HEALTH TIPS

ಸಂಸತ್ತಿನ ಮುಂಗಾರು ಅಧಿವೇಶನ ಮುಕ್ತಾಯ: ದಶಕದಲ್ಲೇ ಕಡಿಮೆ ಫಲಪ್ರದ ಚರ್ಚಾ ಅವಧಿ

ನವದೆಹಲಿ: ಸಂಸತ್ತಿನ ಮುಂಗಾರು ಅಧಿವೇಶನ ಗುರುವಾರ ಮುಕ್ತಾಯಗೊಂಡಿದ್ದು, ಲೋಕಸಭೆಯು ದಶಕದಲ್ಲಿಯೇ ಅತಿ ಕಡಿಮೆ ಫಲಪ್ರದ ಚರ್ಚಾ ಅವಧಿಯನ್ನು ದಾಖಲಿಸಿದೆ. 


2004ರಿಂದೀಚೆಗೆ ಕೇವಲ ಎರಡು ಸಂಸತ್‌ ಅಧಿವೇಶನಗಳು ಇದಕ್ಕಿಂತ ಕಡಿಮೆ ಫಲಪ್ರದ ಚರ್ಚಾ ಅವಧಿಯನ್ನು ಕಂಡಿದ್ದವು ಎಂದು ಪಿಆರ್‌ಎಸ್‌ ಲೆಜಿಸ್ಲೇಟಿವ್‌ ರಿಸರ್ಚ್‌ನ ದತ್ತಾಂಶ ತಿಳಿಸುತ್ತದೆ.

ಲೋಕಸಭೆಯ ಮಟ್ಟಿಗೆ ಹೇಳುವುದಾದರೆ ಈ ಬಾರಿಯ ಅಧಿವೇಶನವು ಅತ್ಯಂತ ಕಳಪೆ ಕಾರ್ಯನಿರ್ವಹಣೆಯ ಸಾಲಿಗೆ ಸೇರುತ್ತದೆ. ಇದರ ಫಲಪ್ರದ ಚರ್ಚಾ ಅವಧಿ ಶೇ 15ರಷ್ಟಿದ್ದು, 2016ರ ಚಳಿಗಾಲದ ಅಧಿವೇಶನಕ್ಕೆ ಸಮನಾಗಿದೆ ಎಂದು ಪಿಆರ್‌ಎಸ್‌ ಹಂಚಿಕೊಂಡ ದತ್ತಾಂಶ ಹೇಳುತ್ತದೆ.

ಚಳಿಗಾಲದ ಅಧಿವೇಶನದಲ್ಲಿ 2010ರಲ್ಲಿ ಲೋಕಸಭೆ ಶೇ 5ರಷ್ಟು, ರಾಜ್ಯಸಭೆ ಶೇ 2ರಷ್ಟು ಮತ್ತು 2013ರಲ್ಲಿ ಲೋಕಸಭೆ ಶೇ 8ರಷ್ಟು ಮತ್ತು ರಾಜ್ಯಸಭೆ ಶೇ 19ರಷ್ಟು ಫಲಪ್ರದ ಚರ್ಚಾ ಅವಧಿಯನ್ನು ದಾಖಲಿಸಿತ್ತು. 2010ರಲ್ಲಿ 2ಜಿ ಸ್ಪೆಕ್ಟ್ರಮ್‌ ಹಂಚಿಕೆಯಲ್ಲಿನ ಅಕ್ರಮಗಳ ಆರೋಪಗಳು ಮತ್ತು 2013ರಲ್ಲಿ ಆಂಧ್ರ ಪ್ರದೇಶ ವಿಭಜನೆ ಮತ್ತು ಕಲ್ಲಿದ್ದಲು ಹಗರಣದ ಕುರಿತ ಆರೋಪಗಳು ಅಧಿವೇಶನದಲ್ಲಿ ತೀವ್ರ ಗದ್ದಲ ಎಬ್ಬಿಸಿದ್ದವು.

2016ರ ಚಳಿಗಾಲದ ಅಧಿವೇಶನದಲ್ಲಿ ಲೋಕಸಭೆ ಶೇ 15 ಮತ್ತು ರಾಜ್ಯಸಭೆ ಶೇ 18ರಷ್ಟು ಫಲಪ್ರದ ಚರ್ಚಾ ಅವಧಿಯನ್ನು ದಾಖಲಿಸಿತ್ತು. ಆಗ ಕೆಲ ನೋಟುಗಳ ಅಮಾನ್ಯೀಕರಣದ ವಿಷಯವು ತೀವ್ರ ಸಂಘರ್ಷಕ್ಕೆ ಕಾರಣವಾಗಿತ್ತು.

