ಮಂಜೇಶ್ವರ: ಸ್ಥಳೀಯಾಡಳಿತ ಸಂಸ್ಥೆಗಳು ಜನಸಾಮಾನ್ಯರ ಸಮಸ್ಯೆ ಹಾಗೂ ಅಹವಾಲುಗಳನ್ನು ಆಲಿಸಿ, ಅವುಗಳಿಗೆ ತ್ವರಿತ ಹಾಗೂ ಸೂಕ್ತ ಪರಿಹಾರ ಒದಗಿಸಿಕೊಟ್ಟಾಗ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ 'ಗ್ರಾಮ ಸ್ವರಾಜ್ಯ' ಮತ್ತು 'ರಾಮರಾಜ್ಯ' ಪರಿಕಲ್ಪನೆ ಸಾಕಾರಗೊಳ್ಳಲು ಸಶಾಧ್ಯ ಎಂದು ಮಂಜೇಶ್ವರ ಬ್ಲಾಕ್ ಪಂಚಾಯಿತಿ ಅಧ್ಯಕ್ಷ ಯು.ಕೆ. ಸೈಫುಲ್ಲಾ ತಂಙಳ್ ತಿಳಿಸಿದ್ದಾರೆ.
ಅವರು ವರ್ಕಾಡಿ ಗ್ರಾಮ ಪಂಚಾಯಿತಿ ವತಿಯಿಂದ ಆಯೋಜಿಸಲಾದ ದೂರು ಪರಿಹಾರ ಅದಾಲತ್ ುದ್ಘಾಟಿಸಿ ಮಾತನಾಡಿದರು.ಗ್ರಾಮ ಪಂಚಾಯತ್ ಅಧ್ಯಕ್ಷರಾದ ಉಮ್ಮರ್ ಬೋರ್ಕಳ ಅಧ್ಯಕ್ಷತೆ ವಹಿಸಿದ್ದರು. ದೀರ್ಘಕಾಲದಿಂದ ಇತ್ಯರ್ಥವಾಗದೆ ಬಾಕಿಯುಳಿದಿದ್ದ ವಿವಿಧ ಅರ್ಜಿ, ಅಹವಾಲು ಹಾಗೂ ಸಾರ್ವಜನಿಕ ಸಮಸ್ಯೆಗಳ ತ್ವರಿತ ವಿಲೇವಾರಿಗಾಗಿ ಆಯೋಜಿಸಲಾಗಿದ್ದ ಅದಾಲತ್‍ನಲ್ಲಿ 80ಕ್ಕೂ ಅಧಿಕ ದೂರುಗಳು ಮತ್ತು ಅಹವಾಲುಗಳನ್ನು ಪರಿಗಣಿಸಲಾಯಿತು. ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಹಾಗೂ ಪಂಚಾಯಿತಿ ಜನಪ್ರತಿನಿಧಿಗಳ ಉಪಸ್ಥಿತಿಯಲ್ಲಿ ಅಹವಾಲುಗಳನ್ನು ಪರಿಶೀಲಿಸಿ, ಇವುಗಳಿಗೆ ತ್ವರಿತವಾಗಿ ಪರಿಹಾರ ಒದಗಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಯಿತು.
ಪಂಚಾಯಿತಿ ಇಲಾಖೆ ಜಂಟಿ ನಿರ್ದೇಶಕರಾದ ಹರಿದಾಸ್ ಕೆ.ವಿ., ಆಂತರಿಕ ವಿಜಿಲೆನ್ಸ್ ಅಧಿಕಾರಿ ಟಿ.ಟಿ. ಸುರೇಂದ್ರನ್, ಶುಚಿತ್ವ ಮಿಷನ್ ಜಿಲ್ಲಾ ಸಂಯೋಜಕ ಜಯನ್ ಪಿ., ಅಸಿಸ್ಟೆಂಟ್ ಟೌನ್ ಪ್ಲಾನರ್ ಬೈಜು ಪಿ.ವಿ, ವರ್ಕಾಡಿ ಗ್ರಾಪಂ ಉಪಾಧ್ಯಕ್ಷೆ ಫಾತಿಮತ್ ನಸೀಮಾ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಅಬ್ದುಲ್ ಮಜೀದ್ ಬಿ.ಎ, ಪುರುಷೋತ್ತಮ ಅರಿಬೈಲ್, ಬ್ಲಾಕ್ ಪಂಚಾಯಿತಿ ಸದಸ್ಯೆ ಬೀಫಾತಿಮಾ, ಗ್ರಾಪಂ ಸದಸ್ಯರಾದ ನಾರಾಯಣ, ಅಬೂಬಕ್ಕರ್, ಲೀನಾ ಟೆಲ್ಲಿಸ್, ಉಮೇಶ್ ಶೆಟ್ಟಿ, ಗೀತಾ ವಿ. ಸಾಮಾನಿ, ಗೋಪಾಲಕೃಷ್ಣ ಪಜ್ವ, ಚಂದ್ರಶೇಖರ್ ಜಿ. ಶ್ರೀಮತಿ ಮಾಲತಿ ಉಪಸ್ಥಿತರಿದ್ದರು.
ಪಂಚಾಯಿತಿ ಪ್ರಭಾರ ಕಾರ್ಯದರ್ಶಿ ಐತಪ್ಪ ನಾಯ್ಕ್ ಸ್ವಾಗತಿಸಿದರು. ವಿಬಿ ಗ್ರಾಮ್ ಜಿ ಇಂಜಿನಿಯರ್ ಸಂದೇಶ್ ವಂದಿಸಿದರು.



