ಮುಳ್ಳೇರಿಯ: ಕಾರಡ್ಕ ಮೂಡಂಗುಳಂ ಎಂಬಲ್ಲಿನ ಜನವಾಸವಿಲ್ಲದ ಹಿತ್ತಿಲಿಂದ ಶ್ರೀಗಂಧದ ಮರಕಡಿದು ಸಾಗಿಸಲೆತ್ನಿಸಿದ ಮುಳ್ಳೇರಿಯಾ ನಿವಾಸಿ ಕೆ.ಎಂ. ಅಶೋಕ್ (56) ಎಂಬಾತನನ್ನು ಅರಣ್ಯ ಇಲಾಖೆ ಅಧಿಕಾರಿಗಳು ತಾಸುಗಳೊಳಗಾಗಿ ಸೆರೆ ಹಿಡಿದಿದ್ದಾರೆ. ಕಾರಡ್ಕ ಸೆಕ್ಷನ್ ಆಫೀಸರ್ ಕೆ.ಎ. ಬಾಬು ಹಾಗೂ ತಂಡ ಕಾರ್ಯಾಚರಣೆ ನಡೆಸಿದೆ. ಈತನ ವಶದಲ್ಲಿದ್ದ ಎರಡು ಕಿಲೋ ಶ್ರೀಗಂಧದ ಕೊರಡು ಹಾಗೂ ತುಮಡರಿಸಲು ಬಳಸಿದ್ದ ಎಕ್ಸೋ ಬ್ಲೇಡ್, ಕತ್ತಿಯನ್ನು ವಶಪಡಿಸಿಕೊಳ್ಳಲಾಗಿದೆ.
ಶ್ರೀಗಂಧದ ಮರ ಕಡಿದು ಸಾಗಾಟ ನಡೆಸುತ್ತಿರುವ ಬಗ್ಗೆಮಹಿತಿ ಪಡೆದ ಅಧಿಕಾರಿಗಳು ಕಾರ್ಯಾಚರಣೆ ನಡೆಸುತ್ತಿರುವ ಮಧ್ಯೆ, ಶೀಗಂಧದೊಂದಿಗೆ ಬಸ್ ನಿಲ್ದಾಣದಲ್ಲಿ ನಿಂತಿದ್ದ ಅಶೋಕ್‍ನನ್ನು ವಶಕ್ಕೆ ತೆಗೆದುಕೊಂಡಿದ್ದರು. ಈತನ ವಿರುದ್ಧ ಈ ಹಿಂದೆಯೂ ಶ್ರೀಗಂಧ ಸಾಗಾಟದ ಪ್ರಕರಣ ದಾಖಲಾಗಿದ್ದು, ಜೈಲುವಾಸ ಅನುಭವಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.


