ಶ್ರೀನಗರ: ಹಿಂದೊಮ್ಮೆ ಆಗಸ್ಟ್ 15 ಎಂದರೆ ಕಾಶ್ಮೀರದ ಹಲವು ಕುಟುಂಬಗಳಿಗೆ ಸಂಭ್ರಮದ ದಿನಕ್ಕಿಂತ ಹೆಚ್ಚಾಗಿ ಆತಂಕದ ದಿನವಾಗಿತ್ತು. ಸ್ವಾತಂತ್ರ್ಯೋತ್ಸವದ ಕಾರ್ಯಕ್ರಮ ನಡೆಯಬೇಕಾದರೆ ಜನರ ಸಂಚಾರ ಸ್ಥಗಿತಗೊಳ್ಳುತ್ತಿತ್ತು, ಅಂಗಡಿಗಳು ಮುಚ್ಚುತ್ತಿದ್ದವು, ರಸ್ತೆಗಳು ಖಾಲಿಯಾಗುತ್ತಿದ್ದವು. ಒಂದು ಸರ್ಕಾರಿ ಕಾರ್ಯಕ್ರಮಕ್ಕಾಗಿ ಇಡೀ ನಗರವೇ ತನ್ನ ಸಹಜ ಬದುಕನ್ನು ನಿಲ್ಲಿಸಬೇಕಾಗುತ್ತಿತ್ತು.
ಆದರೆ ವರ್ಷಗಳು ಕಳೆದಂತೆ ಆ ಚಿತ್ರಣ ನಿಧಾನವಾಗಿ ಬದಲಾಗಿದೆ. ಇಂದು ಭದ್ರತಾ ವ್ಯವಸ್ಥೆ ಮುಂದುವರಿದಿದ್ದರೂ, ಸ್ವಾತಂತ್ರ್ಯೋತ್ಸವದ ಕಾರ್ಯಕ್ರಮವು ಜನರ ಬದುಕನ್ನು ಸಂಪೂರ್ಣವಾಗಿ ಸ್ತಬ್ದಗೊಳ್ಳುವ ದಿನವಾಗಿ ಉಳಿದಿಲ್ಲ.
ಈ ಬದಲಾವಣೆಯನ್ನು ಶ್ರೀನಗರದ ಬಕ್ಷಿ ಸ್ಟೇಡಿಯಂನಲ್ಲಿ ಅತ್ಯಂತ ಸ್ಪಷ್ಟವಾಗಿ ಕಾಣಬಹುದು. ಒಮ್ಮೆ ಸುತ್ತಮುತ್ತಲಿನ ಪ್ರದೇಶವನ್ನು ಖಾಲಿ ಮಾಡಿ ಭದ್ರತೆ ಒದಗಿಸಲಾಗುತ್ತಿದ್ದ ಅದೇ ಸ್ಥಳದಲ್ಲಿ ಈಗ ಸಾವಿರಾರು ಜನರು ಸೇರಿ ಸ್ವಾತಂತ್ರ್ಯೋತ್ಸವವನ್ನು ಆಚರಿಸುತ್ತಿದ್ದಾರೆ.
ಒಮ್ಮೆ ಆಗಸ್ಟ್ 15 ಎಂದರೆ….
1990ರ ದಶಕದ ಆರಂಭದ ಕಾಶ್ಮೀರವನ್ನು ನೆನಪಿಸಿಕೊಂಡರೆ, ಆಗಸ್ಟ್ 15ರ ಮುನ್ನವೇ ಶ್ರೀನಗರದ ವಾತಾವರಣ ಬದಲಾಗುತ್ತಿತ್ತು. ಬಕ್ಷಿ ಸ್ಟೇಡಿಯಂ ಸುತ್ತಲಿನ ರಸ್ತೆಗಳು ಹಲವು ದಿನಗಳ ಮುಂಚೆಯೇ ಮುಚ್ಚಲ್ಪಡುತ್ತಿದ್ದವು. ಬಸ್‌ಗಳು ಓಡುತ್ತಿರಲಿಲ್ಲ. ಅಂಗಡಿಗಳು ತೆರೆಯುತ್ತಿರಲಿಲ್ಲ. ಜನರು ತಮ್ಮ ಮನೆಗಳಿಂದ ಹೊರಬರಲು ಕೂಡ ಹಿಂಜರಿಯುತ್ತಿದ್ದರು.
