ಟೆಹರಾನ್: ಅಮೆರಿಕ-ಇಸ್ರೇಲ್ ವಾಯುದಾಳಿಯಲ್ಲಿ ಮೃತಪಟ್ಟ 131 ದಿನಗಳ ಬಳಿಕ ಇರಾನ್‌ನ ಸರ್ವೋಚ್ಚ ನಾಯಕ ಆಯಾತುಲ್ಲಾ ಅಲಿ ಖಾಮಿನೈ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಶುಕ್ರವಾರ ಅವರ ಹುಟ್ಟೂರಾದ ಮಶ್ಹಾದ್‌ನಲ್ಲಿ ಸಹಸ್ರಾರು ಜನರ ಸಮಕ್ಷಮದಲ್ಲಿ ನೆರವೇರಿಸಲಾಯಿತು.
ಖಾಮಿನೈ ಜೊತೆಗೆ ವಾಯುದಾಳಿಯಲ್ಲಿ ಮೃತಪಟ್ಟ ಅವರ ಕುಟುಂಬದ ಇತರ ನಾಲ್ವರು ಸದಸ್ಯರ ಮೃತದೇಹಗಳನ್ನು ಕೂಡಾ ದಫನ ಮಾಡಲಾಯಿತು.
ಮಶ್ಹಾದ್‌ನ ಇಮಾಮ್ ರೆಝಾ ಮಸೀದಿಯ ದಾರ್ ಅಲ್- ಝಿಕ್ರ್ ವಿಭಾಗದಲ್ಲಿ ದಿವಂಗತ ನಾಯಕನ 'ಪವಿತ್ರ ದೇಹ'ವನ್ನು ಶುಕ್ರವಾರ ಮುಂಜಾನೆ ದಫನಗೊಳಿಸಲಾಯಿತೆಂದು, ಖಾಮಿನೈ ಅವರ ಅಧಿಕೃತ 'ಎಕ್ಸ್' ಖಾತೆಯಲ್ಲಿ ಘೋಷಿಸಲಾಗಿದೆ.
ಇರಾನ್‌ನಲ್ಲಿ ಶಿಯಾ ಮುಸ್ಲಿಮರ ಪವಿತ್ರ ಸ್ಥಳಗಳಲ್ಲೊಂದಾದ ಮಶ್ಹಾದ್‌ಗೆ ತಂದಾಗ ಖಾಮಿನೈ ಹಾಗೂ ಅವರ ಇತರ ನಾಲ್ವರು ಕುಟುಂಬ ಸದಸ್ಯರ ಮೃತದೇಹಗಳನ್ನು ತೆರೆದ ವಾಹನಗಳಲ್ಲಿ ತಂದಾಗ ರಸ್ತೆಯ ಇಕ್ಕೆಲಗಳಲ್ಲಿ ಸಹಸ್ರಾರು ಜನರು ಜಮಾಯಿಸಿದ್ದರು. ದಫನ ವಿಧಿಗಳನ್ನು ವೀಕ್ಷಿಸಲು ಕಾದುನಿಂತಿದ್ದ ಶೋಕತಪ್ತ ಜನರು ತಮ್ಮ ಎದೆಗಳನ್ನು ಬಡಿದುಕೊಳ್ಳುತ್ತಾ ರೋದಿಸುತ್ತಿರುವುದು ಕಂಡುಬಂತು.
ಇರಾನ್ ಸಂಸತ್‌ನ ಸ್ಪೀಕರ್ ಮೊಹಮ್ಮದ್ ಬಾಘೆರ್ ಗಾಲಿಬಾಫ್, ಮುಖ್ಯ ನ್ಯಾಯಾಧೀಶ ಗೊಲಾಮ್‌ಹೊಸ್ಸೈನ್ (ಗುಲಾಮ್‌ಹುಸ್ಸೈನ್) ಮೊಹ್ಸೆನ್ ಎಜೆಯಿ ಹಾಗೂ ಖಾಮಿನೈ ಅವರ ಹಿರಿಯ ಪುತ್ರ ಮುಸ್ತಫಾ ಖಾಮಿನೈ ಅವರು ಅಂತ್ಯಕ್ರಿಯೆ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು.
ಆದರೆ ಖಾಮಿನೈ ಅವರ ಪುತ್ರ ಹಾಗೂ ಉತ್ತರಾಧಿಕಾರಿ , ಮೊಜ್ತಾಬಾ ಖಾಮಿನೈ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿಲ್ಲವೆಂದು ತಿಳಿದುಬಂದಿದೆ. ಆದರೆ ಅಮೆರಿಕ-ಇರಾನ್ ದಾಳಿಯಲ್ಲಿ ಆಯಾತುಲ್ಲಾ ಅಲಿ ಖಾಮಿನೈ ಹಾಗೂ ಅವರ ಇತರ ನಾಲ್ವರು ಕುಟುಂಬ ಸದಸ್ಯರು ಮೃತಪಟ್ಟ ಬಳಿಕ ಮತ್ತು ಯುದ್ಧ ಆರಂಭವಾದಾಗಿನಿಂದ ಮೊಜ್ತಾಬಾ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಅವರದ್ದೆನ್ನಲಾದ ಲಿಖಿತ ಹೇಳಿಕೆಗಳನ್ನು ಇರಾನ್ ಆಡಳಿತ ಬಿಡುಗಡೆಗೊಳಿಸಿದೆಯಾದರೂ ಅವರ ಯಾವುದೇ ಭಾವಚಿತ್ರಗಳನ್ನು, ವೀಡಿಯಗಳನ್ನು ಅಥವಾ ಧ್ವನಿ ಮುದ್ರಿತ ದಾಖಲೆಗಳನ್ನು ಈತನಕ ಬಹಿರಂಗಪಡಿಸಲಾಗಿಲ್ಲ.
ಇರಾನ್ ನಾಗರಿಕರಿಂದ ಟ್ರಂಪ್ ಪ್ರತಿಕೃತಿ ದಹನ
ಮಶ್ಹಾದ್‌ನಲ್ಲಿ ಇರಾನ್‌ನ ಸರ್ವೋಚ್ಚ ನಾಯಕ ಆಯಾತುಲ್ಲಾ ಅಲಿ ಖಾಮಿನೈ ಅವರ ಅಂತ್ಯಕ್ರಿಯೆಗೆ ಮುನ್ನ ನೂರಾರು ಶೋಕತಪ್ತ ಇರಾನ್ ನಾಗರಿಕರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಬೃಹತ್ ಪ್ರತಿಕೃತಿಗೆ ಬೆಂಕಿ ಹಚ್ಚಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.
ಟ್ರಂಪ್ ಅವರ ಪ್ರತಿಕೃತಿ ದಹನದ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಮಿಂಚಿನಂತೆ ಹರಿದಾಡುತ್ತಿದ್ದು, ವೈರಲ್ ಆಗಿದೆ. ಪ್ರತಿಕೃತಿಯನ್ನು ಕ್ರೇನ್‌ನಲ್ಲಿ ನೇತುಹಾಕಿದ ಶೋಕತಪ್ರ ನಾಗರಿಕರು, ಉರಿಯುವ ಕೊಳ್ಳಿಗಳಿಂದ ಅದಕ್ಕೆ ಬೆಂಕಿ ಹಚ್ಚುತ್ತಿರುವುದನ್ನು ವೀಡಿಯೊದಲ್ಲಿ ತೋರಿಸಲಾಗಿದೆ.

