ಕಾಸರಗೋಡು: ಜಿಲ್ಲೆಯಲ್ಲಿ ಬಿರುಸಿನ ಮಳೆ ಮುಂದುವರಿದಿದ್ದು, ಹೊಳೆಗಳಲ್ಲಿ ನೀರಿನ ಪ್ರಮಾಣ ಮತ್ತೆ ಏರಿಕೆಯಾಗತೊಡಗಿದೆ. ಗುರುವಾರ ಅಲ್ಪ ತಗ್ಗಿದ್ದ ಮಳೆ, ಶುಕ್ರವರ ಬೆಳಗ್ಗಿಂದ ಮತ್ತೆ ಬಿರುಸುಪಡೆದುಕೊಂಡಿದೆ. ನಿರಂತರ ಮಳೆಗೆ ಕಾಸರಗೋಡು ನಗರದ ಹಲವು ರಸ್ತೆಗಳು ಹದಗೆಟ್ಟು ವಾಹನ ಸಂಚಾರಕ್ಕೆ ಸಮಸ್ಯೆ ಸೃಷ್ಟಿಯಾಗಿದೆ. ತಿಂಗಳುಗಳ ಹಿಂದೆಯಷ್ಟೇ ನೆಲ್ಲಿಕುಂಚೆ ಬಂದರು ಹಾಗೂ ಲೈಟ್‍ಹೌಸ್ ಭಾಗದತ್ತ ಸಾಗುವ ಬೀಚ್ ರಸ್ತೆಗೆ ಮೆಕ್ಕಡಾಂ ಡಾಂಬರೀಕರಣ ನಡೆಸಲಾಗಿದ್ದು, ಎರಡು ವಾರದ ನಿರಂತರ ಮಳೆಗೆ ಬಹುತೇಕ ಹಾನಿಗೀಡಾಗಿದೆ. ರಸ್ತೆಯಲ್ಲಿ ಬೃಹತ್ ಹೊಂಡಗಳು ಸೃಷ್ಟಿಯಾಗಿದ್ದು ಆಟೋರಿಕ್ಷಾ ಹಾಗೂ ದ್ವಿಚಕ್ರ ವಾಹನ ಸವಾರರಪಾಲಿಗೆ ನರಕಯಾತನೆ ಅನುಭವಿಸಬೇಕಾಗಿದೆ. ರಸ್ತೆ ಕೆಲವೆಡೆ ಅಳವಡಿಸಲಾಗಿದ್ದ ಇಂಟರ್‍ಲಾಕ್ ಹೂತುಕೊಂಡಿದ್ದರೆ, ನೀರಿನ ಪೈಪುಗಳು ಬಿರುಕುಬಿಟ್ಟಿದೆ. ನಗರದ ಎಂಜಿ ರಸ್ತೆಯೂ ಮಳೆಗೆ ಶಿಥಿಲಗೊಂಡಿದೆ.
ನಿರಂತರ ರಜೆ:
ಬಿರುಸಿನ ಮಳೆ ಹಿನ್ನೆಲೆಯಲ್ಲಿ ಶುಕ್ರವಾರವೂ ಶಿಕ್ಷಣ ಸಂಸ್ಥೆಗಳಿಗೆ ರಜೆ ಸಾರಲಾಗಿತ್ತು. ಆ. 7ರಿಂದಶಿಕ್ಷಣ ಸಂಸ್ಥೆಗಳಿಗೆ ನಿರಂತರ ರಜೆಯ ನಂತರ ಗುರುವಾರ ಶಾಲೆ ಪುನಾರಂಭಗೊಂಡಿದ್ದರೂ, ಕೇಂದ್ರ ಹವಾಮಾನ ಇಲಾಖೆ ಮುನ್ಸೂಚನೆಯನ್ವಯ ಶುಕ್ರವಾರ ಮತ್ತೆ ರಜೆ ಘೋಷಿಸಲಾಗಿತ್ತು. ರಾಜ್ಯಾದ್ಯಂತ ಆ. 13ರಿಂದ ಓಣಂ ಪರೀಕ್ಷೆ ಆರಂಭಗೊಳ್ಳುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಪಾಲಿಗೆ ಸಮಸ್ಯೆ ಎದುರಾಗಲಿದೆ. ಬೇಸಿಗೆ ರಜೆ ಕಳೆದು ಶಾಲಾ ತರಗತಿ ಪುನಾರಂಭಗೊಂಡ ನಂತರ ಬಿರುಸಿನ ಮಳೆ ಹಿನ್ನೆಲೆಯಲ್ಲಿ ಹತ್ತರಷ್ಟು ರಜೆ ನೀಡಲಾಗಿದೆ. ಜಿಲ್ಲೆಯಲ್ಲಿ ಬಿರುಸಿನ ಮಳೆ ಹಿನ್ನೆಲೆಯಲ್ಲಿ ಆ.8ರ ಬೆಳಗ್ಗೆ 10ರ ವರೆಗೂ ರೆಡ್ ಅಲರ್ಟ್ ಘೋಷಿಸಲಾಗಿದೆ.



