ನವದೆಹಲಿ: ಆಡಳಿತಾರೂಢ ಮೈತ್ರಿಕೂಟದ ಮಿತ್ರ ಪಕ್ಷಗಳ ಸಂಸದರು ಭಾಗವಹಿಸುವ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ(ಎನ್‌ಡಿಎ) ಸಂಸದೀಯ ಪಕ್ಷದ ಸಭೆಗಳು ಸಾಮಾನ್ಯವಾಗಿ ಮಂಗಳವಾರದಂದು ನಡೆಯುವುದರಿಂದ, ಇನ್ನು ಮುಂದೆ ಅವುಗಳನ್ನು 'ಮಂಗಳ ಮಿಲನ' ಎಂದು ಕರೆಯಲಾಗುವುದು ಎಂದು ಮೂಲಗಳು ತಿಳಿಸಿವೆ.
ಹೊಸ ಸದಸ್ಯರ ನಾಮ ನಿರ್ದೇಶನದ ಬಳಿಕ ಎನ್‌ಡಿಎ ಸಂಸದೀಯ ಪಕ್ಷದ ಮೊದಲ ಸಭೆಯು ಸಂಸತ್ತಿನ ಮುಂಗಾರು ಅಧಿವೇಶನ ಆರಂಭದ ನಂತರ ಜುಲೈ 21ರಂದು ಸಂಸತ್ ಭವನದ ಸಂಕೀರ್ಣದಲ್ಲಿ ನಡೆಯಲಿದೆ.
'ಜುಲೈ 21ರಂದು ನಡೆಯಲಿರುವ ಎನ್‌ಡಿಎ ಸಂಸದೀಯ ಪಕ್ಷದ ಸಭೆಯನ್ನು ಮಂಗಳ ಮಿಲನ ಎಂದು ಕರೆಯಲಾಗುತ್ತದೆ' ಎಂದು ಮೂಲಗಳು ತಿಳಿಸಿವೆ.
ಇತ್ತೀಚೆಗೆ, ನಡೆದ ಕೇಂದ್ರದ ಸಂಪುಟ ಸಭೆಯಲ್ಲೂ ಈ ಬಗ್ಗೆ ಚರ್ಚೆ ನಡೆದಿದ್ದು, ಎನ್‌ಡಿಎ ಸಂಸದೀಯ ಪಕ್ಷದ ಸಭೆ ಮರುನಾಮಕರಣ ಮಾಡುವ ಬಗ್ಗೆ ಸಚಿವರಿಗೆ ಅನೌಪಚಾರಿಕವಾಗಿ ಮಾಹಿತಿ ನೀಡಲಾಗಿದೆ.
ಮುಂಗಾರು ಅಧಿವೇಶನದ ಹಿನ್ನೆಲೆ ಭಾನುವಾರ ಸರ್ವಪಕ್ಷ ಸಭೆ ಕರೆಯಲಾಗಿದೆ.
ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು 'ನ್ಯಾಷನಲಿಸ್ಟ್ ಸಿಟಿಜನ್ಸ್ ಪಾರ್ಟಿ ಆಫ್ ಇಂಡಿಯಾ' (ಎನ್‌ಸಿಪಿಐ) ಅನ್ನು ಅಧಿಕೃತವಾಗಿ ಮಾನ್ಯ ಮಾಡಿದರೆ, ಆ ಪಕ್ಷದ ಸದನದ ನಾಯಕರನ್ನು ಸರ್ವಪಕ್ಷ ಸಭೆಗೆ ಆಹ್ವಾನಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ತೃಣಮೂಲ ಕಾಂಗ್ರೆಸ್ ತೊರೆದು 'ನ್ಯಾಷನಲಿಸ್ಟ್ ಸಿಟಿಜನ್ಸ್ ಪಾರ್ಟಿ ಆಫ್ ಇಂಡಿಯಾ' ಸೇರ್ಪಡೆಗೊಂಡಿರುವ ಲೋಕಸಭಾ ಸಂಸದರಾದ ಸುದೀಪ್ ಬಂದ್ಯೋಪಾಧ್ಯಾಯ ಮತ್ತು ಕಾಕೋಲಿ ಘೋಷ್ ದಸ್ತಿದಾರ್ ಅವರು, ಕ್ರಮವಾಗಿ ಈ ಹೊಸ ಪಕ್ಷದ ಸದನದ ನಾಯಕ ಮತ್ತು ಮುಖ್ಯ ಸಚೇತಕರಾಗುವ ಸಾಧ್ಯತೆ ಇದೆ.
ಕಳೆದ ತಿಂಗಳು ಇತರ 18 ಸಂಸದರೊಂದಿಗೆ ಟಿಎಂಸಿ ನಾಯಕತ್ವದ ವಿರುದ್ಧ ಬಂಡಾಯವೆದ್ದಿದ್ದ ಈ ನಾಯಕರು, ನಂತರ ಎನ್‌ಸಿಪಿಐ ಸೇರ್ಪಡೆಯಾಗಿರುವುದಾಗಿ ಘೋಷಿಸಿದ್ದರು. ಸೋಮವಾರ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿಯಾಗಿದ್ದ ಈ ಸಂಸದರು, ಈ ವೇಳೆ ಕೆಳಮನೆಯಲ್ಲಿ ತಮ್ಮ ಪಕ್ಷದ 20 ಸಂಸದರಿಗೆ ಆಸನ ವ್ಯವಸ್ಥೆ ಕಲ್ಪಿಸುವ ಕುರಿತು ಚರ್ಚಿಸಿದರು ಎಂದು ಮೂಲಗಳು ತಿಳಿಸಿವೆ.

