ನವದೆಹಲಿ: ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಅಭಿಷೇಕ್ ಬ್ಯಾನರ್ಜಿ ಅವರು ನೇತ್ರ ಚಿಕಿತ್ಸೆಗಾಗಿ ವಿದೇಶಕ್ಕೆ ಪ್ರಯಾಣಿಸಲು ಅನುಮತಿ ನಿರಾಕರಿಸಿದ ಕಲ್ಕತ್ತ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.
ಕಲ್ಕತ್ತ ಹೈಕೋರ್ಟ್ ಆಗಸ್ಟ್ 5ರಂದು ಅಭಿಷೇಕ್ ಅವರ ಮನವಿಯನ್ನು ತಿರಸ್ಕರಿಸಿತ್ತು.
ಸರ್ಕಾರಿ ಸ್ವಾಮ್ಯದ ಎಸ್‌ಎಸ್‌ಕೆಎಂ ಆಸ್ಪತ್ರೆಯಲ್ಲಿನ ವೈದ್ಯಕೀಯ ಮಂಡಳಿ ಮುಂದೆ ಹಾಜರಾಗಿ ಅಭಿಪ್ರಾಯ ಪಡೆಯುವಂತೆ ಕೋರ್ಟ್ ಅವರಿಗೆ ಸೂಚಿಸಿತ್ತು. ಆದರೆ, ವೈದ್ಯಕೀಯ ಮಂಡಳಿ ಮುಂದೆ ಹಾಜರಾಗಲು ಸಿದ್ಧವಿಲ್ಲ ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದ್ದರಿಂದ ಕೋರ್ಟ್ ಅವರ ಅರ್ಜಿಯನ್ನು ವಜಾಗೊಳಿಸಿತ್ತು.
ಮೇ ತಿಂಗಳಲ್ಲಿ ನಡೆದ ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆ ಪ್ರಚಾರದ ವೇಳೆ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಅಭಿಷೇಕ್ ಬ್ಯಾನರ್ಜಿ ಅವರು ಕ್ರಿಮಿನಲ್ ಪ್ರಕರಣ ಎದುರಿಸುತ್ತಿದ್ದಾರೆ. ಈ ಪ್ರಕರಣದಲ್ಲಿ ಹೈಕೋರ್ಟ್ ಅವರಿಗೆ ಮಧ್ಯಂತರ ರಕ್ಷಣೆ ನೀಡಿದೆಯಾದರೂ, ಅನುಮತಿಯಿಲ್ಲದೆ ಭಾರತ ತೊರೆಯುವಂತಿಲ್ಲ ಎಂಬ ಷರತ್ತು ವಿಧಿಸಿದೆ.

