ನವದೆಹಲಿ: ರಾಮ ಮಂದಿರ ಟ್ರಸ್ಟ್ ರಚನೆ ಕುರಿತಂತೆ ಸಂಸತ್ತಿನಲ್ಲಿ ಘೋಷಣೆ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ, ನಂಬಿಕೆ ದ್ರೋಹ ಎಸಗಿರುವ ಆ ಟ್ರಸ್ಟ್ ದೇಣಿಗೆ ಕಳ್ಳತನ ಕುರಿತಂತೆ ಸಂಸತ್ತಿನಲ್ಲಿ ಮೌನ ಮುರಿಯಬೇಕು ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಒತ್ತಾಯಿಸಿದ್ದಾರೆ.
ಸಂಸತ್ತಿನ ಮುಂಗಾರು ಅಧಿವೇಶನ ಆರಂಭಕ್ಕೂ ಮುನ್ನ ಪಿಟಿಐ ಜೊತೆ ಮಾತನಾಡಿರುವ ಅವರು, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ರಾಮ ಮಂದಿರ ತೀರ್ಥ ಕ್ಷೇತ್ರ ಟ್ರಸ್ಟ್ ರಚನೆ ಕುರಿತಂತೆ ಸಂಸತ್ತಿನಲ್ಲೇ ಘೋಷಣೆ ಮಾಡಿದ್ದರು. ಈಗ ಅದು ನಡೆಸಿರುವ ಅಕ್ರಮದ ಕುರಿತಂತೆ ಉಭಯ ಸದನಗಳಲ್ಲಿ ಹೇಳಬೇಕು ಎಂದಿದ್ದಾರೆ.
'2020ರ ಫೆಬ್ರುವರಿ 5ರಂದು, ಪ್ರಧಾನ ಮಂತ್ರಿಯವರು ಲೋಕಸಭೆಯಲ್ಲಿ ಎದ್ದು ನಿಂತು, ತಮ್ಮ ಸರ್ಕಾರವು 'ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್' ಅನ್ನು ಸ್ಥಾಪಿಸುತ್ತಿದೆ ಎಂಬ ಘೋಷಣೆ ಮಾಡಿದ್ದರು. ಈ ಘೋಷಣೆ ಮಾಡಲೆಂದೇ ಅಪರೂಪಕ್ಕೆ ಅವರು ಸಂಸತ್ತಿಗೆ ಬಂದಿದ್ದರು' ಎಂದು ರಮೇಶ್ ಹೇಳಿದ್ದಾರೆ.
ಈ ಟ್ರಸ್ಟ್ ಅನ್ನು ಪ್ರಧಾನ ಮಂತ್ರಿಯವರೇ ಸ್ಥಾಪಿಸಿದ್ದಾರೆ. ಇದರಲ್ಲಿ ಅವರೇ ನೇಮಕ ಮಾಡಿದ ವ್ಯಕ್ತಿಗಳಿದ್ದಾರೆ ಎಂದು ಹೇಳಿದ ರಮೇಶ್, ಟ್ರಸ್ಟ್‌ನ ಚಟುವಟಿಕೆಗಳು, ಕಾರ್ಯಗಳು ಮತ್ತು ಅದರ ಕಾರ್ಯವ್ಯಾಪ್ತಿಯ ನಿಯಮಾವಳಿಗಳನ್ನು ಮೋದಿಯವರೇ ನಿಗದಿಪಡಿಸಿದ್ದರು ಎಂದು ತಿಳಿಸಿದ್ದಾರೆ.
'ಈಗ ಕೋಟ್ಯಂತರ ಭಾರತೀಯರ ನಂಬಿಕೆಗೆ ದ್ರೋಹ ಬಗೆದಿರುವುದು ಇದೇ ಟ್ರಸ್ಟ್. ಈ ಟ್ರಸ್ಟ್‌ನಲ್ಲಿ ಈಗ 'ಚಂದಾ ಚೋರಿ' (ದೇಣಿಗೆಯ ಹಣದ ಲೂಟಿ) ಮತ್ತು 'ಆಸ್ಥಾ ಧೋಕಾ' (ನಂಬಿಕೆ ದ್ರೋಹ) ನಡೆದಿದೆ'ಎಂದು ರಮೇಶ್ ಆರೋಪಿಸಿದ್ದಾರೆ.
'ಸದನದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮೌನ ಮುರಿಯಬೇಕು. ಟ್ರಸ್ಟ್ ಘೋಷಿಸಿದ್ದು ಅವರೇ ಆಗಿರುವುದರಿಂದ ಅದರ ಅಕ್ರಮದ ಬಗ್ಗೆಯೂ ಮಾತನಾಡುವ ಮೂಲಕ ಸಂಸತ್ತನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಅತ್ಯಂತ ಸೂಕ್ತವಾಗಿದೆ. ಅಲ್ಲಿ ಏನಾಗಿದೆ? ದೇಣಿಗೆ ಲೂಟಿ, ನಂಬಿಕೆ ದ್ರೋಹ ಆಗಿದ್ದಾದರೂ ಹೇಗೆ? ಎಂಬುದನ್ನು ತಿಳಿಸಬೇಕು. ಟ್ರಸ್ಟ್ ರಚನೆ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದ ಅವರು, ಈಗ ಅದಕ್ಕೆ ಸ್ಪಷ್ಟನೆ ನೀಡಬೇಕು' ಎಂದು ಒತ್ತಾಯಿಸಿದ್ದಾರೆ.

