ಮುಂಬೈ : ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ಕರಡು ಶಾಸನವನ್ನು ಸಿದ್ಧಪಡಿಸಲು ಮಹಾರಾಷ್ಟ್ರ ಸರಕಾರವು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶೆ ರಂಜನಾ ದೇಸಾಯಿ ನೇತೃತ್ವದಲ್ಲಿ ಏಳು ಸದಸ್ಯರ ಸಮಿತಿಯೊಂದನ್ನು ರಚಿಸಿದೆ.
ಮದುವೆ, ವಿಚ್ಛೇದನ, ಆಸ್ತಿ ಹಕ್ಕು ಮತ್ತು ಉತ್ತರಾಧಿಕಾರದಂತಹ ವೈಯಕ್ತಿಕ ವಿಷಯಗಳಲ್ಲಿ ಎಲ್ಲರಿಗೂ ಸಮಾನ ಕಾನೂನುಗಳನ್ನು ಜಾರಿಗೊಳಿಸುವುದು ಏಕರೂಪ ನಾಗರಿಕ ಸಂಹಿತೆಯ ಉದ್ದೇಶವಾಗಿದೆ.
ಈ ಸಮಿತಿಯು ಆರು ತಿಂಗಳೊಳಗೆ ವರದಿ ಸಲ್ಲಿಸಲಿದೆ ಎಂದು ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ತಿಳಿಸಿದ್ದಾರೆ. ''ಸಮಿತಿಯ ಶಿಫಾರಸುಗಳ ಆಧಾರದಲ್ಲಿ, ಮುಂಬರುವ ರಾಜ್ಯ ಶಾಸಕಾಂಗದ ಚಳಿಗಾಲದ ಅಧಿವೇಶನದಲ್ಲಿ ಯುಸಿಸಿ ಕುರಿತ ವಿಧೇಯಕವನ್ನು ಮಂಡಿಸಲು ಸರಕಾರ ಯೋಜಿಸುತ್ತಿದೆ'' ಎಂದು ಅವರು ಬುಧವಾರ ರಾಜ್ಯ ವಿಧಾನಸಭೆಗೆ ತಿಳಿಸಿದರು.
ಮಹಾರಾಷ್ಟ್ರದ ಯುಸಿಸಿ ಸಮಿತಿಯು ಬಾಂಬೆ ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶರಾದ ಆರ್.ಸಿ. ಚವಾಣ್ ಮತ್ತು ಎಸ್.ಜಿ. ಮೆಹಾರೆ, ಮಾಜಿ ಮುಖ್ಯ ಕಾರ್ಯದರ್ಶಿ ಡಿ.ಕೆ. ಜೈನ್, ಮಾಜಿ ಅಡ್ವೊಕೇಟ್ ಜನರಲ್ ಬೀರೇಂದ್ರ ಸರಾಫ್, ಸಂವಿಧಾನ ತಜ್ಞ ರಮೇಶ್ ಪತಂಗೆ ಮತ್ತು ಸಾಮಾಜಿಕ ಕಾರ್ಯಕರ್ತೆ ಸುವರ್ಣ ರಾವಲ್ ಅವರನ್ನೂ ಒಳಗೊಂಡಿದೆ.
ಬಿಜೆಪಿ ಆಡಳಿತವಿರುವ ರಾಜ್ಯಗಳು ಯುಸಿಸಿ ಜಾರಿಗಾಗಿ ನ್ಯಾಯಮೂರ್ತಿ (ನಿವೃತ್ತ) ದೇಸಾಯಿ ಅವರ ನೇತೃತ್ವದಲ್ಲಿ ಸಮಿತಿಗಳನ್ನು ರಚಿಸಿವೆ. ಈಗ ಈ ರಾಜ್ಯಗಳ ಸಾಲಿಗೆ ಮಹಾರಾಷ್ಟ್ರ ಹೊಸ ಸೇರ್ಪಡೆಯಾಗಿದೆ.
ಕಳೆದ ತಿಂಗಳು, ರಾಜಸ್ಥಾನವು ಯುಸಿಸಿ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದು, ಕಳೆದ ಎರಡು ವರ್ಷಗಳಲ್ಲಿ ಈ ಕ್ರಮ ಕೈಗೊಂಡ ಐದನೇ ಬಿಜೆಪಿ ಆಡಳಿತದ ರಾಜ್ಯವಾಯಿತು. ಫೆಬ್ರವರಿ 2024ರಲ್ಲಿ, ಉತ್ತರಾಖಂಡವು ಯುಸಿಸಿ ಕಾನೂನನ್ನು ಅಂಗೀಕರಿಸಿದ ಮೊದಲ ರಾಜ್ಯವಾಗಿತ್ತು. ಈ ವರ್ಷ ಬಿಜೆಪಿ ಆಡಳಿತದ ಇನ್ನೆರಡು ರಾಜ್ಯಗಳಾದ ಗುಜರಾತ್ ಮತ್ತು ಅಸ್ಸಾಂ ಇದೇ ಹಾದಿಯನ್ನು ಅನುಸರಿಸಿವೆ.
ಬಿಜೆಪಿ ಆಡಳಿತವಿರುವ ಮಧ್ಯಪ್ರದೇಶವೂ ಯುಸಿಸಿ ಕರಡು ಸಿದ್ಧಪಡಿಸಲು ಸಮಿತಿಯನ್ನು ರಚಿಸಿದ್ದು, ಈ ತಿಂಗಳು ವಿಧೇಯಕವನ್ನು ಮಂಡಿಸಲು ಯೋಜಿಸಿದೆ. ಈ ಎಲ್ಲಾ ರಾಜ್ಯಗಳಲ್ಲಿ ಯುಸಿಸಿ ವ್ಯಾಪ್ತಿಯಿಂದ ಬುಡಕಟ್ಟು ಜನರನ್ನು ಹೊರಗಿಡಲಾಗಿದೆ.

