ನವದೆಹಲಿ: ಸಂಸ್ಕರಿಸಿದ ಆಹಾರ ಪೊಟ್ಟಣಗಳ ಮೇಲ್ಭಾಗದಲ್ಲಿ ಎಚ್ಚರಿಕೆ ಸೂಚನೆಗಳನ್ನು (ಲೇಬಲಿಂಗ್) ಮುದ್ರಿಸುವ ಕುರಿತು ಕೋರ್ಟ್ ನೀಡಿದ ನಿರ್ದೇಶನಗಳನ್ನು ಜಾರಿಗೆ ತರಲು ವಿಫಲವಾದ ಕೇಂದ್ರ ಸರ್ಕಾರ ಮತ್ತು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವನ್ನು (ಎಫ್‌ಎಸ್‌ಎಸ್‌ಎಐ) ಸುಪ್ರೀಂ ಕೋರ್ಟ್ ಗುರುವಾರ ತೀವ್ರ ತರಾಟೆಗೆ ತೆಗೆದುಕೊಂಡಿದೆ.
'ದೇಶದ ಜನರ, ವಿಶೇಷವಾಗಿ ಬೆಳೆಯುತ್ತಿರುವ ಮಕ್ಕಳ ಆರೋಗ್ಯದ ಬಗ್ಗೆ ಸರ್ಕಾರಕ್ಕೆ ಕಾಳಜಿ ಇಲ್ಲವೇ, ಜನರು ಆರೋಗ್ಯವಾಗಿರುವುದನ್ನು ನೀವು ಬಯಸುವುದಿಲ್ಲವೇ' ಎಂದು ಖಾರವಾಗಿ ಪ್ರಶ್ನಿಸಿದೆ.
ನ್ಯಾಯಮೂರ್ತಿ ಜೆ.ಬಿ. ಪಾರ್ದೀವಾಲಾ ನೇತೃತ್ವದ ಪೀಠವು ಈ ಪ್ರಕರಣದ ವಿಚಾರಣೆ ನಡೆಸಿದ್ದು, 'ಸಂಸ್ಕರಿಸಿದ ಆಹಾರ ಪೊಟ್ಟಣಗಳ ಮೇಲೆ ಕಡ್ಡಾಯವಾಗಿ 'ಹೆಚ್ಚಿನ ಮಟ್ಟದ ಸಕ್ಕರೆ, ಉಪ್ಪು ಮತ್ತು ಕೊಬ್ಬಿನ ಬಗ್ಗೆ ಸ್ಪಷ್ಟವಾಗಿ ಸೂಚನೆ ನೀಡಬೇಕು. ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು, ವಿಶೇಷವಾಗಿ ಅನಾರೋಗ್ಯಕರ ಆಹಾರ ಪೊಟ್ಟಣಗಳಿಗೆ 'ವ್ಯಸನಿ'ಗಳಾಗುತ್ತಿರುವ ಮಕ್ಕಳಿಗೆ 'ಆರೋಗ್ಯಕರ ಆಯ್ಕೆ'ಯನ್ನು ಖಾತರಿಪಡಿಸಲು ಇಂತಹ ಲೇಬಲಿಂಗ್ ಕಡ್ಡಾಯ ಎಂದು ಹೇಳಿದೆ.
ಕಳೆದ ಫೆಬ್ರುವರಿಯಲ್ಲಿ ಲೇಬಲಿಂಗ್ ಚೌಕಟ್ಟಿನ ಕುರಿತು ನಾಲ್ಕು ವಾರಗಳಲ್ಲಿ ಪ್ರತಿಕ್ರಿಯಿಸುವಂತೆ ಸುಪ್ರೀಂ ಕೋರ್ಟ್ ಕೇಂದ್ರಕ್ಕೆ ನಿರ್ದೇಶಿಸಿತ್ತು. ಆದರೆ, 'ಎಫ್‌ಎಸ್‌ಎಸ್‌ಎಐ' ಪ್ರತಿಕ್ರಿಯೆ ದಾಖಲಿಸಿರಲಿಲ್ಲ.
'ಸಂಸ್ಕರಿಸಿದ ಆಹಾರ ಪದಾರ್ಥಗಳ ತಯಾರಕರು ಲೇಬಲಿಂಗ್ ಇಷ್ಟಪಡದೆ ಇರಬಹುದು, ಯಾಕೆಂದರೆ ಅದು ಅವರ ವ್ಯವಹಾರದ ಮೇಲೆ ಪರಿಣಾಮ ಬೀರುತ್ತದೆ. ಆದರೆ, ನೀವು (ಎಫ್‌ಎಸ್‌ಎಸ್‌ಎಐ) ಇದನ್ನು ಜಾರಿಗೊಳಿಸಲು ಯಾಕೆ ಹಿಂಜರಿಯುತ್ತೀರಿ' ಎಂದು ಪ್ರಶ್ನಿಸಿದ ಪೀಠವು, 'ಭಾರತವು ತನ್ನ ನಾಗರಿಕರ, ವಿಶೇಷವಾಗಿ ಬೆಳೆಯುತ್ತಿರುವ ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತದೆ ಎಂದು ಜಗತ್ತಿಗೆ ತಿಳಿಸಬೇಕು' ಎಂದು ಒತ್ತಿಹೇಳಿತು.
ಸರ್ಕಾರದ ಪರ ಹಾಜರಾದ ವಕೀಲರು, 'ಲೇಬಲಿಂಗ್ ಕಡ್ಡಾಯಗೊಳಿಸುವುದರಿಂದ ಭಾರತದ ಕೆಲವು ಸಾಂಪ್ರದಾಯಿಕ ಸಂಸ್ಕರಿತ ಆಹಾರ ಪದಾರ್ಥಗಳು ಕೆಂಪು ಚಿಹ್ನೆಯೊಂದಿಗೆ ಅನಾರೋಗ್ಯಕರ ಬ್ರಾಂಡ್ ಆಗಿ ವರ್ಗೀಕರಣಗೊಳ್ಳುತ್ತವೆ' ಎಂದು ಪ್ರತಿಪಾದಿಸಿದರು. ವಾದ ಆಲಿಸಿದ ನ್ಯಾಯಪೀಠವು, ಎರಡು ವಾರಗಳಲ್ಲಿ ಅಂತಿಮ ಪ್ರತಿಕ್ರಿಯೆ ದಾಖಲಿಸುವಂತೆ ಕೇಂದ್ರ ಸರ್ಕಾರಕ್ಕೆ ಅಂತಿಮ ಅವಕಾಶ ನೀಡಿತು.

