ನವದೆಹಲಿ: ಯುಜಿಸಿ-ನೆಟ್ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯಾಗಿರುವ ಬಗ್ಗೆ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಕಳವಳಗಳನ್ನು ವ್ಯಕ್ತಪಡಿಸಿದ್ದಾರೆ. ಯುಜಿಸಿ-ನೆಟ್‌ನ ಸಮಾಜಶಾಸ್ತ್ರ ಪರೀಕ್ಷೆಗೆ ಹಾಜರಾಗಿದ್ದ ಹಲವು ಅಭ್ಯರ್ಥಿಗಳು ಪ್ರಶ್ನೆಪತ್ರಿಕೆಯಲ್ಲಿ ವ್ಯಾಕರಣ ದೋಷಗಳು ಮತ್ತು ಕಾಗುಣಿತ ತಪ್ಪುಗಳಿದ್ದ ಬಗ್ಗೆ ದೂರಿಕೊಂಡ ಬೆನ್ನಲ್ಲೇ ರಾಹುಲ್ ಈ ಆರೋಪವನ್ನು ಮಾಡಿದ್ದಾರೆ.
ಯುಜಿಸಿ-ನೆಟ್ ಸಮಾಜಶಾಸ್ತ್ರ ಪ್ರಶ್ನೆಪತ್ರಿಕೆಗೆ ಸಂಬಂಧಿಸಿದಂತೆ ಕೇಳಿಬಂದಿರುವ ಸರಣಿ ಆರೋಪಗಳನ್ನು ಬುಧವಾರ ಎಕ್ಸ್ ಪೋಸ್ಟ್‌ನಲ್ಲಿ ಪಟ್ಟಿ ಮಾಡಿರುವ ರಾಹುಲ್, ಈ ಪ್ರಶ್ನೆಪತ್ರಿಕೆಯು ಸೋರಿಕೆಯಾಗಿದ್ದು, ಭಾರತದ ಕೆಲವು ಭಾಗಗಳಲ್ಲಿ 2.25 ಲಕ್ಷ ರೂ.ಗೆ ಮಾರಾಟವಾಗಿದೆ ಎಂದು ಹೇಳಿದ್ದಾರೆ.
ಯುಜಿಸಿ-ನೆಟ್ ಪರೀಕ್ಷೆಗೆ ಸ್ವಲ್ಪ ಮೊದಲು 100 ಪುಟಗಳ ಪಿಡಿಎಫ್‌ನ್ನು ಪ್ರಸಾರ ಮಾಡಲಾಗಿತ್ತು. ಈ ಪಿಡಿಎಫ್ ಪ್ರಶ್ನೆಪತ್ರಿಕೆ ಸಿದ್ಧಪಡಿಸುವಿಕೆಗೆ ಸಂಬಂಧಿಸಿದ್ದಾಗಿದ್ದು, ಇದು ಎನ್‌ಟಿಎ ಬಳಿ ಮಾತ್ರ ಲಭ್ಯವಿರುತ್ತದೆ. ಈ ಪಿಡಿಎಫ್‌ನಲ್ಲಿರುವ ಸುಮಾರು 90 ಪ್ರಶ್ನೆಗಳು ನೈಜವಾದ ಸಮಾಜಶಾಸ್ತ್ರ ಪ್ರಶ್ನೆಪತ್ರಿಕೆಯಲ್ಲಿನ ಪ್ರಶ್ನೆಗಳೊಂದಿಗೆ ತಾಳೆಯಾಗುತ್ತಿವೆ. ಬಿಹಾರ, ಉತ್ತರ ಪ್ರದೇಶ, ಹರ್ಯಾಣ, ದಿಲ್ಲಿ ಮತ್ತು ರಾಜಸ್ಥಾನಗಳಲ್ಲಿ ಈ ಪ್ರಶ್ನೆಪತ್ರಿಕೆಯನ್ನು 2.25 ಲಕ್ಷಕ್ಕೆ ಮಾರಾಟ ಮಾಡಲಾಗುತ್ತಿತ್ತು. ಇದೇ ನೆಟ್‌ವರ್ಕ್ ಸಿಎಸ್‌ಐಆರ್-ನೆಟ್, ಎಚ್‌ಟಿಇಟಿ ಮತ್ತು ಎಡಿಎನಂತಹ ಪರೀಕ್ಷೆಗಳ ಪ್ರಶ್ನೆಪತ್ರಿಕೆಗಳನ್ನು ಸಹ ಒದಗಿಸುತ್ತಿದೆ ಎಂದು ಅವರು ಹೇಳಿದ್ದಾರೆ.
ನೀಟ್ ಮತ್ತು ನೆಟ್ ಪರೀಕ್ಷೆಗಳಲ್ಲಿ ಪದೇ ಪದೇ ಹಗರಣಗಳು ನಡೆದಿದ್ದರೂ, ಮೋದಿ ಸರಕಾರವು ಕಣ್ಣುಮುಚ್ಚಿ ಕುಳಿತಿದೆ ಮತ್ತು ಗಾಢನಿದ್ರೆಯಲ್ಲಿದೆ. ಲಕ್ಷಾಂತರ ವಿದ್ಯಾರ್ಥಿಗಳ ಕಠಿಣ ಪರಿಶ್ರಮಕ್ಕೆ ಅದು ಬೆಲೆ ನೀಡುತ್ತಿಲ್ಲ ಎಂದು ರಾಹುಲ್ ಆರೋಪಿಸಿದ್ದಾರೆ.
ಜೂನ್ 30ರ ಪರೀಕ್ಷೆಗೆ ಮುನ್ನವೇ ಯುಜಿಸಿ-ನೆಟ್ ಪ್ರಶ್ನೆಪತ್ರಿಕೆ ಸೋರಿಕೆಯಾಗಿತ್ತು ಎಂದು ಆರೋಪಿಸಿದ್ದ ದೈನಿಕ್ ಭಾಸ್ಕರ್ ವರದಿಯನ್ನು ರಾಹುಲ್ ಉಲ್ಲೇಖಿಸಿದ್ದಾರೆ.

