ನವದೆಹಲಿ: ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ವೇಳೆ ಮತದಾರರ ಪಟ್ಟಿಯಿಂದ ಹೆಸರು ಕೈಬಿಡುವುದರಿಂದ ವ್ಯಕ್ತಿಯೊಬ್ಬರು ತನ್ನ ಪೌರತ್ವವನ್ನು ಸ್ವಯಂಚಾಲಿತವಾಗಿ ಕಳೆದುಕೊಳ್ಳುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಮತ್ತೊಮ್ಮೆ ಸ್ಪಷ್ಟಪಡಿಸಿದೆ.
ಮೇಲ್ಮನವಿ ನ್ಯಾಯಮಂಡಳಿಗಳಲ್ಲಿ ವಿಚಾರಣೆ ಪ್ರಕ್ರಿಯೆಯನ್ನು ಸುಗಮಗೊಳಿಸುವಂತೆ ಪ್ರಸೇನ್‌ಜಿತ್ ಬೋಸ್ ಎಂಬುವರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿಗಳಾದ ಜೋಯ್ಮಲ್ಯ ಬಾಗ್ಚಿ ಮತ್ತು ವಿ. ಮೋಹನಾ ಅವರಿದ್ದ ಪೀಠವು ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಈ ವೇಳೆ, ಬಿಹಾರದ ಎಸ್‌ಐಆರ್ ಕುರಿತು ತಾನು ಈ ಹಿಂದೆ ನೀಡಿದ್ದ ತೀರ್ಪನ್ನು ಪುನರುಚ್ಛರಿಸಿದ ಪೀಠವು, ಪೌರತ್ವವನ್ನು ನಿರ್ಧರಿಸಲು ಚುನಾವಣಾ ಆಯೋಗವು ಸಾಂವಿಧಾನಿಕ ಸಂಸ್ಥೆಯಲ್ಲ ಎಂಬುದನ್ನು ಒತ್ತಿ ಹೇಳಿದೆ.
ಅರ್ಜಿದಾರರ ಪರ ಹಾಜರಾಗಿದ್ದ ಹಿರಿಯ ವಕೀಲ ಗೋಪಾಲ್ ಶಂಕರನಾರಾಯಣನ್ ಅವರು, ಎಸ್‌ಐಆರ್ ನಂತರ ಮತದಾರರ ಪಟ್ಟಿಯಿಂದ ಹೊರಗಿರುವವರು ತಳಮಟ್ಟದಲ್ಲಿ ಎದುರಿಸುತ್ತಿರುವ ಪರಿಸ್ಥಿತಿಯನ್ನು ನ್ಯಾಯಾಲಯದ ಗಮನಕ್ಕೆ ತಂದರು.
'ಪಶ್ಚಿಮ ಬಂಗಾಳದ 19 ಮೇಲ್ಮನವಿ ನ್ಯಾಯಮಂಡಳಿಗಳ ಮುಂದೆ ಸದ್ಯಕ್ಕೆ ಬರೋಬ್ಬರಿ 34 ಲಕ್ಷ ಮೇಲ್ಮನವಿಗಳು ಬಾಕಿ ಉಳಿದಿದೆ. ಈಗಾಗಲೇ ಇಬ್ಬರು ನ್ಯಾಯಾಧೀಶರು ರಾಜೀನಾಮೆ ನೀಡಿದ್ದಾರೆ. ಇದುವರೆಗೆ ಕೇವಲ 38,000 ಮೇಲ್ಮನವಿಗಳನ್ನು ಮಾತ್ರ ವಿಲೇವಾರಿ ಮಾಡಲಾಗಿದೆ. ವಿಲೇವಾರಿಯಾದ ಮೇಲ್ಮನವಿಗಳ ಪೈಕಿ ಶೇ 70 ರಷ್ಟು ಪ್ರಕರಣಗಳಲ್ಲಿ ಹೆಸರುಗಳನ್ನು ಮರುಸೇರ್ಪಡೆಗೊಳಿಸಲಾಗಿದೆ' ಎಂದು ಪೀಠಕ್ಕೆ ತಿಳಿಸಿದರು.
'ನ್ಯಾಯಾಲಯದಲ್ಲಿ ಮೇಲ್ಮನವಿಗಳು ಬಾಕಿಯಿದ್ದರೂ ಪಶ್ಚಿಮ ಬಂಗಾಳ ಸರ್ಕಾರವು ಮತದಾರರ ಪಟ್ಟಿಯಿಂದ ಹೆಸರು ಕೈಬಿಡಲಾದವರಿಗೆ ಅನ್ನಪೂರ್ಣ ಯೋಜನೆ, ಜಾತಿ ಪ್ರಮಾಣಪತ್ರಗಳ ಸೌಲಭ್ಯಗಳನ್ನು ನಿರಾಕರಿಸಿ ಅಧಿಸೂಚನೆಗಳನ್ನು ಹೊರಡಿಸಿದೆ' ಎಂದು ತಿಳಿಸಿದರು.
ಮೇಲ್ಮನವಿಗಳು ಬಾಕಿ ಇರುವಾಗ ಇಂತಹ ಸೌಲಭ್ಯಗಳನ್ನು ನಿರಾಕರಿಸಬಾರದು ಎಂದು ಸ್ಪಷ್ಟಪಡಿಸುವಂತೆಯೂ ನ್ಯಾಯಾಲಯವನ್ನು ಕೋರಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪೀಠ, 'ಚುನಾವಣಾ ಆಯೋಗವು ಮತದಾರರ ಪಟ್ಟಿಯಲ್ಲಿ ಹೆಸರುಗಳನ್ನು ಸೇರಿಸುವ ಅಥವಾ ಹೊರಗಿಡುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಬಹುದೇ ಹೊರತು, ಪೌರತ್ವವನ್ನು ನಿರ್ಧರಿಸಲು ಸಾಧ್ಯವಿಲ್ಲ' ಎಂದು ತಿಳಿಸಿದೆ.