ಬಕ್ಷಿ ಸ್ಟೇಡಿಯಂನಿಂದ ಸುಮಾರು ಒಂದು ಕಿ.ಮೀ. ದೂರದಲ್ಲಿದ್ದ ಜವಾಹರ್ ನಗರದ ನಿವಾಸಿ ಮುಜಫರ್ ಶಾ ಅವರಿಗೆ ಆಗಸ್ಟ್ 15ರ ಆ ದಿನಗಳು ಇನ್ನೂ ನೆನಪಿವೆ. ಸ್ವಾತಂತ್ರ್ಯೋತ್ಸವದ ದಿನಕ್ಕಿಂತ ಮುನ್ನವೇ ಅವರ ಪ್ರದೇಶದಲ್ಲಿ ನಿರ್ಬಂಧಗಳು ಆರಂಭವಾಗುತ್ತಿದ್ದವು.
'ದಿನಗಟ್ಟಲೆ ನಮ್ಮ ಪ್ರದೇಶದಿಂದ ಹೊರಗೆ ಹೋಗಲು ಸಾಧ್ಯವಾಗುತ್ತಿರಲಿಲ್ಲ. ಅಂಗಡಿಗಳು ಮುಚ್ಚಿರುತ್ತಿದ್ದವು. ಸಂಚಾರವೂ ಇರಲಿಲ್ಲ' ಎಂದು ಅಂದಿನ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ.
ಸೋಲಿನಾದ ನಿವೃತ್ತ ಸರ್ಕಾರಿ ನೌಕರ ಇಶ್ಫಾಕ್ ಅಹ್ಮದ್ ಅವರ ಅನುಭವವೂ ಇದೇ. 'ಆಗಸ್ಟ್ 15ರ ಬೆಳಗ್ಗೆ ಪ್ರತಿಯೊಂದು ರಸ್ತೆ, ಗಲ್ಲಿ ಬ್ಯಾರಿಕೇಡ್‌ಗಳಿಂದ ಮುಚ್ಚಲ್ಪಡುತ್ತಿತ್ತು. ಎತ್ತರದ ಕಟ್ಟಡಗಳ ಮೇಲೆ ಭದ್ರತಾ ಸಿಬ್ಬಂದಿ ನಿಯೋಜನೆಗೊಂಡಿರುತ್ತಿದ್ದರು. ಹಾಲು ಅಥವಾ ಬ್ರೆಡ್ ತರಲು ಹೊರಗೆ ಹೋಗುವುದೂ ಕಷ್ಟವಾಗುತ್ತಿತ್ತು' ಎಂದರು.
ಭದ್ರತೆಯ ನೆರಳಲ್ಲಿ …
ಕಾಶ್ಮೀರದಲ್ಲಿ ಸಂಘರ್ಷ ತೀವ್ರವಾಗಿದ್ದ ವರ್ಷಗಳಲ್ಲಿ ಆಗಸ್ಟ್ 15ರ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮಗಳು ಉಗ್ರರ ಬೆದರಿಕೆಯ ನೆರಳಿನಲ್ಲೇ ನಡೆದಿದ್ದವು. 1992ರಲ್ಲಿ ಬಕ್ಷಿ ಸ್ಟೇಡಿಯಂನಲ್ಲಿ ಪರೇಡ್ ನಡೆಯುತ್ತಿದ್ದ ವೇಳೆ ಉಗ್ರರು ರಾಕೆಟ್ ದಾಳಿ ನಡೆಸಿದ್ದರು. ಒಂದು ರಾಕೆಟ್ ಸ್ಟೇಡಿಯಂ ಹಿಂಭಾಗದ ಮನೆಗೆ ಬಿದ್ದು ಮಹಿಳೆ ಮತ್ತು ಮಗುವಿಗೆ ಗಾಯವಾಗಿತ್ತು.
