ನವದೆಹಲಿ: ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯ (ಎಸ್‌ಐಆರ್) ಎರಡನೇ ಹಂತದಲ್ಲಿ ಹಲವು ಮತದಾರರನ್ನು 'ತಾರ್ಕಿಕ ವ್ಯತ್ಯಾಸ' ವರ್ಗದಡಿ ಗುರುತಿಸಲಾಗಿತ್ತು. ಆದರೆ ಈ 'ತಾರ್ಕಿಕ ವ್ಯತ್ಯಾಸ' ಎಂದರೆ ಏನು ಎನ್ನುವುದರ ಬಗ್ಗೆ ತನ್ನ ಬಳಿ ಯಾವುದೇ ಮಾಹಿತಿಯಿಲ್ಲ ಎಂದು ಚುನಾವಣಾ ಆಯೋಗವು (ಇಸಿಐ) ತಿಳಿಸಿದೆ ಎಂದು thenewsminute.com ವರದಿ ಮಾಡಿದೆ.
'ಮೈ ವೋಟ್, ಮೈ ರೈಟ್' ಎಂಬ ಸಾಮಾಜಿಕ ಸಂಘಟನೆಗಳ ಒಕ್ಕೂಟದ ಸದಸ್ಯರೋರ್ವರು ಇಸಿಐನ ಯಾವುದೇ ಅಧಿಕೃತ ದಾಖಲೆಗಳಲ್ಲಿ ತಾರ್ಕಿಕ ವ್ಯತ್ಯಾಸಗಳು ಎಂಬ ಪದದ ವ್ಯಾಖ್ಯಾನ ಇದೆಯೇ ಮತ್ತು ಎಸ್‌ಐಆರ್ ಪೂರ್ಣಗೊಂಡಿರುವ 10 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತದಾರರಿಗೆ ಎಷ್ಟು ನೋಟಿಸ್‌ಗಳನ್ನು ನೀಡಲಾಗಿದೆ ಎಂಬ ವಿವರವನ್ನು ಕೋರಿ ಆರ್‌ಟಿಐ ಕಾಯ್ದೆಯಡಿ ಅರ್ಜಿಯನ್ನು ಸಲ್ಲಿಸಿದ್ದರು.
ನೀವು ಕೋರಿದ ಮಾಹಿತಿಯು ಆಯೋಗದಲ್ಲಿ ಲಭ್ಯವಿಲ್ಲ. ಇದು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಚುನಾವಣಾಧಿಕಾರಿಗಳ (ಸಿಇಒ) ಕಚೇರಿಯಲ್ಲಿ ಲಭ್ಯವಿರಬಹುದು ಎಂದು ಇಸಿಐ ಆಗಸ್ಟ್ 13ರಂದು ನೀಡಿದ ತನ್ನ ಉತ್ತರದಲ್ಲಿ ತಿಳಿಸಿದೆ.
ಎಸ್‌ಐಆರ್‌ನ 2ನೇ ಹಂತದ ಸಂದರ್ಭದಲ್ಲಿ ಇಸಿಐ ಮತದಾರರ ವಿವರಗಳಲ್ಲಿ ವ್ಯತ್ಯಾಸಗಳಿವೆ ಎಂದು ಗುರುತಿಸಿ, ಅವರಿಗೆ ನೋಟಿಸ್‌ಗಳನ್ನು ನೀಡುವ ಪ್ರಕ್ರಿಯೆಯನ್ನು ಹೊಸದಾಗಿ ಆರಂಭಿಸಿತ್ತು. ತಮ್ಮ ಮತದಾನದ ಅರ್ಹತೆಯನ್ನು ಸಾಬೀತುಪಡಿಸಲು 11 ನಿಗದಿಪಡಿಸಿದ ದಾಖಲೆಗಳಲ್ಲಿ ಒಂದನ್ನು ಸಲ್ಲಿಸುವಂತೆ ಈ ಮತದಾರರಿಗೆ ಸೂಚಿಸಲಾಗಿತ್ತು. ಅನೇಕ ಮತದಾರರಿಗೆ ಅವರ ದಾಖಲೆಗಳಲ್ಲಿ ಅಸಂಗತತೆಗಳು ಕಂಡುಬಂದಿವೆ ಅಥವಾ ತಾರ್ಕಿಕ ವ್ಯತ್ಯಾಸಗಳು ಕಂಡುಬಂದಿವೆ ಎಂದು ತಿಳಿಸಲಾಗಿತ್ತು.
