ಪಟ್ನಾ: ರಾಜಧಾನಿಯ ಹೃದಯಭಾಗದಲ್ಲಿರುವ ಬಿಜೆಪಿಯ ಭದ್ರಕೋಟೆಯಾದ ಬಾಂಕೀಪುರ ಕ್ಷೇತ್ರದ ಮತದಾರರು ಜನ ಸುರಾಜ್ ಪಕ್ಷದ ಸ್ಥಾಪಕ ಪ್ರಶಾಂತ್ ಕಿಶೋರ್ ಕೈಹಿಡಿದಿದ್ದಾರೆ. ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಅವರ ತವರಲ್ಲೇ ಬಿಜೆಪಿ ಮುಖಭಂಗ ಅನುಭವಿಸಿದೆ.
ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಿ ಭರ್ಜರಿ ಗೆಲುವು ಸಾಧಿಸಿದಾಗಿನಿಂದಲೂ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಬಿಜೆಪಿಯ ವಿರುದ್ಧ ತೀವ್ರ ವಾಗ್ದಾಳಿ ನಡೆಸುತ್ತಿದೆ.
ಆದರೆ, ಪ್ರಶಾಂತ್ ಅವರ ಗೆಲುವು ಬಿಜೆಪಿಗಿಂತ ಹೆಚ್ಚಾಗಿ ಆರ್‌ಜೆಡಿಗೆ ಎಚ್ಚರಿಕೆಯ ಗಂಟೆಯಾಗಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.
ಏಕೆಂದರೆ, ಪ್ರತಿಷ್ಠಿತ ಬಾಂಕೀಪುರ ಕಳಗದಲ್ಲಿ ಆರ್‌ಜೆಡಿಯ ಮೂಲ ಮತದಾರರು ಪ್ರಶಾಂತ್ ಕಿಶೋರ್ ಅವರ ಬೆನ್ನಿಗೆ ನಿಂತಿದ್ದಾರೆ ಎನ್ನಲಾಗಿದೆ.
'ಬಿಜೆಪಿಗೆ ಕಠಿಣ ಸವಾಲು ನೀಡಲು ಪ್ರಶಾಂತ್ ಕಿಶೋರ್ (ಪಿಕೆ) ಅವರಿಂದ ಮಾತ್ರ ಸಾಧ್ಯ ಎಂಬುದನ್ನು ಅರಿತ ಮುಸ್ಲಿಂ ಮತದಾರರು, ಪಿಕೆ 'ಕೈ' ಬಲಪಡಿಸಲು ಮುಂದಾದರು. ಬಿಜೆಪಿಯ ಅಭೇದ್ಯ ಕೋಟೆಯನ್ನು ಕೆಡವಬಲ್ಲ ಅಭ್ಯರ್ಥಿಯನ್ನು ಬೆಂಬಲಿಸುವುದೇ ಅವರ ಮುಖ್ಯ ಉದ್ದೇಶವಾಗಿತ್ತು. ಜತೆಗೆ, ಮೇಲ್ವರ್ಗದವರು ಸೇರಿದಂತೆ ಎನ್‌ಡಿಎ ಮೈತ್ರಿಕೂಟದ ಸಾಂಪ್ರದಾಯಿಕ ಮತದಾರರೂ ಸಹ ತಮ್ಮ ನಿಲುವು ಬದಲಾಯಿಸಿ ಪಿಕೆ ಅವರನ್ನು ಬೆಂಬಲಿಸಿದರು' ಎಂದು ಹಿಂದಿ ನಿಯತಕಾಲಿಕೆಯ ಸಂಪಾದಕ ಗಿರಿಧರ್ ಝಾ ವಿವರಿಸಿದ್ದಾರೆ.
