HEALTH TIPS

ಜನಗಣತಿ ಜೊತೆಗೆ ಜಾತಿಗಣತಿ

ನವದೆಹಲಿ: 2027ರ ಜನಗಣತಿಯ ಸಂದರ್ಭದಲ್ಲಿ ಕೇಳಬೇಕಾದ 40 ಪ್ರಶ್ನೆಗಳನ್ನು ಕೇಂದ್ರ ಸರ್ಕಾರ ಶುಕ್ರವಾರ ಪ್ರಕಟಿಸಿದೆ. ಇದರಲ್ಲಿ ಜಾತಿಯನ್ನು ದಾಖಲಿಸುವ ಪ್ರಶ್ನೆಯೂ ಸೇರಿದೆ. ಸ್ವಾತಂತ್ರ್ಯಾನಂತರ ಮೊದಲ ಬಾರಿಗೆ ಜನಗಣತಿಯೊಂದಿಗೆ ಜಾತಿಗಣತಿಯೂ ನಡೆಯಲಿದೆ.

2011ರ ಜನಗಣತಿಯಲ್ಲಿ 29 ಪ್ರಶ್ನೆಗಳನ್ನು ಕೇಳಲಾಗಿತ್ತು.  


ಈ ಬಾರಿ ಕೇಳಲಾಗುವ ಪ್ರಶ್ನೆಗಳ ಸಂಖ್ಯೆ 40ಕ್ಕೆ ಏರಿದೆ. 'ಕೋವಿಡ್- 19 ಲಸಿಕೆ' ಹಾಕಿದ ಸ್ಥಳದ ವಿವರ, ಬ್ಯಾಂಕ್ ಖಾತೆಗಳ ಸಂಖ್ಯೆ, ಡಿಜಿಟಲ್ ಸಾಕ್ಷರತಾ ಸ್ಥಿತಿ, ಘೋಷಿಸಲಾದ ರಾಷ್ಟ್ರೀಯತೆ, ಪತ್ನಿಯ ಹೆಸರು ಮತ್ತು ಮೊಬೈಲ್ ಸಂಖ್ಯೆ, ಆಧಾರ್ ಸಂಖ್ಯೆ, ಮತದಾರರ ಗುರುತಿನ ಚೀಟಿ ಸಂಖ್ಯೆ, ಪಾಸ್‌ಪೋರ್ಟ್ ಸಂಖ್ಯೆ (ಲಭ್ಯವಿದ್ದರೆ) ಮುಂತಾದ ಹೊಸ ಪ್ರಶ್ನೆಗಳು ಸೇರಿವೆ.

ಇವುಗಳಲ್ಲಿ, ತಂದೆ ಮತ್ತು ತಾಯಿಯ ವಿವರ, ಮಾತೃಭಾಷೆ ಹೊರತುಪಡಿಸಿ ತಿಳಿದಿರುವ ಭಾಷೆಗಳು ಮತ್ತು ಶಾಶ್ವತ ವಸತಿ ವಿಳಾಸದಂತಹ ವೈಯಕ್ತಿಕ ವಿವರಗಳು ಸೇರಿವೆ.

ಜನಸಂಖ್ಯಾ ಗಣತಿಯು ಲಡಾಖ್, ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ ಹಾಗೂ ಉತ್ತರಾಖಂಡದಲ್ಲಿ ಸೆಪ್ಟೆಂಬರ್ 1ರಿಂದ 30ರವರೆಗೆ ನಡೆಯಲಿದೆ. ಆದರೆ, ಸ್ವಯಂ ಗಣತಿ ಹಂತವು ಆಗಸ್ಟ್ 17ರಿಂದ ಆರಂಭ ವಾಗುತ್ತದೆ. ದೇಶದ ಉಳಿದ ಭಾಗಗಳಲ್ಲಿ ಮುಂದಿನ ವರ್ಷ ಫೆಬ್ರುವರಿಯಲ್ಲಿ ಈ ಪ್ರಕ್ರಿಯೆ ನಡೆಯಲಿದೆ.

ಯಾವ ರೀತಿಯಲ್ಲಿ ಜಾತಿ ಎಣಿಕೆ ಮಾಡಲಾಗುತ್ತದೆ ಎಂಬುದರ ಕುರಿತು ಇಲ್ಲಿಯವರೆಗೆ ಸ್ಪಷ್ಟತೆ ಇರಲಿಲ್ಲ. ಇದೀಗ, ಗಣತಿಯ ಸ್ವರೂಪದ ಬಗ್ಗೆ ಸ್ಪಷ್ಟ ಚಿತ್ರಣ ಸಿಕ್ಕಿದೆ. ಜಾತಿಗಣತಿ ಈ ಹಿಂದೆ ನಡೆದಿದ್ದು 1931ರಲ್ಲಿ.