2005ರಲ್ಲಿಯೂ ಆತಂಕದ ವಾತಾವರಣ ಮುಂದುವರಿದಿತ್ತು. ಸ್ವಾತಂತ್ರ್ಯೋತ್ಸವ ಕಾರ್ಯಕ್ರಮಕ್ಕೂ ಮುನ್ನವೇ ಸ್ಟೇಡಿಯಂ ಸಮೀಪ ಸ್ಫೋಟಕ ಪತ್ತೆಯಾಗಿತ್ತು. ಭದ್ರತಾ ಕಾರಣಗಳಿಂದ ಸುತ್ತಮುತ್ತಲಿನ ರಸ್ತೆಗಳು ಮುಚ್ಚಲಾಗಿತ್ತು. ಕೆಲ ವರ್ಷಗಳಲ್ಲಿ ಭದ್ರತಾ ದೃಷ್ಟಿಯಿಂದ ಮೊಬೈಲ್ ಫೋನ್‌ಗಳ ಬಳಕೆಯನ್ನೂ ನಿರ್ಬಂಧಿಸಲಾಗಿತ್ತು. ಸ್ಫೋಟಕಗಳನ್ನು ಸಕ್ರಿಯಗೊಳಿಸಲು ಮೊಬೈಲ್ ಸಿಗ್ನಲ್‌ಗಳನ್ನು ಬಳಸಬಹುದು ಎಂಬ ಆತಂಕದಿಂದ ಸೇವೆ ಸ್ಥಗಿತಗೊಳಿಸಲಾಗುತ್ತಿತ್ತು.
ಮತ್ತೆ ಅಶಾಂತಿಯ ದಿನಗಳು
2010ರಲ್ಲಿ ಕಾಶ್ಮೀರದಲ್ಲಿ ಪ್ರತಿಭಟನೆಗಳು ನಡೆಯುತ್ತಿತ್ತು. ಆ ಸಂದರ್ಭದಲ್ಲಿ ಬಕ್ಷಿ ಸ್ಟೇಡಿಯಂನಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಅಂದಿನ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರತ್ತ ಪೊಲೀಸ್ ಸಿಬ್ಬಂದಿಯೊಬ್ಬರು ಶೂ ಎಸೆದಿದ್ದರು.. 2016ರಲ್ಲಿ ಉಗ್ರ ಸಂಘಟನೆ ಹಿಜ್ಬುಲ್ ಮುಜಾಹಿದ್ದೀನ್‌ನ ಕಮಾಂಡರ್ ಬುರ್ಹಾನ್ ವಾನಿ ಹತ್ಯೆಯ ನಂತರ ಕಾಶ್ಮೀರದಲ್ಲಿ ತಿಂಗಳುಗಟ್ಟಲೆ ಅಶಾಂತಿ ಮುಂದುವರಿದಿತ್ತು. ಆ ವರ್ಷದ ಆಗಸ್ಟ್ 15ರಂದು ಕರ್ಫ್ಯೂ ಮತ್ತು ನಿರ್ಬಂಧಗಳ ನಡುವೆ ಕಾರ್ಯಕ್ರಮ ನಡೆದಿತ್ತು.
2019ರಲ್ಲಿ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಪಡಿಸಿದ ನಂತರವೂ ಕಠಿಣ ಭದ್ರತಾ ವ್ಯವಸ್ಥೆಯ ನಡುವೆಯೇ ಸ್ವಾತಂತ್ರ್ಯೋತ್ಸವ ಆಚರಿಸಲಾಗಿತ್ತು.
ಈಗಿನ ಚಿತ್ರ...
