ಕಾಸರಗೋಡು: ಉದ್ಯೋಗಾಕಾಂಕ್ಷಿ ಯುವ ಜನತೆಯನ್ನು ಮತ್ತು ಪಿ.ಎಸ್.ಸಿ ರ್ಯಾಂಕ್ ವಿಜೇತರನ್ನು ವಂಚಿಸುವ ವಿಚಾರದಲ್ಲಿ ವಿ.ಡಿ. ಸತೀಶನ್ ಸರ್ಕಾರವು ಪಿಣರಾಯಿ ಸರ್ಕಾರದ ಹಾದಿಯನ್ನೇ ಅನುಸರಿಸುತ್ತಿದ್ದು, ಕೇರಳ ಲೋಕಸೇವಾ ಆಯೋಗ(ಪಿಎಸ್‍ಸಿಇಂದು "ಪಿಣರಾಯಿ-ಸತೀಶನ್ ಸರ್ವೀಸ್ ಕಮಿಷನ್" ಆಗಿ ಅಧೋಗತಿಗೆ ತಲುಪಿದೆ ಎಂದು ಯುವಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ವರುಣ್ ಪ್ರಸಾದ್ ಟೀಕಿಸಿದ್ದಾರೆ.
ಅವರು ಪಿ.ಎಸ್.ಸಿ ಅಕ್ರಮಗಳ ವಿರುದ್ಧ ಯುವಮೋರ್ಚಾ ಕಾಸರಗೋಡು ಜಿಲ್ಲಾ ಸಮಿತಿ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಎದುರು ಹಮ್ಮಿಕೊಂಡಿದ್ದ ಪ್ರತಿಭಟನಾ ಧರಣಿ ಉದ್ಘಾಟಿಸಿ ಮಾತನಾಡಿದರು. ಪಿಣರಾಯಿ ವಿಜಯನ್ ನೇತೃತ್ವದ ಹಿಂದಿನ ಎಡರಂಗ ಸರ್ಕಾರ ಮತ್ತು ವಿ.ಡಿ. ಸತೀಶನ್ ಮುನ್ನಡೆಸುತ್ತಿರುವ ಐಕ್ಯರಂಗ ಸರ್ಕಾರ ಉದ್ಯೋಗಾಕಾಂಕ್ಷಿಗಳ ಜೀವನದ ಜೊತೆ ಚೆಲ್ಲಾಡಟವಾಡುವುದನ್ನು ಕೊನೆಗೊಳಿಸಬೇಕು. ಉಭಯರಂಗಗಳ ವಿರುದ್ಧ ಯುವಮೋರ್ಚಾ ಮುಂಬರುವ ದಿನಗಳಲ್ಲಿ ಹೋರಾಟ ತೀವ್ರಗೊಳಿಸಲಿರುವುದಾಗಿ ತಿಳಿಸಿದರು.
ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ಮುಖ್ಯ ಭಾಷಣ ಮಾಡಿ, ರಾಜ್ಯದಿಂದ ಹೊರಗೆ ನಡೆಯುತ್ತಿರುವ ಹೋರಾಟಗಳಲ್ಲಿ ಪಾಲ್ಗೊಳ್ಳುತ್ತಿರುವ ಶಾಸಕರು, ಸಚಿವರುಗಳಿಗೆ ರಾಜ್ಯದ ಯುವಜನತೆಯ ಸಮಸ್ಯೆ ಪರಿಹರಿಸಲು ಸಾಧ್ಯವಾಗದಿರುವುದು ಖಂಡನೀಯ ಎಂದುತಿಳಿಸಿದರು. ಯುವಮೋರ್ಚಾ ಜಿಲ್ಲಾಧ್ಯಕ್ಷ ಅಶ್ವಿನ್ ಕೊಲ್ಲಾಲಯಿಲ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಆರ್. ಸುನಿಲ್, ಜಿಲ್ಲಾ ಕಾರ್ಯದರ್ಶಿ ಮಹೇಶ್ ಗೋಪಾಲ್, ಯುವಮೋರ್ಚಾ ರಾಜ್ಯ ಉಪಾಧ್ಯಕ್ಷೆ ಶ್ರುತಿ ಎನ್.ವಿ., ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ವಕೀಲ ಧನುಷ್ ಹೆಚ್.ಎನ್, ಶ್ರುತಿ ವಿನೋದ್, ಜಿಲ್ಲಾ ಸಮಿತಿ ಸದಸ್ಯೆ ಸುಮಿ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಕೆ.ಎಸ್. ರಮಣಿ, ಎಸ್.ಟಿ. ಮೋರ್ಚಾ ಜಿಲ್ಲಾಧ್ಯಕ್ಷ ನಾರಾಯಣ ನಾಯ್ಕ್ ಹಾಗೂ ನೀಲೇಶ್ವರಂ ಮಂಡಲ ಸಮಿತಿ ಅಧ್ಯಕ್ಷ ಸಾಗರ್ ಚಾತ್ತಮತ್ ಉಪಸ್ಥಿತರಿದ್ದರು.
ಧರಣಿಗೂ ಮೊದಲು ಬಿ.ಸಿ. ರೋಡ್ ಜಂಕ್ಷನ್‍ನಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು. ಪೊಲೀಸರ ತಡೆ ಭೇದಿಸಿ ಮುನ್ನುಗ್ಗಲೆತ್ನಿಸಿದ ಪ್ರತಿಭಟನಾಕಾರರನ್ನು ಪೊಲೀಸರು ಜಲಫಿರಂಗಿ ಪ್ರಯೋಗಿಸಿ ಚದುರಿಸಿದರು.



