯಕ್ತಿಕ ಕಾರಣಗಳನ್ನು' ಮುಂದಿಟ್ಟಿದ್ದಾರೆ. ಆದರೆ, ಅವರ ತಂದೆ ಬರೋಬ್ಬರಿ ₹ 950 ಕೋಟಿ ಮೊತ್ತದ ಮೇವು ಹಗರಣದ ಆರೋಪಿಗಳಲ್ಲಿ ಒಬ್ಬರಾಗಿದ್ದಾರೆ ಎಂಬುದನ್ನು ಮೂಲಗಳು ಪ್ರಜಾವಾಣಿಯ ಸೋದರ ಪತ್ರಿಕೆ ಡೆಕ್ಕನ್ ಹೆರಾಲ್ಡ್‌ಗೆ ತಿಳಿಸಿವೆ.
ಅಭಿಷೇಕ್ ಅವರು ಇತರ ಆಕಾಂಕ್ಷಿಗಳಂತೆ ತಮ್ಮ ವಿವರವನ್ನು ಸಲ್ಲಿಸದಿದ್ದರೂ, ಕೇಸರಿ ಪಾಳೆಯವು ಅವರ ಹೆಸರನ್ನು ಅಂತಿಮಗೊಳಿಸಿತ್ತು. ನಿತಿನ್ ಆಪ್ತ ಎಂಬ ಒಂದೇ ಕಾರಣಕ್ಕೆ, ಅವರ (ಅಭಿಷೇಕ್ ಕುಮಾರ್) ಹಿನ್ನೆಲೆಯನ್ನೂ ಪರಿಶೀಲಿಸಿರಲಿಲ್ಲ.
'ಅಭಿಷೇಕ್ ಅವರ ತಂದೆ ರವೀಂದ್ರ ಪ್ರಸಾದ್, ಪಾಟ್ನಾ ಮೂಲದ ಮಗಧ್ ಕೆಮಿಕಲ್ ಕಾರ್ಪೊರೇಷನ್‌ನಲ್ಲಿ ಅಧಿಕಾರಿಯಾಗಿದ್ದರು. ಮೇವು ಅಥವಾ ಔಷಧವನ್ನು ಸರಬರಾಜು ಮಾಡದೆಯೂ ನಕಲಿ ಬಿಲ್‌ಗಳ ಮೂಲಕವೇ ಪಶುಸಂಗೋಪನಾ ಇಲಾಖೆಯ ಕೋಟ್ಯಂತರ ರೂಪಾಯಿಯನ್ನು ದುರುಪಯೋಗಪಡಿಸಿಕೊಂಡ ಆರೋಪ ಅವರ ಮೇಲಿತ್ತು' ಎಂಬುದಾಗಿ ಹೆಸರು ಹೇಳಲು ಬಯಸದ ಬಿಜೆಪಿಯ ಹಿರಿಯ ನಾಯಕರೊಬ್ಬರು ಮಾಹಿತಿ ನೀಡಿದ್ದಾರೆ.
ಬಿಹಾರ: ಪ್ರಶಾಂತ್ ಕಿಶೋರ್ ಸ್ಪರ್ಧೆಬಿಹಾರ| ಜನರು ಬದಲಾವಣೆ ತನ್ನಿ: ಮತ ಚಲಾಯಿಸಿದ ಬಳಿಕ ಪ್ರಶಾಂತ್ ಕಿಶೋರ್ ಹೇಳಿಕೆ
ಅಭಿಷೇಕ್ ಅವರ ಹಿನ್ನೆಲೆ ಬಗ್ಗೆ ತಿಳಿಯುತ್ತಿದ್ದಂತೆ ಬಿಜೆಪಿ ಎಚ್ಚೆತ್ತುಕೊಂಡಿತ್ತು. ಕೂಡಲೇ ಪತ್ರಿಕಾಗೋಷ್ಟಿ ಕರೆದು, ವೈಯಕ್ತಿಕ ಕಾರಣಗಳಿಂದಾಗಿ ಉಪಚುನಾವಣೆಯಲ್ಲಿ ಕಣಕ್ಕಿಳಿಯುತ್ತಿಲ್ಲ ಎಂದು ಘೋಷಿಸುವಂತೆ ಅವರಿಗೆ ಸೂಚನೆ ನೀಡಿತ್ತು ಎನ್ನಲಾಗಿದೆ.
ನಂತರ ಉನ್ನತ ನಾಯಕರು ಸಭೆ ನಡೆಸಿ, ತಮ್ಮಲ್ಲಿಗೆ ಬಂದಿದ್ದ ಎಲ್ಲ ಆಕಾಂಕ್ಷಿಗಳ ವೈಯಕ್ತಿಕ ವಿವರಗಳನ್ನು ಪರಿಶೀಲನೆ ನಡೆಸಿದ್ದರು. 'ನಿತಿನ್ ಅವರದ್ದೇ ಜಾತಿಯ (ಕಾಯಸ್ಥಾ) ಹಾಗೂ ಅವರೊಂದಿಗೆ ಈ ಹಿಂದೆ ಬಿಜೆಪಿ ಯುವ ಮೋರ್ಚಾದಲ್ಲಿ ಕೆಲಸ ಮಾಡಿದ್ದ ನೀರಜ್ ಕುಮಾರ್ ಸಿನ್ಹಾ ಅವರ ಹೆಸರನ್ನು ಸಭೆಯಲ್ಲಿ ಅಂತಿಮಗೊಳಿಸಲಾಗಿದೆ' ಎಂದು ಮೂಲಗಳು ತಿಳಿಸಿವೆ.
