ಕಾಸರಗೋಡು: ಜಿಲ್ಲೆಯಲ್ಲಿ ಬಿರುಸಿನ ಮಳೆ ಮುಂದುವರಿದಿದ್ದು, ನೀರಿನಿಂದಾವೃತವಾಗಿರುವ ತಗ್ಗು ಪ್ರದೇಶದಿಂದ ಜನರನ್ನು ಸುರಕ್ಷಿ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ. ಪ್ರಸ್ತುತ ಜಿಲ್ಲೆಯಲ್ಲಿ ಐದು ಶಿಬಿರಗಳು ಕಾರ್ಯನಿರ್ವಹಿಸುತ್ತಿದ್ದು, ಇವುಗಳಲ್ಲಿ ಮೂರು ವೆಳ್ಳರಿಕುಂಡು ತಾಲೂಕಿನಲ್ಲಿ ಮತ್ತು ಎರಡು ಹೊಸದುರ್ಗ ತಾಲೂಕಿನಲ್ಲಿ ಕಾರ್ಯಾಚರಿಸುತ್ತಿದೆ. ಈ ಶಿಬಿರಗಳಲ್ಲಿ ಒಟ್ಟು 59 ಕುಟುಂಬಗಳ 208 ಮಂದಿ ಆಶ್ರಯ ಪಡೆದಿದ್ದು, ಇವರಲ್ಲಿ 85 ಪುರುಷರು, 93 ಮಹಿಳೆಯರು ಮತ್ತು 34 ಮಕ್ಕಳಿದ್ದಾರೆ. ಪಲವಯಲ್, ಕಿನಾನೂರ್-ಕರಿಂದಲಂ, ಪೆರೋಲ್ ಮತ್ತು ಕ್ಲೈಕೋಡ್ ಗ್ರಾಮಗಳಲ್ಲಿ ಈ ಶಿಬಿರಗಳನ್ನು ತೆರೆಯಲಾಗಿದೆ.
ತಯ್ಯೇನಿ ಸರ್ಕಾರಿ ಪ್ರೌಢಶಾಲೆ, ದೇಶಸೇವನಿ ಗ್ರಂಥಾಲಯ, ಚುಳ್ಳಿಕ್ಕರ ಎಲ್‍ಪಿ ಶಾಲೆ, ಚಾತಮತ್ ದೇವಾಲಯದ ಸಭಾಂಗಣ ಮತ್ತು ಕ್ಲಾಯಿಕೋಡ್ ನಯನಾರ್ ಮಂದಿರ ಸೇರಿದಂತೆ ವಿವಿಧ ಸ್ಥಳಗಳಲ್ಲೂ ಶಿಬಿರ ತೆರೆಯಲಾಗಿದೆ. ಅರುವತ್ತೇಳು ಕುಟುಂಬಗಳು ತಮ್ಮ ಸಂಬಂಧಿಕರ ಮನೆಗಳಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ.
ಜಿಲ್ಲೆಯಾದ್ಯಂತ ಒಟ್ಟು 11 ಮನೆಗಳು ಆಂಶಿಕವಾಗಿ ಹಾನಿಗೀಡಾಗಿದೆ. ವೆಲ್ಲರಿಕುಂಡು ತಾಲೂಕಿನಲ್ಲಿ ಐದು, ಕಾಸರಗೋಡು ತಾಲೂಕಿನಲ್ಲಿ ಮೂರು ಮತ್ತು ಮಂಜೇಶ್ವರ ತಾಲೂಕಿನಲ್ಲಿ ಎರಡು ಸೇರಿದಂತೆ ಒಟ್ಟು 11ಮನೆಗಳು ಹಾನಿಗೀಡಾಗಿದೆ.
ಮಧೂರು ಮಧುವಾಹಿನಿ ಮತ್ತು ಕಾರ್ಯಂಗೋಡು ಹೊಳೆ ದಡದ ನಿವಾಸಿಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದ್ದು, ಇಲ್ಲಿನ ತಗ್ಗು ಪ್ರದೇಶದ ನಿವಾಸಿಗಳು ತಮ್ಮ ಸಂಬಂಧಿಕರ ಮನೆಗಳಿಗೆ ಸ್ಥಳಾಂತರಗೊಳ್ಳುವಂತೆ ಸೂಚಿಸಲಾಗಿದೆ. ಕಳ್ಳಾರ್ ಗ್ರಾಮದ ಒಟ್ಟಕಂಡ ಕಾಲೋನಿಯ ಏಳು ಕುಟುಂಬಗಳನ್ನು ಸಂಬಂಧಿಕರ ಮನೆಗಳಿಗೆ ಹಾಗೂ ಮುಂಡಮಣಿ ಕುಟ್ಟಿಕಾನಂ ಕಾಲೋನಿಯ ಐದು ಕುಟುಂಬಗಳನ್ನು ಜಿಎಲ್‍ಪಿಎಸ್ ಚುಳ್ಳಿಕ್ಕರದಲ್ಲಿರುವ ಸಂತ್ರಸ್ತರ ಶಿಬಿರಕ್ಕೆ ಸ್ಥಳಾಂತರಿಸಲಾಗಿದೆ.
