ಜಮ್ಮು: ಜಮ್ಮು ಹಾಗೂ ಕಾಶ್ಮೀರಕ್ಕೆ ಸಂವಿಧಾನದ 370ನೇ ವಿಧಿಯಡಿ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಪಡಿಸಿದ 7ನೇ ವರ್ಷವಾದ ಬುಧವಾರ ಆಡಳಿತಾರೂಢ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಮತ್ತು ವಿರೋಧ ಪಕ್ಷವಾದ ಪೀಪಲ್ಸ್ ಡೆಮಾಕ್ರೆಟಿಕ್ ಪಾರ್ಟಿ (ಪಿಡಿಪಿ) ಜಮ್ಮು ಮತ್ತು ಕಾಶ್ಮೀರದಾದ್ಯಂತ ಪ್ರತಿಭಟನೆ ನಡೆಸಿದವು.
2019 ಆಗಸ್ಟ್ 5ನ್ನು ನೆನಪಿಸಿಕೊಂಡ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ, ''ಏಳು ವರ್ಷ ಕಳೆದರೂ ನಾವು ಘಟನೆಯನ್ನು ಮರೆತಿಲ್ಲ. ಜಮ್ಮು ಮತ್ತು ಕಾಶ್ಮೀರದ ಹಕ್ಕು ಮತ್ತು ಅಸ್ಮಿತೆಯನ್ನು ಮರಳಿ ತರಲು ನಾನು ಹಾಗೂ ನನ್ನ ಪಕ್ಷ ಬದ್ಧರಾಗಿದ್ದೇವೆ. ನಾನು ಈಡೇರಿಸಬೇಕಾದ ಭರವಸೆಗಳು ಮತ್ತು ಸಾಗಬೇಕಾದ ಹಾದಿ ಇನ್ನೂ ಸಾಕಷ್ಟಿದೆ'' ಎಂದರು.
ಜಮ್ಮು ಮತ್ತು ಕಾಶ್ಮೀರದ ಎನ್‌ಸಿಯ ಹಲವು ನಾಯಕರು ಮತ್ತು ಶಾಸಕರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಪ್ರತಿಭಟನೆ ನಡೆಸಿದರು. ಎನ್‌ಸಿಯ ಹಿರಿಯ ಸಚಿವೆ ಸಕೀನಾ ಇಟೂ ಶ್ರೀನಗರದ ಪಕ್ಷದ ಪ್ರಧಾನ ಕಚೇರಿಯಲ್ಲಿ ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಎನ್‌ಸಿ ನಾಯಕರು ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ಮರು ಸ್ಥಾಪಿಸುವಂತೆ ಆಗ್ರಹಿಸುವ ಬ್ಯಾನರ್ ಹಾಗೂ ಪ್ರದರ್ಶನಾ ಫಲಕಗಳನ್ನು ಪ್ರದರ್ಶಿಸಿದರು. ''ಆಗಸ್ಟ್ 5ರಂದು ನಾವು ಯಾವಾಗಲೂ ಕಪ್ಪು ದಿನವಾಗಿ ಆಚರಿಸುತ್ತೇವೆ'' ಎಂದು ಎನ್‌ಸಿ ಶಾಸಕ ಅಹ್ಸಾನ್ ಪರ್ದೇಶಿ ಹೇಳಿದರು.
ಎನ್‌ಸಿ ಸಚಿವ ಜಾವೇದ್ ರಾಣಾ ಮಾತನಾಡಿ, ಆಗಸ್ಟ್ 5ರ ಭಾವನೆಗಳು ಅಂದಿನಂತೆಯೇ ಇಂದು ಕೂಡ ತೀವ್ರವಾಗಿವೆ ಎಂದರು. ''ಸಮಯ ಮುಂದೆ ಸಾಗಿರಬಹುದು. ಆದರೆ, ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಮರಳಿ ಪಡೆಯುವ ನಮ್ಮ ಸಂಕಲ್ಪ ಮತ್ತಷ್ಟು ಬಲಗೊಂಡಿದೆ. ರಾಜ್ಯವನ್ನು ಕೇಂದ್ರಾಡಳಿತ ಪ್ರದೇಶವಾಗಿ ಬದಲಾಯಿಸಿದ ನಿರ್ಧಾರವನ್ನು ನಾವು ಮರೆತಿಲ್ಲ ಅಥವಾ ಒಪ್ಪಿಕೊಂಡಿಲ್ಲ. ನಮ್ಮ ಹೋರಾಟ ಸಂಘರ್ಷಕ್ಕಾಗಿ ಅಲ್ಲ, ಬದಲಿಗೆ ಶಾಂತಿಯುತವಾಗಿ ಜನರ ಹಕ್ಕುಗಳು ಮತ್ತು ಘನತೆಯನ್ನು ಮರುಸ್ಥಾಪಿಸುವುದಕ್ಕಾಗಿ ಎಂದು ಅವರು ಹೇಳಿದರು.
ವಿರೋಧ ಪಕ್ಷವಾದ ಪಿಡಿಪಿ ನೀಡಿದ ಕರೆ ಹಿನ್ನೆಲೆಯಲ್ಲಿ ಪಕ್ಷದ ನಾಯಕರು ಜಮ್ಮು ಮತ್ತು ಕಾಶ್ಮೀರದಾದ್ಯಂತ ಪ್ರತಿಭಟನೆ ನಡೆಸಿದರು. ಹಲವು ನಾಯಕರನ್ನು ಗೃಹ ಬಂಧನದಲ್ಲಿ ಇರಿಸಲಾಗಿದೆ ಎಂದು ಪಿಡಿಪಿ ಆರೋಪಿಸಿದೆ. ಪಕ್ಷದ ಹಲವು ನಾಯಕರನ್ನು ಪೊಲೀಸ್ ಠಾಣೆಗಳಲ್ಲಿ ಬಂಧಿಸಿ ಇರಿಸಿರುವ ಮತ್ತು ಹಲವರನ್ನು ತಮ್ಮ ಮನೆಗಳಿಂದ ಹೊರ ಹೋಗದಂತೆ ತಡೆದಿರುವ ವೀಡಿಯೊಗಳನ್ನು ಪಿಡಿಪಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದೆ.

