ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರು ಅಮೆರಿಕ, ಕೆನಡಾ ಮತ್ತು ಬ್ರಿಟನ್ ಪ್ರವಾಸದಲ್ಲಿದ್ದು, ಮಂಗಳವಾರ ನ್ಯೂಯಾರ್ಕ್‌ಗೆ ತಲುಪಿದ್ದಾರೆ.
ಆರ್‌ಎಸ್‌ಎಸ್‌ನ ಶತಮಾನೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾಗಿರುವ ಜಾಗತಿಕ ಸಂಪರ್ಕ ಕಾರ್ಯಕ್ರಮದಡಿ ಭಾಗವತ್ ಅಮೆರಿಕ, ಕೆನಡಾ ಹಾಗೂ ಬ್ರಿಟನ್ ಪ್ರವಾಸ ಕೈಗೊಂಡಿದ್ದಾರೆ.
ಅಮೆರಿಕದ ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್‌ನಲ್ಲಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಲಿರುವ ಮೋಹನ್ ಭಾಗವತ್ ಅವರ ಕಾರ್ಯಕ್ರಮವನ್ನು ನ್ಯೂಯಾರ್ಕ್ ಮೇಯರ್ ಜೊಹ್ರಾನ್ ಮಮ್ದಾನಿ ಅವರು ವಿರೋಧಿಸಿದ್ದಾರೆ. ಹಾಗಾಗಿ ಈ ಕಾರ್ಯಕ್ರಮದತ್ತ ತೀವ್ರ ಕುತೂಹಲ ನೆಟ್ಟಿದೆ.
ಕಾರ್ಯಕ್ರಮದ ದಿನಾಂಕ ಮತ್ತು ಸಮಯ
ಮೋಹನ್ ಭಾಗವತ್ ಅವರು ನ್ಯೂಯಾರ್ಕ್ ನಗರದ ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್‌ನಲ್ಲಿ ನಡೆಯಲಿರುವ 'ಯೂನಿವರ್ಸಲ್ ಒನ್‌ನೆಸ್ ಸೆಲೆಬ್ರೆಷನ್' (Universal Oneness Celebrations) ಕಾರ್ಯಕ್ರಮದಲ್ಲಿ ಮಾತನಾಡಲಿದ್ದಾರೆ.
ದಿನಾಂಕ: 2026 ಆಗಸ್ಟ್ 29 (ಶನಿವಾರ)
ಸಮಯ: ಮಧ್ಯಾಹ್ನ 2:00 ರಿಂದ ಸಂಜೆ 5:30 (ಸ್ಥಳೀಯ ಕಾಲಮಾನ)
ಸ್ಥಳ: ಇನ್ಫೋಸಿಸ್ ಥಿಯೇಟರ್, ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್, ನ್ಯೂಯಾರ್ಕ್
ಆಯೋಜಕರು: ಅಮೆರಿಕನ್ ಹಿಂದೂಸ್ ಫಾರ್ ಎಂಗೇಜ್‌ಮೆಂಟ್ ಆಯಂಡ್ ಡೈಲಾಗ್ (AHEAD) ಫೋರಂ
ಭಾಗವತ್ ಕಾರ್ಯಕ್ರಮ ಬೆಂಬಲಿಸೆನು: ಮಮ್ದಾನಿ
ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಮ್ದಾನಿ, ಈ ಸಮಾವೇಶಕ್ಕೆ ತಮ್ಮ ಸಂಪೂರ್ಣ ವಿರೋಧವಿದೆ ಎಂದಿದ್ದರು. ಆದರೆ, ಇದು ಖಾಸಗಿ ಸ್ಥಳದಲ್ಲಿ ನಡೆಯುತ್ತಿರುವ ಕಾರ್ಯಕ್ರಮವಾದ್ದರಿಂದ ಅದನ್ನು ರದ್ದುಗೊಳಿಸುವ ಅಧಿಕಾರ ನಗರಾಡಳಿತಕ್ಕೆ ಇಲ್ಲ ಎಂದು ಸ್ಪಷ್ಟಪಡಿಸಿದ್ದರು.
ಮುಂದುವರಿದು, ನ್ಯೂಯಾರ್ಕ್ ನಗರದ ಇತಿಹಾಸದಲ್ಲೇ ಮೊದಲ ಭಾರತೀಯ ಅಮೆರಿಕನ್ ಮೇಯರ್ ಆಗಿ ನಾನು ಇಲ್ಲಿದ್ದೇನೆ. ನನ್ನ ತಾಯಿಯ ಕಡೆಯ ಕುಟುಂಬವೆಲ್ಲಾ ಇಂದಿಗೂ ಭಾರತದಲ್ಲೇ ಇದೆ. 'ಭಾರತದ್ದು ಬಹುತ್ವದ ಸಮಾಜ. ಜಾತ್ಯತೀತ ದೇಶ ಇದಾಗಿದೆ. ಪ್ರತಿಯೊಬ್ಬನನ್ನೂ ಒಳಗೊಳ್ಳುವುದರಲ್ಲಿ ನಂಬಿಕೆ ಇಟ್ಟ ದೇಶ ನನ್ನದು ಎಂದು ಕುಟುಂಬದವರು ಹೇಳಿಕೊಟ್ಟಿದ್ದಾರೆ'. ಆದರೆ, ಭಾರತದಲ್ಲಿ ಇಂದು ನಿರ್ದಿಷ್ಟ ವರ್ಗಗಳ ಜನರನ್ನು ಹೊರಗಿಡುವ ಸಿದ್ಧಾಂತ ಬೆಳೆಯುತ್ತಿರುವುದು ತೀವ್ರ ಕಳವಳಕಾರಿ. ಹೀಗಾಗಿ ನಾನು ಈ ಕಾರ್ಯಕ್ರಮವನ್ನು ತೀವ್ರವಾಗಿ ವಿರೋಧಿಸುತ್ತೇನೆ ಎಂದೂ ಮಮ್ದಾನಿ ಹೇಳಿದ್ದರು.