'ಪ್ರಶಾಂತ್ ಕಿಶೋರ್ ಕೇವಲ ಶಾಸಕರಾಗಿ ಆಯ್ಕೆಯಾಗಿಲ್ಲ. ಬದಲಿಗೆ, 243 ಸದಸ್ಯರ ಶಾಸನಸಭೆಯಲ್ಲಿ 201 ಶಾಸಕರ ಬಹುಮತ ಹೊಂದಿರುವ ಎನ್‌ಡಿಎ ಬಣದ ಎದುರು ಜನ ಸುರಾಜ್‌ನ ಏಕೈಕ ಪ್ರತಿನಿಧಿಯಾಗಿ ನಿಂತಿದ್ದಾರೆ. ಮುಂಬರುವ ದಿನಗಳಲ್ಲಿ ತಮ್ಮ ತಂತ್ರಗಳನ್ನು ಸರಿಯಾಗಿ ಬಳಸಿದರೆ, ಪ್ರಸ್ತುತ ಆಡಳಿತಾರೂಢ ಸರ್ಕಾರವನ್ನು ಕೆಳಗಿಳಿಸುವ ಮತ್ತು ಆರ್‌ಜೆಡಿಯನ್ನು ನಿರ್ನಾಮ ಮಾಡಬಲ್ಲ ಭರವಸೆಯ ಕಿರಣವಾಗಿ ಅವರು ಹೊರಹೊಮ್ಮಿದ್ದಾರೆ' ಎಂದು ಝಾ ಹೇಳಿದ್ದಾರೆ.
1990ರಿಂದ ಬಿಹಾರದ ಮತದಾರರಿಗೆ ಕೇವಲ ಎರಡು ಆಯ್ಕೆಗಳಿದ್ದವು. ಮೊದಲನೆಯದು... 1990ರಿಂದ 2005ರವರೆಗೆ ಬಿಹಾರವನ್ನು ಆಳಿದ ಲಾಲು ಪ್ರಸಾದ್ (ಎಂಟು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿದ್ದ ಅವರ ಪತ್ನಿ ರಾಬ್ರಿ ದೇವಿ ಸೇರಿದಂತೆ). ಎರಡನೆಯದು... ನಿತೀಶ್ ಕುಮಾರ್ ತಮ್ಮ ಬೆಂಬಲಿಗ ಜಿತನ್ ರಾಮ್ ಮಾಂಝಿ ಅವರನ್ನು ಬಿಹಾರದ ಸಿಎಂ ಮಾಡಿದ ಒಂಬತ್ತು ತಿಂಗಳ ಅವಧಿಯನ್ನು ಹೊರತುಪಡಿಸಿ, 2005ರಿಂದ 2026ರವರೆಗೆ ಅಧಿಕಾರದಲ್ಲಿದ್ದರು.
ರಾಜಕೀಯದಲ್ಲಿ 35 ವರ್ಷ ಎಂಬುದು ದೀರ್ಘ ಅವಧಿ. 1990ರಿಂದ ಲಾಲು ಮತ್ತು ನಿತೀಶ್ ಬಿಹಾರವನ್ನು ಆಳಿದ್ದಾರೆ. ಈ ಅವಧಿಯಲ್ಲಿ ಒಬಿಸಿ ಮತ್ತು ಇಬಿಸಿ ವರ್ಗಗಳು ತಮ್ಮ ಸ್ಥಾನವನ್ನು ಬಲಪಡಿಸಿಕೊಂಡು ಉತ್ತಮ ರಾಜಕೀಯ ಲಾಭಗಳನ್ನು ಪಡೆದವು. ಹಿಂದುಳಿದ ವರ್ಗಗಳಿಗೆ ಹೋಲಿಸಿದರೆ ಸಂಖ್ಯಾತ್ಮಕವಾಗಿ ಕ್ಷೀಣವಾಗಿದ್ದ ಮೇಲ್ವರ್ಗದವರು ಕಾಂಗ್ರೆಸ್‌ನಿಂದ ಬಿಜೆಪಿಗೆ, ನಂತರ ಜೆಡಿಯುಗೆ ತಮ್ಮ ನಿಷ್ಠೆಯನ್ನು ಬದಲಾಯಿಸಿದ್ದರು ಎಂದು ರಾಜಕೀಯ ವಿಶ್ಲೇಷಕರು ಪ್ರತಿಪಾದಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಪ್ರಶಾಂತ್ ಕಿಶೋರ್ ಅವರು ರಾಜಕೀಯ ಪರ್ಯಾಯವಾಗಿ ಹೊರಹೊಮ್ಮಿರುವುದು ಲಾಲು ಮತ್ತು ನಿತೀಶ್ ಇಬ್ಬರನ್ನೂ ಇಷ್ಟಪಡದವರಿಗೂ ಭರವಸೆಯ ಆಶಾಕಿರಣ ಎಂದೇ ಬಿಂಬಿಸಲಾಗುತ್ತಿದೆ. ನರೇಂದ್ರ ಮೋದಿ, ನಿತೀಶ್ ಕುಮಾರ್, ಮಮತಾ ಬ್ಯಾನರ್ಜಿ, ಎಂ.ಕೆ. ಸ್ಟಾಲಿನ್ ಸೇರಿದಂತೆ ಇತರೆ ಪ್ರಾದೇಶಿಕ ನಾಯಕರ ಜತೆ ರಾಜಕೀಯ ತಂತ್ರಗಾರರಾಗಿ ಪಿಕೆ ಕೆಲಸ ಮಾಡಿದ್ದಾರೆ.
