ಇಟಾನಗರ: ಮಕ್ಕಳ ಕಳ್ಳಸಾಗಣೆ ಜಾಲದ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಅರುಣಾಚಲ ಪ್ರದೇಶದ ವಿವಿಧ ಭಾಗಗಳಲ್ಲಿ 19 ಮಕ್ಕಳನ್ನು ಈ ಜಾಲದಿಂದ ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ.
ಶಿಯೋಮಿ ಜಿಲ್ಲೆಯ ಮೆಚುಕಾ, ಪಶ್ಚಿಮ ಸಿಯಾಂಗ್‌ನ ಆಲೋ, ಪಾಸಿಘಾಟ್, ನಹರ್ಲಗನ್, ಇಟಾನಗರ ಮತ್ತು ಲಾಂಗ್ಡಿಂಗ್‌ನಲ್ಲಿ ಮಕ್ಕಳ ಕಳ್ಳ ಸಾಗಣೆ ಮಾಡುತ್ತಿದ್ದರು.
ಈ ಕುರಿತು ಮಕ್ಕಳ ಕಲ್ಯಾಣ ಸಮಿತಿ (ಸಿಡಬ್ಲ್ಯೂಸಿ)ಯು ಆಗಸ್ಟ್ 17ರಂದು ದೂರು ನೀಡಿತ್ತು. ದೂರಿನ ಆಧಾರದ ಮೇಲೆ ಜಾಲದಲ್ಲಿ ಸಿಲುಕಿದ್ದ ಮಕ್ಕಳನ್ನು ರಕ್ಷಿಸಿ, ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಎಸ್‌ಪಿ ಮಸಾಯಿ ಸಾಂಗೆ ತಿಳಿಸಿದ್ದಾರೆ.
ಮಕ್ಕಳ ಕಳ್ಳಸಾಗಣೆಯ ಮಧ್ಯವರ್ತಿಗಳು ಬಡ ಕುಟುಂಬದವರನ್ನು ಸಂಪರ್ಕಸಿ ಉತ್ತಮ ಶಿಕ್ಷಣದ ಭರವಸೆ ನೀಡಿ, ಮಕ್ಕಳನ್ನು ಕರೆದೊಯ್ದು ಅಪರಿಚಿತ ವ್ಯಕ್ತಿಗಳ ಜೊತೆ ಇರಿಸಲಾಗುತ್ತಿತ್ತು. ಇಲ್ಲಿ ರಕ್ಷಿಸಲಾಗಿರುವ ಹೆಚ್ಚಿನ ಮಕ್ಕಳು ಎಂಟು ವರ್ಷದೊಳಗಿನವರು ಹಾಗೂ ಇಬ್ಬರು ಮೂರು ವರ್ಷದವರು ಇದ್ದಾರೆ ಎಂದು ಅವರು ತಿಳಿಸಿದ್ದಾರೆ.
ಈ ಪ್ರಕರಣದ ಮಧ್ಯವರ್ತಿಗಳು ಪ್ರತಿ ಮಗುವಿನ ಪೋಷಕರಿಗೆ ₹10 ಸಾವಿರದಿಂದ 50 ಸಾವಿರವರೆಗೆ ಹಣ ನೀಡಿದ್ದಾರೆ. ಈ ಜಾಲದಲ್ಲಿ ಸಿಲುಕಿದ್ದ ಅನೇಕ ಮಕ್ಕಳು ಮನೆಕೆಲಸ, ಹೋಟೆಲ್ ಕೆಲಸಗಳನ್ನು ಮಾಡುತ್ತಿದ್ದರು ಎಂದು ಅವರು ವಿವರಿಸಿದ್ದಾರೆ.