'ಬಾಂಕಿಪುರದಲ್ಲಿ ಕಣಕ್ಕಿಳಿದಿರುವ ಜನ ಸುರಾಜ್ ಪಕ್ಷದ ನಾಯಕ ಪ್ರಶಾಂತ್ ಕಿಶೋರ್ ಅವರು ಅಭಿಷೇಕ್ ಹಿನ್ನೆಲೆಯನ್ನು ಬಹಿರಂಗಪಡಿಸಲು ಮುಂದಾಗಿದ್ದರು. ಅವರ ತಂದೆ ಮೇವು ಹಗರಣದ ಆರೋಪಿಯಾಗಿರುವ ವಿಚಾರವನ್ನು ಮುಂದಿಟ್ಟುಕೊಂಡು ಬಿಜೆಪಿಯನ್ನು ಹಣಿಯಲು ಸಜ್ಜಾಗಿದ್ದರು. ಅದನ್ನು ಅರಿತ ಬಿಜೆಪಿ, ಹಾನಿಯನ್ನು ತಡೆಯಲು ತರಾತುರಿಯಲ್ಲಿ ಕ್ರಮ ಕೈಗೊಂಡಿದೆ. 1995ರಿಂದ 2025ರ ವರೆಗೆ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದ ನಿತಿನ್ ನವೀನ್ ಅಜೇಯವಾಗಿದ್ದರು' ಎಂದು ರಾಜಕೀಯ ವಿಶ್ಲೇಷಕ ಅಜಯ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.ಹಾನಿ ತಪ್ಪಿಸಿಕೊಳ್ಳಲು ತರಾತುರಿಯಲ್ಲಿ ಕ್ರಮ
ಬೆದರಿಸುತ್ತಿದ್ದವರೇ ಬೆದರಿದ್ದಾರೆ!
ಪಿಕೆ ಎಂದೇ ಜನಪ್ರಿಯರಾಗಿರುವ ಪ್ರಶಾಂತ್ ಅವರಿಗೆ ಈ ಬೆಳವಣಿಗೆ ಹರ್ಷ ತಂದಿದೆ. 'ಪ್ರಜಾಪ್ರಭುತ್ವದಲ್ಲಿ ಮತದಾರರೇ ಪ್ರಭುಗಳು. ಬಿಜೆಪಿಯು ಈವರಗೆ ತನಿಖಾ ಸಂಸ್ಥೆಗಳನ್ನು (ಇ.ಡಿ. / ಸಿಬಿಐ) ಹಾಗೂ ಆದಾಯ ತೆರಿಗೆ ಇಲಾಖೆಯನ್ನು ದುರುಪಯೋಗ ಮಾಡಿಕೊಂಡು ತನ್ನ ಎದುರಾಳಿಗಳಿಗೆ ಬೆದರಿಕೆ ಹಾಕುತ್ತಿತ್ತು. ಆದರೆ, ಇಲ್ಲಿ ಬಟಾ ಬಯಲಾಗುವ ಭಯದಿಂದ ಬಿಜೆಪಿ ಅಭ್ಯರ್ಥಿ ಕಣದಿಂದ ಪಲಾಯನ ಮಾಡಿರುವುದನ್ನು ನೋಡಬಹುದು' ಎಂದು ಅವರು ಹೇಳಿದ್ದಾರೆ.
ನಾಮಪತ್ರ ಸಲ್ಲಿಕೆಗೆ ಕೊನೇ ದಿನವಾಗಿರುವ ಜುಲೈ 13ರಂದು ತಮ್ಮ ಉಮೇದುವಾರಿಕೆ ಸಲ್ಲಿಸಲು ಪಿಕೆ ನಿರ್ಧರಿಸಿದ್ದಾರೆ. ಬಿಜೆಪಿಯ ನೂತನ ಅಭ್ಯರ್ಥಿ ನೀರಜ್ ಕೂಡ ಅದೇ ದಿನ ನಾಮಪತ್ರ ಸಲ್ಲಿಸಲಿದ್ದಾರೆ. ಮಹಾಘಟಬಂಧನ್ ಅಭ್ಯರ್ಥಿಯಾಗಿ ಆರ್‌ಜೆಡಿಯ ರೇಖಾ ಗುಪ್ತಾ ಕಣದಲ್ಲಿದ್ದಾರೆ. ಹೀಗಾಗಿ, ಜುಲೈ 30ರಂದು ನಡೆಯುವ ಉಪ ಚುನಾವಣೆಯಲ್ಲಿ ತ್ರಿಕೋನ ಪೈಪೋಟಿಯನ್ನು ನಿರೀಕ್ಷಿಸಬಹುದಾಗಿದೆ. ಆಗಸ್ಟ್ 3ರಂದು ಫಲಿತಾಂಶ ಪ್ರಕಟವಾಗಲಿದೆ.
ನಿತಿನ್ ನವೀನ್ ಅವರು ರಾಜ್ಯಸಭೆಗೆ ಆಯ್ಕೆಯಾಗಿರುವುದರಿಂದ ಈ ಕ್ಷೇತ್ರ ತೆರವಾಗಿದೆ.

