ನವದೆಹಲಿ: ಜಂತರ್ ಮಂತರ್‌ನಲ್ಲಿ ಅನಿರ್ದಿಷ್ಟಾವಧಿ ಉಪವಾಸ ಮುಷ್ಕರ ನಡೆಸುತ್ತಿರುವ ಶಿಕ್ಷಣ ತಜ್ಞ ಮತ್ತು ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರ ಆರೋಗ್ಯ ಸ್ಥಿತಿ ಬುಧವಾರ ಮತ್ತಷ್ಟು ಕ್ಷೀಣಿಸಿದೆ.
ಅವರ ಅನಿರ್ದಿಷ್ಟಾವಧಿ ಉಪವಾಸ ಮುಷ್ಕರ 11ನೇ ದಿನಕ್ಕೆ ಕಾಲಿರಿಸಿದ್ದು, ಅವರನ್ನು ಪರೀಕ್ಷಿಸಿದ ವೈದ್ಯರು 7 ಕಿ.ಗ್ರಾಂ.ಗಿಂತಲೂ ಅಧಿಕ ತೂಕ ಕಳೆದುಕೊಂಡಿರುವುದಾಗಿ ವರದಿ ಮಾಡಿದ್ದಾರೆ.
ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಪರೀಕ್ಷೆ ಅಕ್ರಮ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಸಚಿವ ಧಮೇಂದ್ರ ಪ್ರಧಾನ್ ಅವರ ರಾಜೀನಾಮೆ ನೀಡುವಂತೆ ಮತ್ತು ಸರಕಾರ ಹೊಣೆ ಹೊತ್ತುಕೊಳ್ಳುವಂತೆ ಆಗ್ರಹಿಸಿ ನಡೆಯುತ್ತಿರುವ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ)ಯ ಪ್ರತಿಭಟನೆ 19ನೇ ದಿನಕ್ಕೆ ಕಾಲಿರಿಸಿದೆ.
ಬುಧವಾರ ಬೆಳಗ್ಗೆ ಬಿಡುಗಡೆಯಾದ ಆರೋಗ್ಯ ಪ್ರಕಟಣೆ ಪ್ರಕಾರ, ವಾಂಗ್ಚುಕ್ ಅವರ ತೂಕ 59.40 ಕಿ.ಗ್ರಾಂ. ಕುಸಿದಿದೆ. ಇದರೊಂದಿಗೆ ಉಪವಾಸ ಮುಷ್ಕರ ಆರಂಭವಾದಂದಿನಿಂದ ಅವರು ಕಳೆದುಕೊಂಡ ಒಟ್ಟು ತೂಕ 7 ಕೆ.ಜಿ.ಗಿಂತಲೂ ಹೆಚ್ಚಾಗಿದೆ.
ಪದೇ ಪದೇ ನಡೆಯುತ್ತಿರುವ ಪರೀಕ್ಷಾ ಅಕ್ರಮಗಳು ಮತ್ತು ಪ್ರಶ್ನೆ ಪತ್ರಿಕೆ ಸೋರಿಕೆಗಳು ವಿದ್ಯಾರ್ಥಿಗಳು ಮತ್ತು ಅವರ ಕುಟುಂಬಗಳ ಜೀವನವನ್ನು ಧ್ವಂಸಗೊಳಿಸಿವೆ. ಆದುದರಿಂದ ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ನೀಡುವಂತೆ ಆಗ್ರಹಿಸಿ ಸಿಜೆಪಿ ಪ್ರತಿಭಟನೆ ನಡೆಸುತ್ತಿದೆ.
ಈ ನಡುವೆ ಸಿಪಿಐ (ಎಂಎಲ್) ಲಿಬರೇಶನ್ ಸಂಯೋಜಿತ ಅಖಿಲ ಭಾರತ ವಿದ್ಯಾರ್ಥಿ ಸಂಘ (ಎಐಎಸ್‌ಎ) ಸದಸ್ಯರಾದ ನೇಹ, ಮನೀಶ್, ಹೃಷಿಕೇಶ್, ದೀಪಕ್ ಕುಮಾರ್ ವರ್ಮಾ ಮತ್ತು ಆಮೀನ್ ಪ್ರತಿಭಟನಾ ಸ್ಥಳದ ಪ್ರತ್ಯೇಕ ವೇದಿಕೆಯಲ್ಲಿ ತಮ್ಮ ಅನಿರ್ದಿಷ್ಟಾವಧಿ ಉಪವಾಸ ಮುಷ್ಕರವನ್ನು ಮುಂದುವರಿಸಿದ್ದಾರೆ.
ದೇಶದ ಪರೀಕ್ಷಾ ವ್ಯವಸ್ಥೆಯ ಅಕ್ರಮಗಳ ವಿರುದ್ಧ ಸಿಜೆಪಿ ಜೂನ್ 20ರಂದು ಪ್ರತಿಭಟನೆ ಆರಂಭಿಸಿತ್ತು. ಅಂದಿನಿಂದ ಇಂದಿನವರೆಗೆ ಹಲವಾರು ರಾಜಕೀಯ ನಾಯಕರು, ಕಾರ್ಯಕರ್ತರು ಮತ್ತು ನಾಗರಿಕ ಸಮಾಜದ ಸದಸ್ಯರು ಇದಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.