2011ರ ಸಾಮಾಜಿಕ-ಆರ್ಥಿಕ ಸಮೀಕ್ಷೆ ಮತ್ತು ಜನಗಣತಿಯಂತೆಯೇ, ಪ್ರಶ್ನಾವಳಿಯಲ್ಲಿ ಜಾತಿಗಳ ಪಟ್ಟಿ ಇರುವುದಿಲ್ಲ ಮತ್ತು ಪೌರರು ಹಂಚಿಕೊಂಡ ಮಾಹಿತಿಯನ್ನು ದಾಖಲಿಸ ಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಪ್ರಶ್ನಾವಳಿಯಲ್ಲಿ ಜಾತಿಯ ಉಪ ಪಂಗಡಗಳ ಬಗ್ಗೆ ಉಲ್ಲೇಖ ಇಲ್ಲ. ಜನರು ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡ ಅಥವಾ ಯಾವ ಜಾತಿಗೆ ಸೇರಿದವರು ಎಂಬ ಬಗ್ಗೆ ಮಾಹಿತಿ ನೀಡಬೇಕು. ಹೀಗಾಗಿ, ಗಣತಿದಾರರು ಉಪಜಾತಿಗಳು ಮತ್ತು ಇತರ ವಿವರಗಳಾಗಿ ಮತ್ತಷ್ಟು ವರ್ಗೀಕರಿಸಲು ಪ್ರಯತ್ನಿಸದೆಯೇ ಉತ್ತರವನ್ನು ಅಕ್ಷರಶಃ ದಾಖಲಿಸಲಿದ್ದಾರೆ.

2027ರ ಜನಗಣತಿಯ ಜಾತಿ ದತ್ತಾಂಶವು 2011ರ ಪ್ರಕ್ರಿಯೆ ಯಂತೆಯೇ ಕೊನೆಗೊಳ್ಳಬಹುದು ಎಂದು ಶಂಕಿಸಲಾಗಿದೆ. 2011ರ ಗಣತಿಯಲ್ಲಿ 46 ಲಕ್ಷಕ್ಕೂ ಹೆಚ್ಚು ಜಾತಿ ಹೆಸರುಗಳ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಆದರೆ, ಸರ್ಕಾರಿ ದತ್ತಾಂಶವು ಕೇವಲ 4,147 ಜಾತಿಗಳನ್ನು ದಾಖಲಿಸಿದೆ.

ಪ್ರಮುಖ ಅಂಶಗಳು

l 2027ರ ಜನಗಣತಿಯು ಭಾರತದ 16ನೇ ಜನಗಣತಿ ಮತ್ತು ಸ್ವಾತಂತ್ರ್ಯಾನಂತರದ 8ನೇ ಜನಗಣತಿ

l ಜಾತಿ ಜನಗಣತಿ ಈ ಹಿಂದೆ ನಡೆದಿದ್ದು 1931ರಲ್ಲಿ

l ಈ ಹಿಂದಿನ ಜನಗಣತಿ 2011ರಲ್ಲಿ

l 'ಕೋವಿಡ್ -19 ಸಾಂಕ್ರಾಮಿಕ ರೋಗ'ದ ಕಾರಣದಿಂದ 2021ರ ಜನಗಣತಿ ವಿಳಂಬ

l 2025 ಜೂನ್ 16: 2027ರ ಜನಗಣತಿಗೆ ಅಧಿಸೂಚನೆ ಹೊರಡಿಸಿದ್ದ ಕೇಂದ್ರ ಸರ್ಕಾರ

l 2026 ಜನವರಿ 22: ಮನೆಗಳ ಪಟ್ಟಿ ಮತ್ತು ವಸತಿ ಜನಗಣತಿಗಾಗಿ ಪ್ರಶ್ನಾವಳಿಯ ಅಧಿಸೂಚನೆ

l 2026 ಆಗಸ್ಟ್ 14: ಜನಗಣತಿಗಾಗಿ ಪ್ರಶ್ನಾವಳಿಯ ಅಧಿಸೂಚನೆ

l 2027ರ ಜನಗಣತಿಯ ಬಜೆಟ್: ₹11,718 ಕೋಟಿ

l ಗಣತಿಯಲ್ಲಿ 30 ಲಕ್ಷ ಕ್ಷೇತ್ರ ಕಾರ್ಯಕರ್ತರು ಭಾಗಿ

ಚರ್ಚೆ ಇಲ್ಲ, ಉದ್ದೇಶವೇ ಶಂಕಾಸ್ಪದ: ಕಾಂಗ್ರೆಸ್‌

ನವದೆಹಲಿ (ಪಿಟಿಐ): ಉದ್ದೇಶಿತ ಜಾತಿಗಣತಿ ಕುರಿತು ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್‌ ಪಕ್ಷವು ಶುಕ್ರವಾರ ಹರಿಹಾಯ್ದಿದೆ.

'ಈ ವಿಚಾರವಾಗಿ ರಾಜಕೀಯ ಪಕ್ಷಗಳೊಂದಿಗೆ ಸರ್ಕಾರ ಯಾವುದೇ ಸಮಾಲೋಚನೆ ನಡೆಸಿಲ್ಲ. ಹೀಗಾಗಿ, ಜಾತಿಗಣತಿ ನಡೆಸುವ ಸರ್ಕಾರದ ಉದ್ದೇಶದ ಬಗ್ಗೆಯೇ ಸಂಶಯ ಮೂಡುತ್ತಿದೆ' ಎಂದು ಟೀಕಿಸಿದೆ.

