ಮಂಜೇಶ್ವರ: ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು, ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನ ಕಡಂಬಾರು ಕ್ಷೇತ್ರದ ಸಹಯೋಗದೊಂದಿಗೆ ಕಡಂಬಾರು ದೇವಸ್ಥಾನದಲ್ಲಿ ಆ. 16 ರಂದು ಭಾನುವಾರ ಅಪರಾಹ್ನ 1 ರಿಂದ ಗಡಿನಾಡ ಯಕ್ಷ ಸಂಭ್ರಮ ಕಾರ್ಯಕ್ರಮ ಆಯೋಜಿಸಲಾಗಿದೆ.
ಅಪರಾಹ್ನ 1ಕ್ಕೆ ಯಕ್ಷ ಸಂಭ್ರಮ ಉದ್ಗಾಟನೆಗೊಳ್ಳಲಿದ್ದು ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಅಧ್ಯಕ್ಷತೆ ವಹಿಸುವರು. ಕ್ಷೇತ್ರದ ಪ್ರಧಾನ ಅರ್ಚಕ ಶ್ರೀಕಾಂತ ಮಾಣಿಲತ್ತಾಯ ಉದ್ಘಾಟಿಸುವರು. ಬಳಿಕ ಶ್ರೀ ವಿಠಲ ಭಟ್ ಮೊಗಸಾಲೆ ತಂಡದವರಿಂದ ತಾಳಮದ್ದಳೆ ಸುದರ್ಶನ ವಿಜಯ ಪ್ರಸ್ತುತಿಗೊಳ್ಳಲಿದೆ.
ಹಿಮ್ಮೇಳದಲ್ಲಿ ಭಾಗವತರಾಗಿ ರತ್ನಾಕರ ಆಳ್ವ ತಲಪ್ಪಾಡಿ, ಪ್ರದೀಪ ಗಟ್ಟಿ ಭಾಗವಹಿಸಲಿದ್ದು, ಚೆಂಡೆಮದ್ದಳೆಯಲ್ಲಿ ರಾಜಾರಾಮ ಬಳ್ಳಾಲ್ ಚಿಪ್ಪಾರು, ಕೇಶವ ಆಚಾರ್ಯ ಕಿನ್ಯ, ಅಚ್ಯುತ ಪದಕಣ್ಣಾಯ ಮೂಡಂಬೈಲು, ಪ್ರಕಾಶ್ ಕಿನ್ಯ ಭಾಗವಹಿಸಲಿದ್ದಾರೆ. ಅರ್ಥಧಾರಿಗಳಾಗಿ ರಾಧಾಕೃಷ್ಣ ಕಲ್ಚಾರ್, ವಿಠಲ ಭಟ್ ಮೊಗಸಾಲೆ, ನಾಗರಾಜ ಪದಕಣ್ಣಾಯ ಮೂಡಂಬೈಲು, ರಾಜಾರಾಮ ರಾವ್ ಮೀಯಪದವು, ಹರಿಶ್ಚಂದ್ರ ನಾಯ್ಗ ಮಾಡೂರು ರಂಜಿಸಲಿದ್ದಾರೆ.
ಸಂಜೆ 4.30ಕ್ಕೆ ಸಮಾರೋಪ ಸಮಾರಂಭ ಜರಗಲಿದ್ದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಅಧ್ಯಕ್ಷತೆ ವಹಿಸುವರು. ಅಕಾಡೆಮಿ ರಿಜಿಸ್ಟ್ರಾರ್ ನಮ್ರತ ಎನ್ ಪ್ರಾಸ್ತಾವಿಕವಾಗಿ ಮಾತನಾಡುವರು. ಮುಖ್ಯ ಅತಿಥಿಗಳಾಗಿ ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್, ಕಾಸರಗೋಡು ಜಿಲ್ಲಾ ಪಂಚಾಯತಿ ಸದಸ್ಯ ಹರ್ಷಾದ್ ವರ್ಕಾಡಿ, ಕಡಂಬಾರು ದೇವಸ್ಥಾನದ ಆಡಳಿತ ಮೊಕ್ತೇಸರ ಸೂರ್ಯನಾರಾಯಣಯ್ಯ, ಮಹಾವಿಷ್ಣುಮೂರ್ತಿ ಸೇವಾಸಮಿತಿ ಅಧ್ಯಕ್ಷ ರಾಮಚಂದ್ರ ರಾವ್ ಉಪಸ್ಥಿತರಿರುವರು. ಯಕ್ಷಗಾನ ಅಕಾಡೆಮಿ ಸದಸ್ಯ ಸತೀಶ ಅಡಪ ಸಂಕಬೈಲು ಉಪಸ್ಥಿತರಿರುವರು. ಬಳಿಕ ಯಕ್ಷಬಳಗ ಹೊಸಂಗಡಿ ಮಂಜೇಶ್ವರ ತಂಡದಿಂದ ಶ್ರೀ ವಿಷ್ಣು ಲೀಲೆ ಯಕ್ಷಗಾನ ಪ್ರದರ್ಶನ ಜರಗಲಿದೆ.
ಯಕ್ಷಗಾನ ಹಿಮ್ಮೇಳ ಕಲಾವಿದರಾಗಿ ಭಾಗವತಿಕೆಯಲ್ಲಿ ಸಿರಿಬಾಗಿಲು ರಾಮಕೃಷ್ಣ ಮಯ್ಯ, ಚೆಂಡೆಮದ್ದಳೆಯಲ್ಲಿ ಭಾಸ್ಕರ ಕೋಳ್ಯೂರು, ಲವ ಆಚಾರ್ಯ ಐಲ ರಂಜಿಸಲಿದ್ದು ಪಾತ್ರವರ್ಗದಲ್ಲಿ ಖ್ಯಾತ ಕಲಾವಿದರಾದ ಡಿ.ಮನೋಹರ್ ಕುಮಾರ್, ಅಂಬಾ ಪ್ರಸಾದ್ ಪಾತಾಳ, ಹರೀಶ್ ಶೆಟ್ಟಿ ಮಣ್ಣಾಪು, ಗಣೇಶ ಪಾಲೆಚ್ಚಾರ್, ಲಕ್ಷ್ಮಣ ಕುಮಾರ್ ಮರಕಡ ಮೇಳೈಸಲಿದ್ದಾರೆ ಎಂದು ಅಕಾಡೆಮಿಯ ಸದಸ್ಯ, ಕಾರ್ಯಕ್ರಮ ಸಂಚಾಲಕ ಸತೀಶ ಅಡಪ ಸಂಕಬೈಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