ಅಂದಿನಿಂದ, ಮತದಾರರನ್ನು ಗುರುತಿಸಲು ಬಳಸಲಾದ ತಂತ್ರಾಂಶ ಮತ್ತು ಮಾನದಂಡಗಳ ಕುರಿತು ಮಾಧ್ಯಮ ವರದಿಗಳು ಪ್ರಶ್ನೆಗಳನ್ನು ಎತ್ತಿವೆ. ಹೆಸರುಗಳ ಕಾಗುಣಿತದಲ್ಲಿನ ವ್ಯತ್ಯಾಸಗಳು ಅಥವಾ ಮತದಾರ ಮತ್ತು ಅವರ ಪೋಷಕರ ನಡುವಿನ ವಯಸ್ಸಿನ ಅಂತರವು 15 ವರ್ಷಗಳಿಗಿಂತ ಕಡಿಮೆಯಿರುವಂತಹ ವ್ಯತ್ಯಾಸಗಳಿಗಾಗಿ ಮತದಾರರನ್ನು ಗುರುತಿಸಲಾಗಿದೆ ಎಂದು ವರದಿಗಳು ಸೂಚಿಸಿವೆ.
ಕರ್ನಾಟಕದಲ್ಲಿ ಇಂತಹ ವ್ಯತ್ಯಾಸಗಳನ್ನು ಗುರುತಿಸಲು 10 ಮಾನದಂಡಗಳನ್ನು ಬಳಸಿರಬಹುದು ಎಂದು ಸುದ್ದಿಸಂಸ್ಥೆಯು ವರದಿ ಮಾಡಿದೆ. ಆದಾಗ್ಯೂ ಮತದಾರರನ್ನು ಯಾವ ಮಾನದಂಡಗಳ ಅಡಿ ಗುರುತಿಸಲಾಗುತ್ತಿದೆ ಎನ್ನುವುದನ್ನು ವ್ಯಾಖ್ಯಾನಿಸುವ ಯಾವುದೇ ಸುತ್ತೋಲೆ ಅಥವಾ ಆದೇಶವನ್ನು ಇಸಿಐ ಸಾರ್ವಜನಿಕವಾಗಿ ಹೊರಡಿಸಿಲ್ಲ.
ತಾರ್ಕಿಕ ವ್ಯತ್ಯಾಸಗಳು ವರ್ಗದ ಅಡಿಯಲ್ಲಿ ಮತದಾರರನ್ನು ಯಾವ ಆಧಾರದ ಮೇಲೆ ಗುರುತಿಸಲಾಗಿದೆ ಮತ್ತು ಹೆಚ್ಚುವರಿ ದಾಖಲೆಗಳ ಅವಶ್ಯಕತೆಗೆ ಒಳಪಡಿಸಲಾಗಿದೆ ಎಂಬ ಪ್ರಶ್ನೆಗಳನ್ನು ಇಸಿಐನ ಆರ್‌ಟಿಐ ಉತ್ತರವು ಹುಟ್ಟುಹಾಕಿದೆ ಎಂದು ಒಕ್ಕೂಟ ಹೇಳಿದೆ.
ಈ ವರ್ಗದ ವ್ಯಾಖ್ಯಾನ ಅಥವಾ ನೀಡಲಾದ ನೋಟಿಸ್‌ಗಳ ಸಂಖ್ಯೆಯ ಕುರಿತು ತನ್ನ ಬಳಿಯೇ ಮಾಹಿತಿಯಿಲ್ಲ ಎಂದು ಇಸಿಐ ಹೇಳುತ್ತಿರುವಾಗ ಇಂತಹ ಪ್ರಕ್ರಿಯೆಯನ್ನು ಹೇಗೆ ಅನುಷ್ಠಾನಗೊಳಿಸಲಾಯಿತು ಎಂದೂ ಅದು ಪ್ರಶ್ನಿಸಿದೆ.
ಮತದಾರರನ್ನು ಗುರುತಿಸುವ ಮಾನದಂಡಗಳು ಮತ್ತು ದಾಖಲೆಗಳ ಕುರಿತು ಸ್ಪಷ್ಟತೆಯ ಕೊರತೆಯು ಎಸ್‌ಐಆರ್ ಪ್ರಕ್ರಿಯೆಯ ಪಾರದರ್ಶಕತೆಗೆ ಧಕ್ಕೆ ತರುತ್ತದೆ ಮತ್ತು ತಮ್ಮ ಅರ್ಹತೆಯನ್ನು ಸಾಬೀತುಪಡಿಸಲು ಬಯಸುವ ಮತದಾರರ ಮೇಲೆ ಹೆಚ್ಚುವರಿ ಹೊರೆಯಾಗಬಹುದು ಎಂದು 'ಮೈ ವೋಟ್, ಮೈ ರೈಟ್' ಹೇಳಿದೆ.

