ಚಂಡೀಗಢ: ಅಯೋಧ್ಯೆಯಲ್ಲಿ ನಡೆದಿದ್ದ ಬಾಬರಿ ಮಸೀದಿ ಧ್ವಂಸ ಪ್ರಕರಣದ ವಿಚಾರಣಾ ಆಯೋಗದ ಮುಖ್ಯಸ್ಥರಾಗಿದ್ದ ನಿವೃತ್ತ ನ್ಯಾಯಮೂರ್ತಿ ಮನಮೋಹನ್ ಸಿಂಗ್ ಲಿಬರ್ಹಾನ್ (87) ಅವರು ನಿಧನರಾಗಿದ್ದಾರೆ.
ಪಂಜಾಬ್ ಹರಿಯಾಣ ಹೈಕೋರ್ಟ್‌ನ ಬಾರ್ ಅಸೋಸಿಯೇಷನ್ ಅಧ್ಯಕ್ಷರಾದ ರೋಹಿತ್ ಸೂದ್ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ.
1964ರಲ್ಲಿ ಪಂಜಾಬ್ ಹರಿಯಾಣ ಹೈಕೋರ್ಟ್‌ನಲ್ಲಿ ವಕೀಲ ವೃತ್ತಿ ಆರಂಭಿಸಿದ ಸಿಂಗ್, 1987ರ ಫೆಬ್ರುವರಿ 11ರಂದು ಅದೇ ಹೈಕೋರ್ಟ್‌ನ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದರು. ನಂತರ ಮದ್ರಾಸ್ ಹೈಕೋರ್ಟ್, ಆಂಧ್ರ ಪ್ರದೇಶ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿಯೂ ಕಾರ್ಯನಿರ್ವಹಿಸಿದ್ದರು.
1992ರ ಡಿಸೆಂಬರ್ 16ರಂದು ಅವರನ್ನು ಬಾಬರಿ ಮಸೀದಿ ಧ್ವಂಸ ಕುರಿತ ವಿಚಾರಣಾ ಆಯೋಗದ ಮುಖ್ಯಸ್ಥರನ್ನಾಗಿ ನೇಮಿಸಲಾಗಿತ್ತು.

