ದುಬೈ: ಅಮೆರಿಕ ಪಡೆಗಳು ಇರಾನ್ ಮೇಲಿನ ದಾಳಿಗಳನ್ನು ಸೋಮವಾರ ತೀವ್ರಗೊಳಿಸಿವೆ. ಇದಕ್ಕೆ ಪ್ರತೀಕಾರವಾಗಿ, ಅಮೆರಿಕವು ಬಹರೇನ್‌ನಲ್ಲಿ ಸ್ಥಾಪಿಸಿರುವ ನೌಕಾಪಡೆಯ 5ನೇ ತುಕಡಿ ಹಾಗೂ ಹಾಗೂ ಕುವೈತ್‌ನಲ್ಲಿ ಹೊಂದಿರುವ ಸೇನಾನೆಲೆ ಗುರಿಯಾಗಿಸಿ ಇರಾನ್ ದಾಳಿ ನಡೆಸಿದೆ.
ಎರಡೂ ದೇಶಗಳು ನಾಗರಿಕ ಮೂಲಸೌಕರ್ಯಗಳನ್ನು ಗುರಿಯಾಗಿಸಿ ದಾಳಿ ನಡೆಸುತ್ತಿವೆ. ಕಚ್ಚಾ ತೈಲ ಬೆಲೆಯೂ ಹೆಚ್ಚಳವಾಗಿದ್ದು, ಜಾಗತಿಕವಾಗಿ ಇಂಧನ ಬೆಲೆ ಮೇಲೆ ಪರಿಣಾಮ ಉಂಟಾಗಿದೆ.
ಇರಾನ್ ನಡೆಸಿದ್ದ ದಾಳಿಯಲ್ಲಿ ತನ್ನ ಸೈನಿಕನೊಬ್ಬ ಮೃತಪಟ್ಟಿದ್ದನ್ನು ದೃಢಪಡಿಸಿದ್ದ ಬೆನ್ನಲ್ಲೇ, ಅಮೆರಿಕ ಈ ದಾಳಿಗಳನ್ನು ಆರಂಭಿಸಿದೆ. ಇದರೊಂದಿಗೆ, ಉಭಯ ದೇಶಗಳು ಪೂರ್ಣಪ್ರಮಾಣದ ಯುದ್ಧದಲ್ಲಿ ತೊಡಗುವತ್ತ ಸಾಗಿದಂತಾಗಿದೆ. ಮಧ್ಯಂತರ ಶಾಂತಿ ಒಪ್ಪಂದವೂ ಮುರಿದುಬಿದ್ದಂತಾಗಿದ್ದು, ಹೊರ್ಮುಜ್ ಜಲಸಂಧಿ ಮೂಲಕ ಹಡಗುಗಳ ಸಂಚಾರಕ್ಕೂ ಸಂಚಕಾರ ಬಂದೊದಗಿದೆ.
'ಇರಾಕ್‌ನಲ್ಲಿನ ಸೇನಾ ನೆಲೆ ಗುರಿಯಾಗಿಸಿ ಇರಾನ್ ನಡೆಸಿದ್ದ ದಾಳಿಯಲ್ಲಿ ನಮ್ಮ ಯೋಧನೊಬ್ಬ ಮೃತಪಟ್ಟಿದ್ದ. ಆ ಯೋಧನ ಗೌರವಾರ್ಥ ಇರಾನ್ ಮೇಲೆ ಭೀಕರ ದಾಳಿ ನಡೆಸಿದ್ದೇವೆ' ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಅಮೆರಿಕ ನಡೆಸಿದ ದಾಳಿಯಿಂದಾಗಿ ಉಂಟಾಗಿರುವ ಪ್ರಾಣಹಾನಿ ಅಥವಾ ಆಸ್ತಿಗಳು ನಾಶವಾಗಿರುವ ಕುರಿತಂತೆ ಇರಾನ್ ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
'ದೇಶದ ದಕ್ಷಿಣ ಮತ್ತು ವಾಯವ್ಯ ಭಾಗಗಳಲ್ಲಿ ಸ್ಫೋಟಗಳ ಸದ್ದು ಕೇಳಿಬಂದಿದೆ' ಎಂಬುದಾಗಿ ಸರ್ಕಾರಿ ಒಡೆತನದ ಮಾಧ್ಯಮ ವರದಿ ಮಾಡಿದೆ.
9ನೇ ದಾಳಿ: 'ಇರಾನ್ ಮೇಲೆ 9ನೇ ಬಾರಿ ದಾಳಿ ನಡೆಸಲಾಗಿದೆ. ಸೇನೆಯ ಕಮಾಂಡ್ ಸೆಂಟರ್‌ಗಳು, ವಾಯು ರಕ್ಷಣಾ ಪ್ರದೇಶ, ಕರಾವಳಿ ಕಣ್ಗಾವಲು ಕೇಂದ್ರಗಳು, ಕ್ಷಿಪಣಿ ಮತ್ತು ಡ್ರೋನ್ ಉಡ್ಡಯನ ನೆಲೆಗಳು ಹಾಗೂ ಸಂವಹನ ಜಾಲಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ' ಎಂದು ಅಮೆರಿಕ ಸೇನೆಯ ಸೆಂಟ್ರಲ್ ಕಮಾಂಡ್ ಹೇಳಿದೆ.