ಈ ಕುರಿತು 'ಎಕ್ಸ್‌'ನಲ್ಲಿ ಪೋಸ್ಟ್‌ ಮಾಡಿರುವ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್‌ ರಮೇಶ್‌, 'ಈ ಹಿಂದೆ ತೆಲಂಗಾಣ ಮತ್ತು ಬಿಹಾರದಲ್ಲಿ ನಡೆದ ಸಮೀಕ್ಷೆ ವೇಳೆ ಜಾತಿಗಳ ಪಟ್ಟಿ ಹಾಗೂ ಪ್ರಶ್ನಾವಳಿ ಸಿದ್ಧಪಡಿಸಲಾಗಿತ್ತು. ಜನ ನೀಡಿದ ಉತ್ತರವನ್ನು ಗುರುತು ಮಾಡಲಾಗುತ್ತಿತ್ತು. ಇದೇ ಮಾದರಿಯಲ್ಲಿ ಕೇಂದ್ರ ಸರ್ಕಾರ ಕೂಡ ಗಣತಿ ನಡೆಸಲಿದೆ ಎಂಬ ನಿರೀಕ್ಷೆ ಹುಸಿಯಾಗಿದೆ' ಎಂದು ಹೇಳಿದ್ದಾರೆ.

ಜಾತಿಗಣತಿ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕಳೆದ ವರ್ಷ ಮೇ 5ರಂದು ಬರೆದಿದ್ದ ಪತ್ರದ ಪ್ರತಿಯನ್ನು ಜೈರಾಮ್‌ ತಮ್ಮ ಪೋಸ್ಟ್‌ನೊಂದಿಗೆ ಹಂಚಿಕೊಂಡಿದ್ದಾರೆ.

'ಪ್ರಧಾನಿ ಮೋದಿ ಅವರಿಗೆ ಬರೆದ ಪತ್ರದಲ್ಲಿ ಖರ್ಗೆಯವರು ಕೆಲ ಸಲಹೆಗಳನ್ನು ನೀಡಿದ್ದರು. ತೆಲಂಗಾಣ ಮಾದರಿಯಲ್ಲಿ ಗಣತಿ ನಡೆಸಬೇಕು ಹಾಗೂ ಈ ವಿಚಾರವಾಗಿ ಎಲ್ಲ ರಾಜಕೀಯ ಪಕ್ಷಗಳೊಂದಿಗೆ ಚರ್ಚೆ ನಡೆಸಬೇಕು ಎಂದು ಹೇಳಿದ್ದರು. ಗಣತಿಗೆ ಸಂಬಂಧಿಸಿ ಸಮರ್ಪಕ ಪ್ರಶ್ನಾವಳಿ ಸಿದ್ಧಪಡಿಸಬೇಕು. ಜಾತಿವಾರು ಜನಸಂಖ್ಯೆಯ ಮಾಹಿತಿ ಸಂಗ್ರಹ ವಷ್ಟೇ ಗಣತಿಯ ಉದ್ದೇಶವಾಗಿರದೆ, ಸಾಮಾಜಿಕ- ಆರ್ಥಿಕ ಸಾಧನೆಯೇ ಗುರಿಯಾಗಿರಬೇಕು ಎಂದು ಖರ್ಗೆ ಪತ್ರದಲ್ಲಿ ಪ್ರತಿಪಾದಿಸಿದ್ದರು. ಈ ಸಲಹೆಗಳನ್ನು ಕೇಂದ್ರ ಸರ್ಕಾರ ಕಡೆಗಣಿಸಿದೆ' ಎಂದು ದೂರಿದ್ದಾರೆ.

'ಈ ಎಲ್ಲ ಅಂಶಗಳನ್ನು ಗಮನದಲ್ಲಿ ಇಟ್ಟುಕೊಂಡೇ ತೆಲಂಗಾಣದಲ್ಲಿ ಇತ್ತೀಚೆಗೆ ಜಾತಿ ಸಮೀಕ್ಷೆ ನಡೆಸಲಾಗಿತ್ತು. ಹೀಗಾಗಿ, ಪ್ರಸಕ್ತ ಗಣತಿಗೆ ಸಂಬಂಧಿಸಿ ಪ್ರಶ್ನಾವಳಿ ಅಂತಿಮ ಗೊಳಿಸುವಾಗ ತೆಲಂಗಾಣದಲ್ಲಿ ಅನುಸರಿಸಿದ್ದ ವಿಧಾನ ಮತ್ತು ಪ್ರಶ್ನೆಗಳನ್ನು ಪರಿಗಣಿಸಬೇಕು ಎಂದೂ ಖರ್ಗೆ ಪತ್ರದಲ್ಲಿ ವಿವರಿಸಿದ್ದರು' ಎಂದು ಪೋಸ್ಟ್‌ನಲ್ಲಿ ಹೇಳಿದ್ದಾರೆ. 






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries