ನವದೆಹಲಿ: ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಮತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಆಗ್ರಹಿಸಿ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಜುಲೈ 20ರಂದು ಕರೆ ನೀಡಿದ್ದ 'ಸಂಸತ್ ಚಲೋ' ಮೆರವಣಿಗೆಯಲ್ಲಿ ಪ್ರತಿಭಟನಕಾರರು ಮತ್ತು ಭದ್ರತಾ ಸಿಬ್ಬಂದಿ ನಡುವೆ ನಡೆದ ಹಿಂಸಾಚಾರದ ಹಿಂದಿನ ಸಂಭವನೀಯ ಪಿತೂರಿ ಕುರಿತು ದಿಲ್ಲಿ ಪೊಲೀಸ್‌ನ ವಿಶೇಷ ಘಟಕ ತನಿಖೆ ಆರಂಭಿಸಿದೆ.
ಹಿಂಸಾಚಾರ ನಡೆದ ಸಂಸದ್ ಮಾರ್ಗ, ಜಂತರ್ ಮಂತರ್ ಮತ್ತು ಕನ್ಹಾಟ್ ಪ್ಲೇಸ್‌ನ ಸುತ್ತುಮತ್ತಲಿನ ಮೊಬೈಲ್ ಟವರ್‌ಗಳಿಂದ ಸಂಗ್ರಹಿಸಿದ ದತ್ತಾಂಶವನ್ನು ವಿಶ್ಲೇಷಿಸುವ ಮೂಲಕ ದಿಲ್ಲಿ ಪೊಲೀಸ್‌ನ ಸೈಬರ್ ಘಟಕ ಮತ್ತು ವಿಶೇಷ ಘಟಕ ವ್ಯಾಪಕ ಡಿಜಿಟಲ್ ತನಿಖೆ ನಡೆಸುತ್ತಿವೆ ಎಂದು ಮೂಲಗಳು ತಿಳಿಸಿವೆ.
ಘಟನೆಯ ಸಂದರ್ಭ ಈ ಪ್ರದೇಶಗಳಲ್ಲಿ ಸಕ್ರಿಯವಾಗಿದ್ದ ಮೊಬೈಲ್ ಸಂಖ್ಯೆಗಳು, ಕರೆ ವಿವರಗಳ ದಾಖಲೆಗಳು ಮತ್ತು ಮೊಬೈಲ್‌ಗಳ ಸ್ಥಳದ ಮಾಹಿತಿಯನ್ನು ತನಿಖಾಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.
ಇದಲ್ಲದೆ, ಪ್ರತಿಭಟನೆಗೆ ಸಂಬಂಧಿಸಿ ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದ 480 ಸಾಮಾಜಿಕ ಜಾಲ ತಾಣದ ಖಾತೆಗಳನ್ನು ಪೊಲೀಸರು ನಿರ್ಬಂಧಿಸಿದ್ದಾರೆ. ಈ ಖಾತೆಗಳು 'ಆಪರೇಷನ್‌ಸಿಂಧೂರ್' ವೇಳೆಯಲ್ಲೂ ಸಕ್ರಿಯವಾಗಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ.
''ಇವು ಸಾಮಾಜಿಕ ಜಾಲ ತಾಣಗಳಲ್ಲಿ ತಪ್ಪು ಮಾಹಿತಿಗಳನ್ನು ಹರಡಲು ಪ್ರಯತ್ನಿಸಿರುವುದನ್ನು ನಾವು ಗಮನಿಸಿದ್ದೇವೆ. ಪ್ರಸಕ್ತ ಪರಿಸ್ಥಿತಿಯ ಲಾಭ ಪಡೆದುಕೊಂಡು ಸುಳ್ಳು ಮಾಹಿತಿ ಮತ್ತು ವದಂತಿಗಳನ್ನು ಹರಡುತ್ತಿದ್ದ ಪಾಕಿಸ್ತಾನ ಮೂಲದ 480 ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳನ್ನು ಗುರುತಿಸಲಾಗಿದೆ. ಅವುಗಳನ್ನು ನಿರ್ಬಂಧಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಜನರನ್ನು ಪ್ರಚೋದಿಸುವ ಮತ್ತು ವಿದ್ಯಾರ್ಥಿಗಳ ಗಮನವನ್ನು ಬೇರೆಡೆಗೆ ಸೆಳೆಯುವುದು ಇವುಗಳ ಮುಖ್ಯ ಉದ್ದೇಶ'' ಎಂದು ಪೊಲೀಸರು ತಿಳಿಸಿದ್ದಾರೆ.

