ಅಯೋಧ್ಯೆ: ದೇವಾಲಯದಲ್ಲಿ ನಡೆದಿದೆ ಎನ್ನಲಾದ ದೇಣಿಗೆ ಕಳ್ಳತನವು ಒಂದು ಅಪಮಾನಕರ ಘಟನೆಯಾಗಿದ್ದು, ಇದು ನಮಗೆ ಕಳಂಕ ತಂದಿದೆ. ಇದರಿಂದಾಗಿ ಪ್ರತಿಯೊಬ್ಬರೂ ತೀವ್ರ ಅವಮಾನ ಹಾಗೂ ಮುಜುಗರವನ್ನು ಅನುಭವಿಸುತ್ತಿದ್ದಾರೆ ಎಂದು ರಾಮಮಂದಿರ ನಿರ್ಮಾಣ ಸಮಿತಿ ಅಧ್ಯಕ್ಷ ನೃಪೇಂದ್ರ ಮಿಶ್ರಾ ಶನಿವಾರ(ಜುಲೈ 11) ಬೇಸರ ವ್ಯಕ್ತಪಡಿಸಿದ್ದಾರೆ.
ರಾಮಮಂದಿರ ನಿರ್ಮಾಣ ಸಮಿತಿಯ ಸಭೆಯ ಭಾಗವಾಗಿ ಮಿಶ್ರಾ ಅವರು ಅಯೋಧ್ಯೆಗೆ ಆಗಮಿಸಿದ್ದಾರೆ. ಈ ವೇಳೆ ಮಾತನಾಡಿದ ಅವರು, ಇಂತಹ ಘಟನೆಗಳು ಮರುಕಳಿಸದಂತೆ ತಡೆಯಲು ಮಂದಿರದ ನಿರ್ವಹಣಾ ವ್ಯವಸ್ಥೆಯನ್ನು ಸುಧಾರಿಸಲಾಗುವುದು ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
ದೇಣಿಗೆ ಕಳ್ಳತನ ಘಟನೆಯು ಅತ್ಯಂತ ಅಪಮಾನಕರವಾಗಿದೆ. ನಾವು ಕ್ಷಮೆಯಾಚಿಸುವುದು ಮಾತ್ರವಲ್ಲದೆ, ಇದರಿಂದ ತೀವ್ರ ಅವಮಾನ ಮತ್ತು ನಿರಾಶೆಯನ್ನು ಅನುಭವಿಸುತ್ತಿದ್ದೇವೆ ಎಂದು ಹೇಳಿದ್ದಾರೆ.
ಮಂದಿರ ಟ್ರಸ್ಟ್‌ಗೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ(ಸಿಇಒ) ನೇಮಕ ಮಾಡಬೇಕೆಂದು ಮೊದಲು ಒತ್ತಾಯಿಸಿದವರಲ್ಲಿ ಒಬ್ಬರಾದ ಮಿಶ್ರಾ, ಸೂಕ್ತ ಹೆಸರನ್ನು ಸೂಚಿಸಲು ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗಿದೆ. ಅದರ ನೇತೃತ್ವವನ್ನು ನಿವೃತ್ತ ನ್ಯಾಯಾಧೀಶರೊಬ್ಬರು ವಹಿಸಿದ್ದಾರೆ. ಸಮಿತಿಯು ತನ್ನ ಶಿಫಾರಸುಗಳನ್ನು ಟ್ರಸ್ಟ್‌ಗೆ ಸಲ್ಲಿಸಲಿದ್ದು, ಟ್ರಸ್ಟ್ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಿದೆ ಎಂದು ತಿಳಿಸಿದರು.
ಟ್ರಸ್ಟ್ ಮಹಿಳಾ ಸಿಇಒ ಅವರನ್ನು ನೇಮಿಸಲು ಮುಕ್ತವಾಗಿದೆ ಎಂಬ ಊಹಾಪೋಹಗಳಿದ್ದರೂ, ಮಿಶ್ರಾ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.
ಜುಲೈ 22 ರಂದು ಟ್ರಸ್ಟ್ ಮಹತ್ವದ ಸಭೆ:
ದೇಣಿಗೆ ಕಳ್ಳತನದ ವಿವಾದದ ನಡುವೆ ಮಂದಿರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮತ್ತು ಟ್ರಸ್ಟಿ ಅನಿಲ್ ಮಿಶ್ರಾ ಅವರ ರಾಜೀನಾಮೆಯನ್ನು ಅಂಗೀಕರಿಸಿದ ನಂತರ, ಮಂದಿರದ ನಿರ್ವಹಣಾ ವ್ಯವಸ್ಥೆಯನ್ನು ಸುಧಾರಿಸುವ ಕ್ರಮಗಳ ಕುರಿತು ನಿರ್ಧರಿಸಲು ಟ್ರಸ್ಟ್ ಜುಲೈ 22 ರಂದು ಮತ್ತೊಮ್ಮೆ ಸಭೆ ಸೇರಲಿದೆ. ಜುಲೈ 22 ರ ಸಭೆಯ ಕಾರ್ಯಸೂಚಿಯ ಬಗ್ಗೆ ತಮಗೆ ಯಾವುದೇ ಕಲ್ಪನೆ ಇಲ್ಲ ಎಂದು ಮಿಶ್ರಾ ಹೇಳಿದರು.

