ನವದೆಹಲಿ: ಎಥೆನಾಲ್‌ನಿಂದ ತೊಂದರೆಗೊಳಗಾದ ಒಬ್ಬನೇ ಒಬ್ಬ ಸಂತ್ರಸ್ತನನ್ನು ತೋರಿಸುವಂತೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿಯವರು ಎಥೆನಾಲ್ ಮಿಶ್ರಿತ ಇಂಧನದ (ಇ20) ವಿರುದ್ಧ ಟೀಕಾಕಾರರಿಗೆ ಸವಾಲು ಹಾಕಿದ ಬೆನ್ನಲ್ಲೇ ಅದನ್ನು ಸ್ವೀಕರಿಸಿರುವ ಪ್ರತಿಭಟನಾಕಾರರು,ತಾವು ಒಬ್ಬರಲ್ಲ, ಬದಲಿಗೆ ಅಂತಹ ಆರು ಜನರನ್ನು ಪ್ರಸ್ತುತಪಡಿಸುವುದಾಗಿ ಹೇಳಿದ್ದಾರೆ.
ಆದರೆ ಗಡ್ಕರಿಯವರು ಮಾಧ್ಯಮಗಳ ಸಮ್ಮುಖದಲ್ಲೇ ಇವರನ್ನು ಭೇಟಿ ಮಾಡಬೇಕು ಎಂಬ ಏಕೈಕ ಷರತ್ತನ್ನು ಅವರು ವಿಧಿಸಿದ್ದಾರೆ. ಗಡ್ಕರಿಯವರು ಬುಧವಾರ ಟಿವಿ ವಾಹಿನಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಎಥೆನಾಲ್ ಟೀಕಾಕಾರರಿಗೆ ಈ ಸವಾಲು ಹಾಕಿದ್ದರು.
ಇ20 ಪೆಟ್ರೋಲ್ ಬಳಕೆಯನ್ನು ಸರಕಾರವು ಕಡ್ಡಾಯಗೊಳಿಸಿದ್ದು, ಹಲವಾರು ಬಳಕೆದಾರರು ಕಡಿಮೆ ಮೈಲೇಜ್ ಸಿಗುತ್ತಿದೆ ಮತ್ತು ವಾಹನಗಳಿಗೂ ಹಾನಿಯಾಗುತ್ತಿದೆ ಎಂದು ದೂರಿದ್ದಾರೆ.
ಕಳೆದ ರವಿವಾರ ದಿಲ್ಲಿಯ ಜಂತರ್ ಮಂತರ್‌ನಲ್ಲಿ 'ಟೀಮ್ ಭಾರತ್' ಬ್ಯಾನರ್‌ನಡಿ ಇ20 ಇಂಧನದ ವಿರುದ್ಧ ಮೊದಲ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸಾಮಾಜಿಕ ಕಾರ್ಯಕರ್ತ ಮತ್ತು ಉದ್ಯಮಿ ತೆಹಸೀನ್ ಪೂನಾವಾಲಾ ಅವರು ಗಡ್ಕರಿಯವರ ಸವಾಲನ್ನು ಸ್ವೀಕರಿಸಿ ವಿಡಿಯೋ ಸಂದೇಶವೊಂದನ್ನು ಬಿಡುಗಡೆ ಮಾಡಿದ್ದಾರೆ.
'ನಾವು ಗಡ್ಕರಿಯವರ ಸವಾಲನ್ನು ಸ್ವೀಕರಿಸಿದ್ದೇವೆ. ಇ20 ಇಂಧನದಿಂದಾಗಿ ಕಾರುಗಳಲ್ಲಿ ಸಮಸ್ಯೆಎದುರಿಸುತ್ತಿರುವ ಜನರನ್ನು ಭೇಟಿ ಮಾಡಿಸಲು ನಾವು ಬಯಸಿದ್ದೇವೆ. ನಮ್ಮ ಬಳಿ ಅಂತಹ ಆರು ಜನರಿದ್ದಾರೆ' ಎಂದು ಪೂನಾವಾಲಾ ಹೇಳಿದ್ದಾರೆ.
