ಕಾಸರಗೋಡು: ಮಾದಕ ವಸ್ತುಗಳ ಸೇವನೆ ವ್ಯಕ್ತಿ ತನ್ನ ಅಸ್ತಿತ್ವ ಕಳೆದುಕೊಳ್ಳುವುದರ ಜತೆಗೆ ಆರೋಗ್ಯಪೂರ್ಣ ಸಮಾಜಕ್ಕೆ ಭಾರೀ ಅಪಾಯ ತಂದೊಡ್ಡಲಿರುವುದಾಗಿ ಸ್ಥಳೀಯಾಡಳಿತ ಖಾತೆ ಸಚಿವ ಕೆ.ಎಂ. ಶಾಜಿ ತಿಳಿಸಿದ್ದಾರೆ. ಹೊಸ ಪೀಳಿಗೆಯು ಮಾದಕ ವಸ್ತುಗಳು ಸೃಷ್ಟಿಸುವ ಭ್ರಮಾಲೋಕದಲ್ಲಿ ಬದುಕಬಾರದು ಎಂದು ಹೇಳಿದರು.
ಅವರು ಆಲಂಪಾಡಿ ಯತೀಮ್‍ಖಾನಾ ಆವರಣದ ಸಭಾಂಗಣದಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಹಾಗೂ ಮಾದಕದ್ರವ್ಯ ವಿರುದ್ಧದ ಸಾರ್ವಜನಿಕ ಜಾಗೃತಿ 'ತೂಫಾನ್' ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನೂರುಲ್ ಇಸ್ಲಾಂ ಅನಾಥಾಶ್ರಮದ ಉಪಾಧ್ಯಕ್ಷ ಪಿ.ಬಿ. ಅಬ್ದುಲ್ ಸಲಾಮ್ ಅವರ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಕಲ್ಲಟ್ರ ಮಾಹಿನ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ವಿದ್ಯಾರ್ಥಿನಿ ಆಯಿಷತ್ ಸಾದಿಕಾ ಮಾದಕವಸ್ತು ವಿರೋಧಿ ಪ್ರತಿಜ್ಞೆಯನ್ನು ಬೋಧಿಸಿದರು. ನಿವೃತ್ತ ಡಿವೈಎಸ್‍ಪಿ ಸಿ.ಎ. ರಹೀಮ್ ಅವರ ನೇತೃತ್ವದಲ್ಲಿ ಮಾದಕವಸ್ತು ವಿರೋಧಿ ಜಾಗೃತಿ ಅಧಿವೇಶನ ನಡೆಸಲಾಯಿತು. ಕಾಸರಗೋಡು ಬ್ಲಾಕ್ ಪಂಚಾಯತ್ ಅಧ್ಯಕ್ಷ ಅಬ್ದುಲ್ಲಕುಞÂ ಚೆರ್ಕಳ, ಚೆಂಗಳ ಗ್ರಾಮ ಪಂಚಾಯಿತಿ ಅಧ್ಯಕ್ಷ ವಸಂತ ಅಜಕ್ಕೋಡ್, ಎ.ಮಮ್ಮಿಞÂ, ಜಿಲ್ಲಾ ಪಂಚಾಯಿತಿ ಸದಸ್ಯೆ ಜಸ್ನಾ ಮನಾಫ್, ಬ್ಲಾಕ್ ಪಂಚಾಯತ್ ಸದಸ್ಯೆ ಸಕೀನಾ, ಚೆಂಗಳ ಗ್ರಾಮ ಪಂಚಾಯಿತಿ ಸದಸ್ಯರಾದ ಮಾಹಿನ್ ಆಲಂಪಾಡಿ ಹಾಗೂ ಇ.ಎ. ಮಹ್ಮದ್ ಉಪಸ್ಥಿತರಿದ್ದರು.
ಯತೀಂಖಾನ ಸಮಿತಿ ಪ್ರಧಾನ ಕಾರ್ಯದರ್ಶಿ ಸಾದಿಕ್‍ಮುಬಾರಕ್ ಸ್ವಾಗತಿಸಿದರು. ಗೋವ ಅಬ್ದುಲ್ಲಾ ಹಾಜಿ ವಂದಿಸಿದರು.



