ಲಖನೌ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು 'ಕಾಸ್ಮೆಟಿಕ್ ಫೇಶಿಯಲ್'ಗಾಗಿ ₹7,000 ಕೋಟಿ ಖರ್ಚು ಮಾಡುವ ಮೂಲಕ ಹೊಸ ವಿಶ್ವದಾಖಲೆ ಬರೆದಿದ್ದಾರೆ ಎಂದು ಸಮಾಜವಾದಿ ಪಕ್ಷದ (ಎಸ್‌ಪಿ) ಮುಖ್ಯಸ್ಥ ಅಖಿಲೇಶ್ ಯಾದವ್ ವಾಗ್ದಾಳಿ ನಡೆಸಿದ್ದಾರೆ.
'ಸುಳ್ಳನ್ನು ಸತ್ಯವೆಂದು ಬಿಂಬಿಸಲು ತೆರಿಗೆದಾರರ ಹಣದಿಂದ ಪಡೆಯಲಾದ ₹7,000 ಕೋಟಿಗೂ ಹೆಚ್ಚು ಹಣವನ್ನು ಯೋಗಿ ಆದಿತ್ಯನಾಥ ಅವರು 'ಕಾಸ್ಮೆಟಿಕ್ ಫೇಶಿಯಲ್'ಗಾಗಿ ವೆಚ್ಚ ಮಾಡಿದ್ದಾರೆ" ಎಂದು ಅಖಿಲೇಶ್ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
'ಬಡತನ, ನಿರುದ್ಯೋಗ, ಆರ್ಥಿಕ ಬಿಕ್ಕಟ್ಟು, ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಸಮಸ್ಯೆ ಹಾಗೂ ವಿದ್ಯುತ್, ನೀರು, ರಸ್ತೆ ಮತ್ತು ಆರೋಗ್ಯ ರಕ್ಷಣೆಯಂತಹ ಮೂಲಭೂತ ಸೌಕರ್ಯಗಳ ಕೊರತೆಯಿಂದ ಕಂಗಾಲಾಗಿರುವ ದೇಶದ ಅತಿ ದೊಡ್ಡ ರಾಜ್ಯಕ್ಕೆ (ಉತ್ತರ ಪ್ರದೇಶ) ಮಾಡಿದ ಅಪಮಾನ' ಎಂದು ಗುಡುಗಿದ್ದಾರೆ.
'ಇದೇ ಹಣಕ್ಕೆ ಯುವಕರ ಭವಿಷ್ಯವನ್ನು ಬದಲಾಯಿಸಬಲ್ಲ ಎರಡು-ಮೂರು ವಿಶ್ವದರ್ಜೆಯ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಬಹುದಿತ್ತು. ಉತ್ತರ ಪ್ರದೇಶವನ್ನು ಪ್ರಗತಿ ಹಾಗೂ ಸಮೃದ್ಧಿ ಪಥದತ್ತ ಕೊಂಡೊಯ್ದು ನವ ಭಾರತವನ್ನು ನಿರ್ಮಿಸಬಹುದಿತ್ತು' ಎಂದು ಅಭಿಪ್ರಾಯಪಟ್ಟಿದ್ದಾರೆ.
ಯಾದವ್ ಆರೋಪ ಕುರಿತು ಬಿಜೆಪಿ ಎಂಎಲ್‌ಸಿ ವಿಜಯ್ ಬಹದ್ದೂರ್ ಪಾಠಕ್ ಪ್ರತಿಕ್ರಿಯಿಸಿದ್ದು, 'ರಾಜ್ಯ ಸರ್ಕಾರದ ಮಾಹಿತಿ ಇಲಾಖೆಯು ಸರ್ಕಾರದ ವಿವಿಧ ಕಲ್ಯಾಣ ಯೋಜನೆಗಳ ಬಗ್ಗೆ ಪ್ರಚಾರ ಮಾಡುತ್ತಿದೆ. ಇದನ್ನು ಸಾಂಪ್ರದಾಯಿಕವಾಗಿ ಅನುಸರಿಸಿಕೊಂಡು ಬರಲಾಗಿದೆ. ಸರ್ಕಾರದ ಯೋಜನೆಗಳ ಪ್ರಚಾರದಲ್ಲಿ ಮುಖ್ಯಮಂತ್ರಿಗಳ ಭಾವಚಿತ್ರ ಬಳಕೆ ಸಹಜ. ಇದು ಸರ್ಕಾರದ ಯೋಜನೆಗಳ ಪ್ರಚಾರವಾಗಿದ್ದು, ಇದರಿಂದ ಜನರಲ್ಲಿ ಜಾಗೃತಿ ಹೆಚ್ಚಾಗುತ್ತದೆ' ಎಂದಿದ್ದಾರೆ.
'