ಜಾಗರೂಕರಾಗಿರಿ - ಎಚ್‌ಎಎಫ್ ಸಲಹೆ
ಕಾರ್ಯಕ್ರಮಕ್ಕೆ ಬರುವವರು ಪ್ರತಿಭಟನಾಕಾರರೊಂದಿಗೆ ಯಾವುದೇ ಸಂಘರ್ಷಕ್ಕೆ ಇಳಿಯದೆ ಜಾಗರೂಕರಾಗಿರಬೇಕು ಎಂದು ಅಮೆರಿಕದ ಹಿಂದೂ ಅಮೆರಿಕನ್ ಫೌಂಡೇಶನ್ (ಎಚ್‌ಎಎಫ್) ಸಲಹೆ ನೀಡಿದೆ.
ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್‌ನ ಇನ್ಫೋಸಿಸ್ ಥಿಯೇಟರ್‌ನಲ್ಲಿ ನಡೆಯುವ ಈ ಕಾರ್ಯಕ್ರಮವನ್ನು ತಡೆಯಲು ಅಥವಾ ರದ್ದುಗೊಳಿಸಲು ಕೆಲವರು ಯತ್ನಿಸುತ್ತಿದ್ದಾರೆ ಎಂದು ಅದು ಎಚ್ಚರಿಸಿದೆ.
'ಹಿಂದೂಸ್ ಫಾರ್ ಹ್ಯೂಮನ್ ರೈಟ್ಸ್' ಮತ್ತು ಇತರ ಸಂಘಟನೆಗಳು ಶನಿವಾರ ಈ ಕಾರ್ಯಕ್ರಮ ನಡೆಯುವ ಸ್ಥಳದ ಹೊರಗೆ ಪ್ರತಿಭಟನೆ ನಡೆಸಲು ನಿರ್ಧರಿಸಿವೆ.
ಮೋಹನ್ ಭಾಗವತ್ ಅವರು ಹಿಂದೂಗಳನ್ನು ಪ್ರತಿನಿಧಿಸುವುದಿಲ್ಲ. ಅವರು ಅಲ್ಪಸಂಖ್ಯಾತರಲ್ಲಿ ಭಯ ಮತ್ತು ಹಿಂಸೆಯನ್ನು ಹುಟ್ಟುಹಾಕುವ ಉಗ್ರ ಹಿಂದುತ್ವ ಚಳವಳಿಯ ನಾಯಕತ್ವ ವಹಿಸಿದ್ದಾರೆ ಎಂದು 'ಹಿಂದೂಸ್ ಫಾರ್ ಹ್ಯೂಮನ್ ರೈಟ್ಸ್' ಸಂಸ್ಥೆಯ ಉಪ ಕಾರ್ಯನಿರ್ವಾಹಕ ನಿರ್ದೇಶಕಿ ಶ್ರಾವ್ಯಾ ತೇಡೆಪಲ್ಲಿ ಹೇಳಿದ್ದಾರೆ.
ಇನ್ನೊಂದೆಡೆ, ಕಾರ್ಯಕ್ರಮಕ್ಕೆ ಆಗಮಿಸುವ ಎಲ್ಲರ ಸುರಕ್ಷತೆ ಮತ್ತು ನಾಗರಿಕ ಹಕ್ಕುಗಳನ್ನು ಕಾಪಾಡುವುದು ನಗರದ ಮೇಯರ್ ಮಮ್ದಾನಿ ಅವರ ಕರ್ತವ್ಯ ಎಂದು ಎಚ್‌ಎಎಫ್ ಹೇಳಿದೆ. ಕಾರ್ಯಕ್ರಮಕ್ಕೆ ಬರುವವರು ಶಾಂತಿಯುತವಾಗಿ ವರ್ತಿಸಿ. ಪ್ರತಿಯೊಬ್ಬರಿಗೂ ಪ್ರತಿಭಟಿಸುವ ಮತ್ತು ತಮ್ಮ ಅನಿಸಿಕೆ ವ್ಯಕ್ತಪಡಿಸುವ ಹಕ್ಕಿದೆ ಎಂಬುದನ್ನು ಗೌರವಿಸಿ ಎಂದೂ ಹೇಳಿದೆ.