ತಯ್ಯೇನಿ ಮತ್ತು ಕಟ್ಟಂಕವಲದಲ್ಲಿ ಎರಡು ಕಡೆ ಭೂಕುಸಿತ ಉಂಟಾಗಿದ್ದು, ಭೂಕುಸಿತದ ಮೂಲ ಸ್ಥಳ ಪತ್ತೆಹಚ್ಚಿ ಕೂಲಂಕಷ ಅಧ್ಯಯನ ಮಾಡಲು ಭೂವಿಜ್ಞಾನಿಗಳು, ಮಣ್ಣು ಸಮೀಕ್ಷಾ ಅಧಿಕಾರಿಗಳು, ಅಪಾಯ ವಿಶ್ಲೇಷಕರು, ಅರಣ್ಯ ಮತ್ತು ಸ್ಥಳೀಯಾಡಳಿತ ಸಂಸ್ಥೆ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಕಾರ್ಯಾಚರಿಸುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.
ಪಾಣತ್ತೂರು ಪರಿಯಾರಂನ ಕುಟ್ಟಿಯಾನಕ್ಕಲ್ ನಿವಾಸಿ ಓಮನಜೋಸೆಫ್ ಅವರ ಮನೆ ಜಗುಲಿ ಬಿರುಕುಬಿಟ್ಟಿದ್ದು, ಮನೆ ಕುಸಿತದ ಭೀತಿ ಎದುರಿಸುತ್ತಿದೆ. ಅಪಾಯ ಭೀತಿ ಹಿನ್ನೆಲೆಯಲ್ಲಿ ಮನೆಯವರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ.
ಜಿಲ್ಲಾಧಿಕಾರಿ ಅವಲೋಕನ:
ಮುಂಗಾರು ಮಳೆಯ ಹಿನ್ನೆಲೆಯಲ್ಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ ಅಧ್ಯಕ್ಷ ಹಾಗೂ ಜಿಲ್ಲಾಧಿಕಾರಿ ಅರ್ಜುನ್ ಪಾಂಡಿಯನ್ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ ನಡೆಯಿತು. ಇನ್ನೂ ಎರಡು ದಿನಗಳ ಕಾಲ ನಿರಂತರ ನಿಗಾ ವಹಿಸುವ ಅಗತ್ಯವಿದೆ. ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಚಿತ್ರಗಳ ಮಾಹಿತಿ:1): ನೀಲೇಶ್ವರ ಪಾಲಾಯಿ ಪ್ರದೇಶದಲ್ಲಿ ನೆರೆನೀರಿನಿಂದ ಸಂಕಷ್ಟದಲ್ಲಿರುವವರನ್ನು ದೋಣಿಗಳ ಮೂಲಕ ಸ್ಥಳಾಂತರಿಸಲಾಯಿತು.
2): ವಿವಿಧ ಶಿಬಿರಗಳಲ್ಲಿ ವಾಸಿಸುತ್ತಿರುವ ನೆರೆ ಸಂತ್ರಸ್ತರನ್ನು ಜಿಲ್ಲಾಧಿಕಾರಿ ಅರ್ಜುನ್ ಪಾಂಡ್ಯನ್ ಭೇಟಿಮಾಡಿದರು.
3): ಸಂತ್ರಸ್ತರ ಶಿಬಿರಗಳಿಗೆ ತೆರಳಲು ಹಿಂದೇಟು ಹಾಕುತ್ತಿದ್ದ ಕುಟ್ಟಿಕ್ಕಾನಂನ 'ಮುಂಡಾ ಮಣಿ ಉನ್ನತಿ'ಯ ನಿವಾಸಿಗಳನ್ನು ಜಿಲ್ಲಾಧಿಕಾರಿ ಮನವೊಲಿಸಿ ಶಿಬಿರಕ್ಕೆ ಸಾಗಿಸಿದರು.




