ನವದೆಹಲಿ: 80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಮೊದಲ ಬಾರಿಗೆ ದೆಹಲಿಯ ಕೆಂಪುಕೋಟೆಯಲ್ಲಿ ರಾಷ್ಟ್ರ ಗೀತೆ 'ವಂದೇ ಮಾತರಂ' ಹಾಡಲಾಗುತ್ತದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
ಸಾಮಾನ್ಯವಾಗಿ ಸ್ವಾತಂತ್ರ್ಯ ದಿನಾಚರಣೆ ಸಂದರ್ಭ ಪ್ರಧಾನಮಂತ್ರಿಯವರು ಧ್ವಜಾರೋಹಣ ನೆರವೇರಿಸಿ ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡುತ್ತಾರೆ.
ಬಳಿಕ ರಾಷ್ಟ್ರಗೀತೆ 'ಜನ ಗಣ ಮನ' ಹಾಡಲಾಗುತ್ತದೆ. ಆದರೆ ಈ ಬಾರಿ ಕಾರ್ಯಕ್ರಮದಲ್ಲಿ ಹೊಸದಾಗಿ 'ವಂದೇ ಮಾತರಂ' ಗಾಯನವನ್ನು ಸೇರಿಸಲಾಗಿದ್ದು, ಇದು ಕೆಂಪುಕೋಟೆಯ ಇತಿಹಾಸದಲ್ಲೇ ಮೊದಲ ಬಾರಿಗೆ ನಡೆಯುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
'ಸಮಾರಂಭದಲ್ಲಿ ಭಾಗವಹಿಸುವ ಎಲ್ಲಾ ಅತಿಥಿಗಳು, ವಿದ್ಯಾರ್ಥಿಗಳು ಹಾಗೂ ಗಣ್ಯರು 'ವಂದೇ ಮಾತರಂ' ಗಾಯನದ ವೇಳೆ ಎದ್ದು ನಿಲ್ಲಬೇಕಾಗುತ್ತದೆ. ಈ ವರ್ಷದ ಸ್ವಾತಂತ್ರ್ಯೋತ್ಸವದಲ್ಲಿ ಯುವಶಕ್ತಿಗೆ ವಿಶೇಷ ಒತ್ತು ನೀಡಲಾಗುತ್ತಿದೆ' ಎಂದು ರಕ್ಷಣಾ ಕಾರ್ಯದರ್ಶಿ ರಾಜೇಶ್ ಕುಮಾರ್ ತಿಳಿಸಿದ್ದಾರೆ.
'ವಂದೇ ಮಾತರಂ' ಗೀತೆಯನ್ನು ಬಂಕಿಮಚಂದ್ರ ಚಟ್ಟೋಪಾಧ್ಯಾಯ ಅವರು ರಚಿಸಿದ್ದು, ಭಾರತದ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಈ ಗೀತೆ ದೇಶಭಕ್ತಿಯ ಸಂಕೇತವಾಗಿ ಹೊರಹೊಮ್ಮಿತ್ತು.

