ಮಂಜೇಶ್ವರ: ಮೀಯಪದವು ಶ್ರೀ ವಿದ್ಯಾವರ್ಧಕ ಹೈಯರ್ ಸೆಕೆಂಡರಿ ಶಾಲೆಯಲ್ಲಿ 80ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಶಾಲಾ ಪ್ರಬಂಧಕ ಡಾ ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಧ್ವಜಾರೋಹಣಗೈದರು. ಸ್ವಾತಂತ್ರ್ಯೋತ್ಸವದ ಅಂಗವಾಗಿ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ದೇಶ ಕಟ್ಟುವಲ್ಲಿ ಪ್ರತಿಯೊಬ್ಬನ ಹೊಣೆಯು ಮಹತ್ತರವಾದುದು. ಎಳೆಯರಲ್ಲಿ ರಾಷ್ಟ್ರ ಪ್ರಜ್ಞೆ ಜಾಗೃತವಾಗಬೇಕು. ಸ್ವಾತಂತ್ರ್ಯವು ಮುಕ್ತ ಚಿಂತನೆಗಳಾಗಿ ಅಭಿವ್ಯಕ್ತಗೊಳ್ಳಲಿ. ಆ ಮೂಲಕ ರಾಷ್ಟ್ರವು ಅಭಿವೃದ್ಧಿಗೊಳ್ಳಲಿ ಎಂದು ಅಭಿಪ್ರಾಯಪಟ್ಟರು.
ಮುಖ್ಯ ಅತಿಥಿಗಳಾದ ಶಾಲಾ ಹಳೆ ವಿದ್ಯಾರ್ಥಿ ಶಿವಶಂಕರ ಕಾನ ಬಾಲ್ಯ ಕಾಲದ ತನ್ನ ಶಾಲಾ ಅನುಭವಗಳನ್ನು ತೆರೆದಿಡುತ್ತಾ, ವಿವಿಧತೆಯಲ್ಲಿ ಏಕತೆ ಎಂಬ ಧ್ಯೇಯದ ಭಾರತ ಇತಿಹಾಸವು ಅದಮ್ಯವಾದುದು, ಸ್ವಾತಂತ್ರ್ಯದಿನದಲ್ಲಿ ನಾವು ಹಿರಿಯರು ದೇಶಕ್ಕಾಗಿ ನೀಡಿದ ಕೊಡುಗೆಗಳನ್ನು ಗೌರವಿಸಬೇಕು ಎಂದು ಕರೆನೀಡಿದರು.
ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಹಮೀದ್ ಮೈತಾಳ, ವಾರ್ಡ್ ಸದಸ್ಯ ಸಿದ್ದಿಕ್, ಮಾತೃ ಮಂಡಳಿ ಉಪಾಧ್ಯಕ್ಷೆ ಸ್ವಪ್ನ, ಶಾಲಾ ಪ್ರಾಶುಪಾಲ ರಮೇಶ ಕೆ.ಎನ್ ಶುಭ ಹಾರೈಸಿದರು. 2025-26 ನೇ ಶೈಕ್ಷಣಿಕ ವರ್ಷದ ಎಲ್ಲಾ ವಿಷಯಗಳಲ್ಲಿ ಎ ಪ್ಲಸ್ ಪಡೆದ ವಿದ್ಯಾರ್ಥಿಗಳಿಗೆ ಕಾನ, ದಿ.ನಾರಾಯಣ ಭಟ್, ಗೌರಿ ಅಮ್ಮ ಸ್ಮರಣಾರ್ಥ, ತೊಟ್ಟೆತ್ತೋಡಿ ನಾರಾಯಣ ಭಟ್, ಕೇಶವ ಭಟ್ ಸ್ಮರಣಾರ್ಥ ನಗದು ಪುರಸ್ಕಾರ, ಪ್ರಮಾಣ ಪತ್ರ, ಕೊಡ್ಲಮೊಗರು ಶಾಲೆಯ ನಿವೃತ್ತ ಸಂಸ್ಕೃತ ಶಿಕ್ಷಕಿ ನಿರ್ಮಲ ಅವರು ನೀಡಿದ ದತ್ತಿ ನಿಧಿ ಪುರಸ್ಕಾರಗಳನ್ನು ಮಕ್ಕಳಿಗೆ ಕಾರ್ಯಕ್ರಮದಲ್ಲಿ ನೀಡಲಾಯಿತು. ಪ್ರೌಢ ಶಾಲಾ ಮುಖ್ಯ ಶಿಕ್ಷಕಿ ಮೃದುಲ ಸ್ವಾಗತಿಸಿ, ಉಪ ಪ್ರಾಶುಪಾಲ ರವಿಲೋಚನ ಚೆಕ್ಕೆಮನೆ ವಂದಿಸಿದರು. ಉನ್ನತ ಪ್ರೌಢಶಾಲಾ ಆಂಗ್ಲ ಶಿಕ್ಷಕಿ ಗೀತಾ ನಿರೂಪಿಸಿದರು.

.jpg)
.jpg)