ಈ ಬಾರಿ ರಾಜ್ಯಸಭೆಯ ಫಲಪ್ರದ ಚರ್ಚಾ ಅವಧಿ ಶೇ 33ರಷ್ಟಿದೆ ಎಂದು ಪಿಆರ್‌ಎಸ್‌ ಹೇಳಿದೆ. ಆದಾಗ್ಯೂ, ಸಂಸದೀಯ ವ್ಯವಹಾರಗಳ ಸಚಿವ ಕಿರಣ್‌ ರಿಜಿಜು ಅವರು, 'ಮುಂಗಾರು ಅಧಿವೇಶನದಲ್ಲಿ ಲೋಕಸಭೆ ಶೇ 19 ಮತ್ತು ರಾಜ್ಯಸಭೆ ಶೇ 39ರಷ್ಟು ಫಲಪ್ರದ ಚರ್ಚಾ ಅವಧಿಯನ್ನು ದಾಖಲಿಸಿವೆ' ಎಂದು ಮಾಹಿತಿ ನೀಡಿದ್ದಾರೆ.

ಅಂಕಿ-ಅಂಶಗಳಲ್ಲಿನ ವ್ಯತ್ಯಾಸದ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಪಿಆರ್‌ಎಸ್‌, 'ಸಂಸತ್ತು ವಾಸ್ತವವಾಗಿ ಕಾರ್ಯ ನಿರ್ವಹಿಸಿದ ಅಧಿವೇಶನದ ಸಮಯವನ್ನು ಒಟ್ಟು ಯೋಜಿತ ಕಲಾಪದ ಸಮಯದಿಂದ ಭಾಗಿಸುವ ಮೂಲಕ ಫಲಪ್ರದ ಚರ್ಚಾ ಅವಧಿಯನ್ನು ಲೆಕ್ಕ ಹಾಕಲಾಗುತ್ತದೆ. ಸದನವು ತನ್ನ ನಿಗದಿತ ಅವಧಿಗಿಂತ ಹೆಚ್ಚು ಅಥವಾ ಕಡಿಮೆ ಅವಧಿ ನಡೆದಾಗ ಅಂಕಿ ಅಂಶದಲ್ಲಿ ವ್ಯತ್ಯಾಸ ಗೋಚರಿಸುತ್ತದೆ' ಎಂದಿದೆ.

ಎನ್‌ಡಿಎ, 'ಇಂಡಿಯಾ' ಮೈತ್ರಿ ಪ್ರತಿಭಟನೆ

ನವದೆಹಲಿ (ಪಿಟಿಐ): ಪ್ರಮುಖ ಸಮಸ್ಯೆಗಳ ಚರ್ಚೆಯೇ ನಡೆಯದೆ ಸಂಸತ್‌ನ ಮುಂಗಾರು ಅಧಿವೇಶನ ಗುರುವಾರ ಮುಕ್ತಾಯಗೊಂಡಿತು. ಅದರ ಬೆನ್ನಲ್ಲೇ ಎನ್‌ಡಿಎ ಹಾಗೂ 'ಇಂಡಿಯಾ' ಮೈತ್ರಿ ಕೂಟದ ಸಂಸದರು ಸಂಸತ್‌ ಆವರಣದ ಮಕರ ದ್ವಾರದ ಬಳಿ ಗುರುವಾರ ಪ್ರತಿಭಟನೆ ನಡೆಸಿದರು.

ಆರಂಭದಲ್ಲಿ ಪ್ರತಿಭಟನೆ ಪ್ರತ್ಯೇಕ ವಾಗಿ ನಡೆಯಿತು. ಕ್ರಮೇಣ ಎರಡೂ ಮೈತ್ರಿಕೂಟಗಳ ಸದಸ್ಯರು ಮುಖಾಮುಖಿಯಾಗಿ ಪರಸ್ಪರರ ವಿರುದ್ಧ ಘೋಷಣೆಗಳನ್ನು ಕೂಗಿದರು. ಈ ವೇಳೆ ಭದ್ರತಾ ಸಿಬ್ಬಂದಿ ಉಭಯ ಗುಂಪುಗಳ ನಡುವೆ ತಡೆಗೋಡೆಯಂತೆ ನಿಂತು, ಅವಘಡ ನಡೆಯದಂತೆ ನೋಡಿಕೊಂಡರು.

ವಿದ್ಯಾರ್ಥಿಗಳ ಮೇಲಿನ ಪೊಲೀಸ್‌ ದೌರ್ಜನ್ಯ ಮತ್ತು ಅಯೋಧ್ಯೆಯ ರಾಮಮಂದಿರದಲ್ಲಿನ ದೇಣಿಗೆ ಕಳವು ಆರೋಪಗಳನ್ನು ಉಲ್ಲೇಖಿಸಿ 'ಇಂಡಿಯಾ' ಕೂಟದವರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಯಾಗಿ ಜಾರ್ಖಂಡ್‌ನಲ್ಲಿ ಉದ್ಯೋಗಾಕಾಂಕ್ಷಿಗಳ ಮೇಲಿನ ಪೊಲೀಸ್‌ ದೌರ್ಜನ್ಯವನ್ನು ವಿರೋಧಿಸಿ ಎನ್‌ಡಿಎ ಮೈತ್ರಿಕೂಟದ ಸದಸ್ಯರು 'ಇಂಡಿಯಾ' ಕೂಟದ ವಿರುದ್ಧ ಘೋಷಣೆಗಳನ್ನು ಕೂಗಿದರು.