ಇ20 ಪೆಟ್ರೋಲ್ ಕುರಿತು ಟೀಕೆಗಳನ್ನು ಸಂದರ್ಶನದಲ್ಲಿ ತಿರಸ್ಕರಿಸಿದ್ದ ಗಡ್ಕರಿ ಅದರ ಅನುಷ್ಠಾನವನ್ನು ಸಮರ್ಥಿಸಿಕೊಂಡಿದ್ದರು. ಇ20 ಇಂಧನವು ಯಾವುದೇ ಪೆಟ್ರೋಲ್ ವಾಹನಕ್ಕೆ ಹಾನಿ ಮಾಡಿದೆ ಎಂದು ಯಾರೂ ಸಾಬೀತುಪಡಿಸಿಲ್ಲ ಎಂದು ಅವರು ಪ್ರತಿಪಾದಿಸಿದ್ದರು.
ಗಡ್ಕರಿಯವರ ಕುಟುಂಬವು ಎಥೆನಾಲ್ ವ್ಯವಹಾರದಲ್ಲಿ ತೊಡಗಿಸಿಕೊಂಡಿರುವುದರಿಂದ ಅವರ ವಿರುದ್ಧ ಹಿತಾಸಕ್ತಿ ಸಂಘರ್ಷದ ಆರೋಪಗಳು ಕೇಳಿಬಂದಿದ್ದವು. ಇದನ್ನು ನಿರಾಕರಿಸಿದ ಅವರು,'ಎಥೆನಾಲ್ ನೀತಿಯಿಂದ ನನಗೇನೂ ಲಾಭವಿಲ್ಲ. ಎಥೆನಾಲ್ ಉತ್ಪಾದನೆಯಲ್ಲಿ ನನ್ನ ಪಾಲು ಕೇವಲ ಶೇ.0.07ರಷ್ಟಿದೆ' ಎಂದಿದ್ದರು.
ಗಡ್ಕರಿಯವರ ಸಮರ್ಥನೆಯನ್ನು ತಳ್ಳಿಹಾಕಿರುವ ಪೂನಾವಾಲಾ,
ನಿನ್ನೆ ನೀವು (ಗಡ್ಕರಿ) ಎಥೆನಾಲ್ ವ್ಯವಹಾರದಲ್ಲಿ ನಿಮ್ಮ ಕುಟುಂಬದ ಪಾಲು ಕೇವಲ ಶೇ.0.07 ಎಂದು ಹೇಳಿದ್ದೀರಿ. ನಿಮ್ಮ ಇಬ್ಬರೂ ಪುತ್ರರು ಎಥೆನಾಲ್ ವ್ಯವಹಾರದಲ್ಲಿದ್ದಾರೆ. ನೀವು ಹೇಳುತ್ತಿರುವ ಶೇ.0.07 ವಾರ್ಷಿಕವಾಗಿ ಸುಮಾರು 50 ರಿಂದ 100 ಕೋಟಿ ರೂ.ಗಳ ವ್ಯವಹಾರವಾಗಿದೆ ಮತ್ತು ಎಥೆನಾಲ್ ಉದ್ಯಮವು ನಿರಂತರವಾಗಿ ಬೆಳೆಯುತ್ತಿದೆ ಎಂದು ಹೇಳಿದ್ದಾರೆ. ಇದನ್ನು ಹಿತಾಸಕ್ತಿ ಸಂಘರ್ಷ ಎಂದು ಬಣ್ಣಿಸಿರುವ ಪೂನಾವಾಲಾ, ಇದು 'ಬೇಟಾ ಬಡಾವೋ' (ಮಗನನ್ನು ಬೆಳೆಸಿ) ಯೋಜನೆಯಾಗಿದೆ ಎಂದು ಕುಟುಕಿದ್ದಾರೆ.

