ಚೈನೈ: ತಾಯಿ, ನವಜಾತ ಶಿಶುವಿನ ಆರೋಗ್ಯದ ದೃಷ್ಟಿಯಿಂದ ತಮಿಳುನಾಡು ಸರ್ಕಾರವು ವಿವಾಹಿತ ಸರ್ಕಾರಿ ಮಹಿಳಾ ಉದ್ಯೋಗಿಗಳ ಮೂರನೇ ಮಗುವಿನ ಹೆರಿಗೆ ರಜೆ ಅವಧಿಯನ್ನು ಒಂದು ವರ್ಷಕ್ಕೆ ಹೆಚ್ಚಿಸಿದೆ.
ಸರ್ಕಾರವು ಮೊದಲೆರಡು ಮಗುವಿನ ಹೆರಿಗೆಗೆ ಮಾತ್ರ ಒಂದು ವರ್ಷದವರೆಗೆ ಹೆರಿಗೆ ರಜೆಯನ್ನು ನೀಡಿದ್ದರೆ, ಮೂರನೇ ಮಗುವಿನ ಹೆರಿಗೆಗೆ 84 ದಿನಗಳವರೆಗೆ ಮಾತ್ರ ರಜೆ ನೀಡಲಾಗುತ್ತಿತ್ತು. ಇದೀಗ ಮೂರನೇ ಮಗುವಿನ ಹೆರಿಗೆಗೂ ರಜೆ ವಿಸ್ತರಿಸಲಾಗಿದೆ.
ಸುಪ್ರೀಂ ಕೋರ್ಟ್ನ ನಿರ್ದೇಶನಗಳು ಮತ್ತು ರಾಜ್ಯ ತಿದ್ದುಪಡಿಗಳಿಗೆ ಅನುಗುಣವಾಗಿ ಮಹಿಳಾ ಸಬಲೀಕರಣಕ್ಕೆ ಆದ್ಯತೆ ನೀಡುವ ದೃಷ್ಟಿಯಿಂದ ಸರ್ಕಾರವು ವೇತನ ಸಹಿತ ರಜೆಯನ್ನು 365 ದಿನಗಳವರೆಗೆ ಹೆಚ್ಚಿಸಿದೆ ಎಂದು ಮಾನವ ಸಂಪನ್ಮೂಲ ನಿರ್ವಹಣಾ ಸಚಿವ ಡಿ. ಶರತ್ಕುಮಾರ್ ವಿಧಾನಸಭೆಯಲ್ಲಿ ಘೋಷಿಸಿದ್ದಾರೆ.
ಶೀಘ್ರದಲ್ಲೇ ಈ ಆದೇಶವನ್ನು ಜಾರಿಗೊಳಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಮೊದಲೆರಡು ಮಗುವಿನ ಹೆರಿಗೆಗೆ 90 ದಿನಗಳವೆರೆಗೆ ರಜೆ ನೀಡಲಾಗಿತ್ತು. 2011ರಲ್ಲಿ ಈ ರಜೆಯನ್ನು ಆರು ತಿಂಗಳವರೆಗೆ ವಿಸ್ತರಿಸಲಾಯಿತು. ಬಳಿಕ 2016ರಲ್ಲಿ ಒಂಬತ್ತು ತಿಂಗಳವರೆಗೆ ನೀಡಲಾಯಿತು. ಎಐಎಡಿಎಂಕೆ ಮತ್ತು ಡಿಎಂಕೆ ನೇತೃತ್ವದ ಸರ್ಕಾರವು 2021ರಲ್ಲಿ ಈ ರಜೆಯನ್ನು ಒಂದು ವರ್ಷದವರೆಗೂ ವಿಸ್ತರಿಸಿತ್ತು.

