ನಾಗ್ಪುರ: ಅಪ್ರಾಪ್ತ ವಯಸ್ಸಿನ ಬಾಲಕಿಯೊಬ್ಬಳನ್ನು ಬಂಧನದಲ್ಲಿರಿಸಿ, 30 ಗಂಟೆ ಕಟ್ಟಿ ಹಾಕಿ, ಆಕೆಯ ಮೇಲೆ ಅತ್ಯಾಚಾರ ಎಸಗಿ, 20ಕ್ಕೂ ಹೆಚ್ಚು ಬಾರಿ ಚಾಕುವಿನಿಂದ ಹಲ್ಲೆ ಮಾಡಿ ಹಿಂಸೆ ನೀಡಿರುವ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ.
ಆರೋಪಿ 19 ವರ್ಷದ ಯುವಕ ನಿರ್ಮಯ್ ಮಾಧವ್ ಪಖಾರೆಯನ್ನು ಬಂಧಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಬಾಲಕಿ ಹಾಗೂ ಆರೋಪಿ ಇನ್‌ಸ್ಟಾಗ್ರಾಂನಲ್ಲಿ ಪರಿಚಯವಾಗಿದ್ದರು.
ಠಾಣೆಯಲ್ಲಿರುವ ನಿರ್ಮಯ್ ಮನೆಯಲ್ಲಿ ಪರಿಶೀಲನೆ ನಡೆಸಿದ ವೇಳೆ ಎಂಟು ಚಾಕು, ಚಾಪರ್‌ಗಳು ಮತ್ತು ಇತರೆ ಹರಿತವಾದ ಆಯುಧಗಳು, ಒಂದು ಲ್ಯಾಪ್‌ಟಾಪ್ ಮತ್ತು ಭಾರಿ ಪ್ರಮಾಣದ ಗರ್ಭನಿರೋಧಕಗಳನ್ನು ವಶಪಡಿಸಿಕೊಳ್ಳಲಾಗಿದೆ.
ನಗರದ ದಿಘೋರಿ ಪ್ರದೇಶದಲ್ಲಿ ಬಾಡಿಗೆ ಕೊಠಡಿಯಲ್ಲಿ ಬಾಲಕಿಯನ್ನು ಕಟ್ಟಿ ಹಾಕಿದ ನಿರ್ಮಯ್, ಪದೇ ಪದೇ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಪೊಲೀಸರು ಆಗಸ್ಟ್ 3ರಂದು ರಾತ್ರಿ ಕೋಣೆಯ ಬಾಗಿಲು ಒಡೆದು ಬಾಲಕಿಯನ್ನು ರಕ್ಷಿಸಿದ್ದಾರೆ.
ಬಾಲಕಿಯ ಮೊಬೈಲ್ ಅನ್ನು ವಶಪಡಿಸಿಕೊಂಡಿರುವ ಪೊಲೀಸರು, ಸಂದೇಶಗಳು, ಕರೆ ದಾಖಲೆಗಳು ಸೇರಿದಂತೆ ಮಾಹಿತಿಯನ್ನು ಸಂಗ್ರಹಿಸುತ್ತಿದ್ದಾರೆ.
ಆರೋಪಿ ನಿರ್ಮಯ್ ತನ್ನ ತಾಯಿ ಮತ್ತು ತಮ್ಮನೊಂದಿಗೆ ವಾಸಿಸುತ್ತಿದ್ದ. ಈತನಿಗೆ ಮನೋವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ. ವಿಚಾರಣೆ ವೇಳೆ ಎದೆನೋವು ಕಾಣಿಸಿಕೊಂಡಿದ್ದರಿಂದ ಆರೋಪಿಯನ್ನು ಬುಧವಾರ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

