ಪುಣೆ: ಮಹಾರಾಷ್ಟ್ರದಲ್ಲಿ ಭಾರಿ ಮಳೆಯ ಅಬ್ಬರ ಮುಂದುವರಿದಿರುವ ನಡುವೆ ಪುಣೆ ಜಿಲ್ಲೆಯ ಮೋಶಿ ತ್ಯಾಜ್ಯ ಡಿಪೋದಲ್ಲಿ ಸಂಭವಿಸಿದ ಭೀಕರ ಅವಘಡದಲ್ಲಿ ಬೃಹತ್ ತ್ಯಾಜ್ಯದ ದಿಬ್ಬ ಮೂರು ಅಂತಸ್ತಿನ ಕಟ್ಟಡದ ಮೇಲೆ ಕುಸಿದು ಬಿದ್ದ ಪರಿಣಾಮ ಕಟ್ಟಡ ಧ್ವಂಸಗೊಂಡಿದ್ದು, ಅದರೊಳಗೆ ಕನಿಷ್ಠ 16 ಮಂದಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಓಆಖಈ), ಅಗ್ನಿಶಾಮಕ ದಳ ಹಾಗೂ ಆಂಬ್ಯುಲೆನ್ಸ್ ತಂಡಗಳು ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.
ಲಭ್ಯವಿರುವ ದೃಶ್ಯಗಳ ಪ್ರಕಾರ, ಅವಘಡ ಸಂಭವಿಸಿದ ಕಟ್ಟಡವು ನಗರದ ತ್ಯಾಜ್ಯ ಡಿಪೋ ಪ್ರದೇಶದ ಸಮೀಪದಲ್ಲೇ ಇತ್ತು. ಈ ಕಟ್ಟಡವು ಪಿಂಪ್ರಿ-ಚಿಂಚ್‌ವಾಡ್ ಮಹಾನಗರ ಪಾಲಿಕೆಯ ಪರವಾಗಿ ತ್ಯಾಜ್ಯ ಸಂಸ್ಕರಣೆ ನಡೆಸುತ್ತಿದ್ದ ಖಾಸಗಿ ಸಂಸ್ಥೆಯ ಆಡಳಿತ ಕಟ್ಟಡವಾಗಿತ್ತು.
ನಿರಂತರ ಸುರಿದ ಭಾರಿ ಮಳೆಯಿಂದಾಗಿ ಪಕ್ಕದಲ್ಲಿದ್ದ ಪರ್ವತದಷ್ಟು ಎತ್ತರದ ಪರಂಪರೆಯಿಂದ ಸಂಗ್ರಹವಾಗಿದ್ದ ತ್ಯಾಜ್ಯದ ರಾಶಿ ಸಡಿಲಗೊಂಡು ಕಟ್ಟಡದ ಮೇಲೆ ಕುಸಿದ ಪರಿಣಾಮ ಈ ಅವಘಡ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಿಂಪ್ರಿ-ಚಿಂಚ್‌ವಾಡ್ ಮಹಾನಗರ ಪಾಲಿಕೆ ಆಯುಕ್ತ ವಿಜಯ್ ಸೂರ್ಯವಂಶಿ ಮಾತನಾಡಿ, ಅವಘಡ ಸಂಭವಿಸಿದ ವೇಳೆ ಕಟ್ಟಡದೊಳಗೆ ಸುಮಾರು 16 ಉದ್ಯೋಗಿಗಳು ಇರುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ, ಅಗ್ನಿಶಾಮಕ ದಳ ಮತ್ತು ಆಂಬ್ಯುಲೆನ್ಸ್ ಸಿಬ್ಬಂದಿ ಅವಶೇಷಗಳಡಿ ಸಿಲುಕಿರುವವರನ್ನು ರಕ್ಷಿಸಲು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವ ಕಾರ್ಯಾಚರರಣೆಯೂ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರದೇಶದ ಬಿಜೆಪಿ ಶಾಸಕ ಮಹೇಶ್ ಲ್ಯಾಂಡ್ಗೆ, "ಭಾರಿ ಮಳೆಯಿಂದಾಗಿ ಮೋಶಿ ತ್ಯಾಜ್ಯ ಡಿಪೋದಲ್ಲಿ ಭೂಕುಸಿತ ಸಂಭವಿಸಿದ್ದು, ತ್ಯಾಜ್ಯದ ಬೃಹತ್ ದಿಬ್ಬ ಕುಸಿದಿದೆ. ಗಾಯಗೊಂಡಿರುವ ನೌಕರರನ್ನು ಆಸ್ಪತ್ರೆಗೆ ದಾಖಲಿಸಲು ಪ್ರಯತ್ನಗಳು ನಡೆಯುತ್ತಿವೆ. ಪ್ರಕೃತಿಯ ಆರ್ಭಟದಿಂದ ಮುಗ್ಧ ನೌಕರರ ಜೀವಗಳು ಅಪಾಯಕ್ಕೆ ಸಿಲುಕಿರುವುದು ಅತ್ಯಂತ ಹೃದಯವಿದ್ರಾವಕವಾಗಿದೆ" ಎಂದು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ತಿಳಿಸಿದ್ದಾರೆ.