ಪಿ.ಕೆ ನೇತೃತ್ವದ ಜನ ಸುರಾಜ್ ಪಕ್ಷವು 2025ರ ನವೆಂಬರ್‌ನಲ್ಲಿ ನಡೆದ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ 243 ಕ್ಷೇತ್ರಗಳ ಪೈಕಿ 238 ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತಾದರೂ, ಎಲ್ಲ ಕಡೆಗಳಲ್ಲೂ ಸೋಲನುಭವಿಸಿತ್ತು.
'2025ರ ಚುನಾವಣೆಯಲ್ಲಿ ಪ್ರಶಾಂತ್ ಸ್ಪರ್ಧಿಸದೆ ದೊಡ್ಡ ತಪ್ಪು ಮಾಡಿದ್ದರು. ತಾವು ಸ್ಪರ್ಧಿಸದೆ ಸಿಎಂಗಳನ್ನು ಆಯ್ಕೆ ಮಾಡುತ್ತಿದ್ದ ಬಾಳ್ ಠಾಕ್ರೆ ಅವರಂತೆ ಇರಲು ಪ್ರಯತ್ನಿಸುವ ಬದಲು, ಪಿಕೆ ತಾವೇ ಸ್ವತಃ ಸ್ಪರ್ಧಿಸಿ ಮುಂಚೂಣಿಯಲ್ಲಿದ್ದು ಪಕ್ಷವನ್ನು ಮುನ್ನಡೆಸಬೇಕಿತ್ತು. ಹಾಗೆ ಮಾಡಿದ್ದರೆ, ಅದು ಪಕ್ಷಕ್ಕೆ ಚೈತನ್ಯ ತುಂಬುತ್ತಿತ್ತು ಮತ್ತು ಅಭ್ಯರ್ಥಿಗಳ ಗೆಲುವಿಗೂ ನೆರವಾಗುತ್ತಿತ್ತು' ಎಂದು ಝಾ ವಿವರಿಸಿದ್ದಾರೆ.
'2026ರಲ್ಲಿ ಪಿಕೆ ತಮ್ಮ ತಪ್ಪು ತಿದ್ದುಕೊಂಡು ಉಪಚುನಾವಣೆಯಲ್ಲಿ ಸ್ವತಃ ಸ್ಪರ್ಧಿಸಿದರು. ಆ ಮೂಲಕ ಬಿಹಾರದ ಮತದಾರರಿಗೆ ಒಂದು ಪರ್ಯಾಯ ಅವಕಾಶವನ್ನು ನೀಡಿದರು. ಬಿಜೆಪಿ, ಜೆಡಿಯು ಮತ್ತು ಆರ್‌ಜೆಡಿಯಿಂದ ಅಸಮಾಧಾನಗೊಂಡ ಬೆಂಬಲಿಗರನ್ನು ಅವರು ತಮ್ಮತ್ತ ಹೇಗೆ ಸೆಳೆಯುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಚುನಾವಣೆಯ ಉದ್ದಕ್ಕೂ ವಿದೇಶದಲ್ಲಿದ್ದು, ಮತದಾನಕ್ಕೆ ಕೆಲವೇ ದಿನಗಳ ಮೊದಲು ಹಿಂತಿರುಗಿದ ತೇಜಸ್ವಿ ಯಾದವ್ ಅವರಿಗೂ ಎಚ್ಚರಿಕೆ ಗಂಟೆ ಎಂದರೆ ತಪ್ಪಲ್ಲ' ಎಂದಿದ್ದಾರೆ.