ಪ್ರಮುಖ ಅಂಶಗಳು
* ಬಹರೇನ್‌ನಲ್ಲಿರುವ ಅಮೆರಿಕ ನೆಲೆಗಳನ್ನು ಗುರಿಯಾಗಿಸಿ ಇರಾನ್ ದಾಳಿ ಆರಂಭಿಸಿದ ಬೆನ್ನಲ್ಲೇ ಸೈರನ್‌ಗಳು ಮೊಳಗಿ ಜನರಿಗೆ ಎಚ್ಚರಿಕೆ ನೀಡಿದವು
* ಇರಾನ್‌ನ ಕ್ಷಿಪಣಿಗಳು ಡ್ರೋನ್‌ಗಳನ್ನು ತನ್ನ ವಾಯುರಕ್ಷಣಾ ವ್ಯವಸ್ಥೆ ಹೊಡೆದುರುಳಿಸಿದೆ ಎಂದು ಕುವೈತ್ ಹೇಳಿದೆ
ಹಲವೆಡೆ ದಾಳಿ: ಐಆರ್‌ಎನ್‌ಎ
ವಾಯವ್ಯ ಭಾಗದಲ್ಲಿರುವ ತಬ್ರಿಜ್ ನಗರದ ಮೇಲೆ ಅಮೆರಿಕ ನಡೆಸಿದ ದಾಳಿಯಲ್ಲಿ ಕನಿಷ್ಠ ಒಬ್ಬ ವ್ಯಕ್ತಿ ಮೃತಪಟ್ಟಿದ್ದಾಗಿ ಸರ್ಕಾರಿ ಒಡೆತನದ ಸುದ್ದಿಸಂಸ್ಥೆ ಐಆರ್‌ಎನ್‌ಎ ತಿಳಿಸಿದೆ.
ಈ ನಗರವು ರಾಜಧಾನಿ ಟೆಹರಾನ್‌ನಿಂದ 520 ಕಿ.ಮೀ. ದೂರಲ್ಲಿದೆ. ಈ ನಗರದಲ್ಲಿ ಐಆರ್‌ಜಿಸಿ ಭೂಗತ ನೆಲೆಗಳನ್ನು ಸ್ಥಾಪಿಸಿ ಕ್ಷಿಪಣಿಗಳನ್ನು ಸಂಗ್ರಹಿಸಿದೆ ಎಂದು ಹೇಳಲಾಗುತ್ತಿದೆ. ಖುಜೆಸ್ತಾನ್ ಪ್ರಾಂತ್ಯದಲ್ಲಿನ ಬಂದರ್ ಇಮಾಮ್ ಖೋಮೇನಿ ಹೊರ್ಮೊಜ್‌ಗನ್ ಪ್ರಾಂತ್ಯದ ಸಿರಿಕ್ ಹಾಗೂ ಜಸ್ಕ್ ಸಿಸ್ತಾನ್ ಪ್ರಾಂತ್ಯದ ಕೊನಾರಕ್ ಹಾಗೂ ಬಲೂಚಿಸ್ತಾನ ಪ್ರಾಂತ್ಯದ ಚಬಹಾರ್ ಗುರಿಯಾಗಿಸಿ ಅಮೆರಿಕ ದಾಳಿ ನಡೆಸಿರುವ ಸಾಧ್ಯತೆ ಇದೆ ಎಂದು ಐಆರ್‌ಎನ್‌ಎ ವರದಿ ಮಾಡಿದೆ.
ಹೊರ್ಮುಜ್ ಜಲಸಂಧಿಯಲ್ಲಿ ಓಮಾನ್ ಕರಾವಳಿ ಸಮೀಪ ನೌಕೆಯೊಂದಕ್ಕೆ ಬೆಂಕಿ ಹೊತ್ತುಕೊಂಡಿತ್ತು. ಈ ಅವಘಡಕ್ಕೆ ಏನು ಕಾರಣ ಎಂಬುದು ಗೊತ್ತಾಗಿಲ್ಲ ಎಂದು ಬ್ರಿಟಿಷ್ ಸೇನೆ ಹೇಳಿದೆ. ಇನ್ನೊಂದೆಡೆ ಜಲಸಂಧಿಯಲ್ಲಿ ಸಾಗುವ ಹಡಗುಗಳನ್ನು ಗುರಿಯಾಗಿಸಿ ದಾಳಿ ನಡೆಸುತ್ತಿರುವುದಾಗಿ ಇರಾನ್‌ನ ಐಆರ್‌ಜಿಸಿ ಹೇಳಿಕೊಂಡಿದೆ.