ಆದರೆ ಇತ್ತೀಚಿನ ವರ್ಷಗಳಲ್ಲಿ ಪರಿಸ್ಥಿತಿಯಲ್ಲಿ ಗಮನಾರ್ಹ ಬದಲಾವಣೆಯಾಗಿದೆ. 2023ರಲ್ಲಿ ನವೀಕರಿಸಲಾದ ಬಕ್ಷಿ ಸ್ಟೇಡಿಯಂನಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮಕ್ಕೆ ಸಾವಿರಾರು ಮಂದಿಭಾಗವಹಿಸಿದ್ದರು. ವಿಶೇಷ ಪಾಸ್‌ಗಳಿಲ್ಲದೆ ಜನರು ಕಾರ್ಯಕ್ರಮ ವೀಕ್ಷಿಸಿದರು. ಶ್ರೀನಗರದ ಹಲವು ಭಾಗಗಳಲ್ಲಿ ಸಂಚಾರ ಮುಂದುವರಿದಿತ್ತು. ಮೊಬೈಲ್ ಮತ್ತು ಇಂಟರ್‌ನೆಟ್ ಸೇವೆಗಳನ್ನೂ ಸ್ಥಗಿತಗೊಳಿಸಲಾಗಿರಲಿಲ್ಲ.
ಭದ್ರತಾ ಪಡೆಗಳ ಕೆಲಸದಲ್ಲಿ ಬದಲಾವಣೆಯಾಗಿದ್ದವು. ಹಿಂದೆ ಭದ್ರತೆ ಎಂದರೆ ನಗರದ ಚಟುವಟಿಕೆಗಳನ್ನು ಸ್ಥಗಿತಗೊಳಿಸುವಂತಿದ್ದರೆ, ಈಗ ಜನರ ನಡುವೆ ನಡೆಯುವ ಕಾರ್ಯಕ್ರಮವನ್ನು ಸುರಕ್ಷಿತವಾಗಿ ನಡೆಸುವ ಉದ್ದೇಶಕ್ಕೆ ಸೀಮಿತವಾಗಿದೆ.
ಪೀಳಿಗೆಯಿಂದ ಪೀಳಿಗೆಗೆ...
ಹಳೆಯ ತಲೆಮಾರಿನವರಿಗೆ ಆಗಸ್ಟ್ 15 ಎಂದರೆ ಮನೆಯಿಂದ ಹೊರಬರಲಾಗದ ದಿನ. ಮತ್ತೊಂದು ತಲೆಮಾರಿಗೆ ಅದು - 'ಹಾಲು, ಬ್ರೆಡ್ ತರಲು ಕೂಡ ಸಾಧ್ಯವಾಗದ ದಿನ. ಆದರೆ ಇಂದಿನ ಯುವ ಕಾಶ್ಮೀರಿಗಳಿಗೆ ಆಗಸ್ಟ್ 15 ಎಂದರೆ ಶಾಲಾ ಕಾರ್ಯಕ್ರಮ, ರಜೆಯ ದಿನ ಅಥವಾ ಇತರ ಸಾಮಾನ್ಯ ದಿನಗಳಂತೆ ಕಾಣಿಸುತ್ತದೆ
ಕಾಶ್ಮೀರದ ರಾಜಕೀಯ ಪ್ರಶ್ನೆಗಳು ಇನ್ನೂ ಉಳಿದಿವೆ. ಭದ್ರತಾ ಸವಾಲುಗಳೂ ಮುಂದುವರಿದಿವೆ. ಆದರೆ ಒಂದು ಬದಲಾವಣೆ ಸ್ಪಷ್ಟವಾಗಿದೆ - ಹಿಂದೆ ಸಂಘರ್ಷವು ಇಡೀ ನಗರದ ಬದುಕನ್ನು ಸ್ಥಗಿತಗೊಳಿಸುತ್ತಿದ್ದರೆ, ಇಂದು ನಗರವು ತನ್ನ ಸಹಜ ಜೀವನದೊಂದಿಗೆ ಮುಂದುವರಿಯುತ್ತಿದೆ.