ದೆಹಲಿಯಲ್ಲಿನ ಪೊಲೀಸ್‌ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಅಮಿತ್‌ ಶಾ ಹೊಣೆಗಾರಿಕೆ ಹೊರ
ಬೇಕು ಎಂದು ವಿಪಕ್ಷದ ಸದಸ್ಯರು ಆಗ್ರಹಿಸಿ
ದರೆ, ವಿದ್ಯಾರ್ಥಿಗಳ ಪ್ರತಿಭಟನೆಗೆ ಸಂಬಂಧಿಸಿದ ಚರ್ಚೆಯಿಂದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಪಲಾಯನ ಮಾಡುತ್ತಿದ್ದಾರೆ ಎಂದು ಆಡಳಿತ ಪಕ್ಷದ ಪ್ರತಿಭಟನಕಾರರು ಆರೋಪಿಸಿದರು.

'ಅಮಿತ್‌ ಶಾ ಕ್ಷಮೆ ಕೇಳಿ', 'ದೇಣಿಗೆ ಕಳ್ಳರೇ ಅಧಿಕಾರ ಬಿಟ್ಟು ತೊಲಗಿ', 'ದೇಣಿಗೆ ಕಳ್ಳರು ಬಿಜೆಪಿ ಕಚೇರಿಯಲ್ಲಿ ಸಿಗುತ್ತಾರೆ' ಎಂಬ ಘೋಷಣೆಗಳ ಬ್ಯಾನರ್‌ಗಳನ್ನು ಹಿಡಿದು 'ಇಂಡಿಯಾ' ಮೈತ್ರಿ ಕೂಟದವರು ಪ್ರತಿಭಟಿಸಿದರು.

  • 22 ವರ್ಷಗಳಲ್ಲೇ ಅತಿ ಕಡಿಮೆ ಫಲಪ್ರದ ಚರ್ಚಾ ಅವಧಿ

  • ಲೋಕಸಭೆಯಲ್ಲಿ ಶೇ 19, ರಾಜ್ಯಸಭೆಯಲ್ಲಿ ಶೇ 39ರಷ್ಟು ಚರ್ಚಾ ಅವಧಿ

  • ಎಫ್‌ಸಿಆರ್‌ಎ ಮಸೂದೆ ಮಂಡನೆಯಾಗದಂತೆ ವಿಪಕ್ಷಗಳ ತಂತ್ರ

ಸ್ಪೀಕರ್‌ ಚಹಾಕೂಟ ಬಹಿಷ್ಕರಿಸಿದ ಕಾಂಗ್ರೆಸ್‌

ನವದೆಹಲಿ (ಪಿಟಿಐ): ಸಂಸತ್ತಿನ ಉಭಯ ಕಲಾಪಗಳನ್ನು ಗುರುವಾರ ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು. ಬಳಿಕ ಲೋಕಸಭೆಯ ಸ್ಪೀಕರ್‌ ಓಂ ಬಿರ್ಲಾ ಅವರು ಏರ್ಪಡಿಸಿದ್ದ ಚಹಾ ಕೂಟವನ್ನು ಕಾಂಗ್ರೆಸ್‌, ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಮತ್ತು ಸಮಾಜವಾದಿ ಪಕ್ಷಗಳು ಬಹಿಷ್ಕರಿಸಿದವು. ಆದರೆ ಡಿಎಂಕೆ ನಾಯಕಿ ಕನಿಮೋಳಿ ಅವರು ಈ ಕೂಟದಲ್ಲಿ ಭಾಗವಹಿಸಿದ್ದರು.

ಮತ್ತೊಂದೆಡೆ, ರಾಜ್ಯಸಭೆಯ ಸಭಾಪತಿ ಸಿ.ಪಿ.ರಾಧಾಕೃಷ್ಣನ್‌ ಅವರು ಏರ್ಪಡಿಸಿದ್ದ ಚಹಾಕೂಟದಲ್ಲಿ ರಾಜ್ಯಸಭಾ ವಿರೋಧ ಪಕ್ಷದ ನಾಯಕರೂ ಆದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್‌ ಸಂಸದೀಯ ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿ ಸೇರಿದಂತೆ ವಿಪಕ್ಷಗಳ ನಾಯಕರು ಪಾಲ್ಗೊಂಡಿದ್ದರು.

ಲೋಕಸಭೆ ಸ್ಪೀಕರ್‌ ಕೊಠಡಿಯಲ್ಲಿನ ಚಹಾ ಕೂಟದಲ್ಲಿ ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌, ಸಚಿವರು ಮತ್ತು ಹಿರಿಯ ನಾಯಕರು ಉಪಸ್ಥಿತರಿದ್ದರು ಎಂದು ಮೂಲಗಳು ತಿಳಿಸಿವೆ. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries