ರಾಂಚಿ: ಜಾರ್ಖಂಡ್‌ನ ನೇಮಕಾತಿ ಪರೀಕ್ಷೆಗಳಲ್ಲಿ ನಡೆದಿವೆ ಎನ್ನಲಾದ ಅಕ್ರಮಗಳನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳು, 80ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಶನಿವಾರ(ಆ.15) ಇಲ್ಲಿ 'ತಿರಂಗಾ ಯಾತ್ರೆ' ನಡೆಸಿದ್ದಾರೆ.
ರಾಜ್ಯದ ನೇಮಕಾತಿ ಪರೀಕ್ಷಾ ಪ್ರಕ್ರಿಯೆಯಲ್ಲಿ ಸುಧಾರಣೆಗಳಿಗೆ ಆಗ್ರಹಿಸಿ ನಡೆಸುತ್ತಿರುವ ಹೋರಾಟ 22ನೇ ದಿನಕ್ಕೆ ಕಾಲಿಟ್ಟಿದೆ.
ಈ ವೇಳೆ ಪ್ರತಿಭಟನಾ ಸ್ಥಳವಾದ ಜೈಪಾಲ್ ಸಿಂಗ್ ಮುಂಡಾ ಕ್ರೀಡಾಂಗಣದಿಂದ ಆಲ್ಬರ್ಟ್ ಎಕ್ಕಾ ಚೌಕ್‌ವರೆಗೆ ಈ ಕಾಲ್ನಡಿಗೆ ಜಾಥಾವನ್ನು ಆಯೋಜಿಸಲಾಗಿತ್ತು. ಸಾವಿರಾರು ಉದ್ಯೋಗ ಆಕಾಂಕ್ಷಿಗಳು ಹಾಗೂ ಸಾರ್ವಜನಿಕರು ಕೈಯಲ್ಲಿ ತ್ರಿವರ್ಣ ಧ್ವಜ ಹಿಡಿದು 'ಭಾರತ್ ಮಾತಾ ಕೀ ಜೈ' ಮತ್ತು 'ವಂದೇ ಮಾತರಂ' ಮುಂತಾದ ದೇಶಭಕ್ತಿಯ ಘೋಷಣೆಗಳನ್ನು ಕೂಗುತ್ತಾ ಜಾಥಾದಲ್ಲಿ ಪಾಲ್ಗೊಂಡಿದ್ದಾರೆ.
'ಸ್ವಾತಂತ್ರ್ಯ ಎಂದರೆ ಬ್ರಿಟಿಷರಿಂದ ಮುಕ್ತಿ ಎನ್ನುವುದು ಮಾತ್ರವಲ್ಲ, ಅವಕಾಶಗಳ ಅಸಮಾನತೆ, ಭ್ರಷ್ಟಾಚಾರ ಮತ್ತು ಅನ್ಯಾಯದಿಂದಲೂ ಮುಕ್ತಿ ಪಡೆಯುವುದಾಗಿದೆ. ದೇಶದ ಯುವಜನರು ಓದಬೇಕು, ಕಷ್ಟಪಟ್ಟು ದುಡಿಯಬೇಕು ಮತ್ತು ತಮ್ಮ ಹಕ್ಕುಗಳಿಗಾಗಿ ಧ್ವನಿ ಎತ್ತಬೇಕು. ಇದೇ ಪ್ರಜಾಪ್ರಭುತ್ವದ ನಿಜವಾದ ಶಕ್ತಿ. ಈ ಸ್ವಾತಂತ್ರ್ಯ ದಿನದಂದು, ತಮ್ಮ ಭವಿಷ್ಯಕ್ಕಾಗಿ ಶಾಂತಿಯುತವಾಗಿ ಹೋರಾಡುತ್ತಿರುವ ಎಲ್ಲಾ ಯುವಕರಿಗೆ ಸಲಾಂ. ಯುವಜನರ ಧ್ವನಿಯೇ ಭಾರತದ ಭವಿಷ್ಯ' ಎಂದು ಜೆಜೆಪಿಎಸ್‌ಸಿ-ಜೆಎಸ್‌ಎಸ್‌ಸಿ ಸುಧಾರಣಾ ಮಂಚ್ ಹೇಳಿದೆ.
ಕಳೆದ 14 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಜಾರ್ಖಂಡ್ ಲೋಕತಾಂತ್ರಿಕ ಕ್ರಾಂತಿಕಾರಿ ಮೋರ್ಚಾ(ಜೆಎಲ್‌ಕೆಎಂ) ನಾಯಕ ದೇವೇಂದ್ರ ನಾಥ್ ಮಹಾತೊ ಅವರು, ಸಾದರ್ ಆಸ್ಪತ್ರೆಯಿಂದ ಹೊರಬಂದು ಜಾಥಾದಲ್ಲಿ ಪಾಲ್ಗೊಳ್ಳಲು ಪೊಲೀಸರು ಅವಕಾಶ ನೀಡಲಿಲ್ಲ ಎಂದು ಆರೋಪಿಸಿದ್ದಾರೆ.
ಅವರು ಆಸ್ಪತ್ರೆಯಿಂದ ಹೊರಬರಲು ಯತ್ನಿಸುವಾಗ ಭದ್ರತಾ ಸಿಬ್ಬಂದಿಯೊಂದಿಗೆ ತಳ್ಳಾಟ ನಡೆಸುತ್ತಿರುವ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ.
ಇದಕ್ಕೂ ಮುನ್ನ ಮಾತನಾಡಿದ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್, 'ಉದ್ಯೋಗ ಆಕಾಂಕ್ಷಿಗಳ ಕನಸನ್ನು ಪ್ರಶ್ನೆಪತ್ರಿಕೆ ಸೋರಿಕೆ ಮಾಫಿಯಾ, ಭ್ರಷ್ಟಾಚಾರ ಅಥವಾ ಅಕ್ರಮಗಳು ಕಸಿದುಕೊಳ್ಳಲು ಬಿಡುವುದಿಲ್ಲ. ರಾಜ್ಯದ ನೇಮಕಾತಿ ಸಂಸ್ಥೆಗಳ ಮೂಲಕ ಅವರಿಗೆ ಅಪಾರ ಉದ್ಯೋಗಾವಕಾಶಗಳನ್ನು ಒದಗಿಸಲಾಗುವುದು' ಎಂದು ಭರವಸೆ ನೀಡಿದ್ದಾರೆ.

